Namma Metro: ಹಳದಿ ಮಾರ್ಗಕ್ಕೆ ಚೀನಾ ಬೋಗಿ ಸಿಕ್ಕರೂ ಫೆಬ್ರುವರಿಗೆ ಆರಂಭವಾಗಲ್ಲ, ಮತ್ತೆ ವಿಳಂಬ ಏಕೆ?
ಬೆಂಗಳೂರು, ಡಿಸೆಂಬರ್ 14: ರಾಜಧಾನಿಯಲ್ಲಿ ಜಾಲ ವಿಸ್ತರಣೆ ಮಾಡಿಕೊಳ್ಳುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗೆ ಆರ್‌ವಿ ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ (RV Road-Bommasandra Metro Yellow Line) ವಾಣಿಜ್ಯ ಕಾರ್ಯಾಚರಣೆ ಶೀಘ್ರ ಆರಂಭವು ನಿಗದಿತ ಗಡುವಿಗಿಂತಲೂ ತಡವಾಗಿ ಆರಂಭವಾಗುವ ಮುನ್ಸೂಚನೆಗಳು ಲಭಿಸಿವೆ ಎಂದು 'ಡಿಎಚ್' ವರದಿ ಮಾಡಿದೆ.
ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ದಕ್ಷಿಣ ಬೆಂಗಳೂರಿನ ಇತರ ಭಾಗಗಳನ್ನು ಸಂಪರ್ಕಿಸುವ ನಮ್ಮ ಮೆಟ್ರೋ (Namma Metro) ಈ ಹಳದಿ ಮಾರ್ಗವು ಮುಂದಿನ ವರ್ಷ ಫೆಬ್ರುವರಿಗೆ 2024ಕ್ಕೆ ವಾಣಿಜ್ಯ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಲಾಗಿತ್ತು.

ಈ ಮಧ್ಯೆ ಚೀನಾದಿಂದ ಪೂರೈಕೆ ಆಗಬೇಕಿದ್ದ ಮೆಟ್ರೋ ಬೋಗಿಗಳ ವಿಳಂಬದಿಂದಾಗಿ ಈ ಮಾರ್ಗದ ಲೋಕಾರ್ಪಣೆ ತಡವಾಗಿದೆ ಎಂದು ಹೇಳಲಾಗಿತ್ತು. ಇದೀಗ ಚೀನಾದಿಂದ ನಮ್ಮ ಮೆಟ್ರೋ ಬೋಗಿ ಪೂರೈಕಾ ಕಂಪನಿ ಸಿಬ್ಬಂದಿಗೆ ಭಾರತ ವೀಸಾ ನೀಡಿದೆ. ಹೀಗಿದ್ದರೂ ಸಹ ನಮ್ಮ ಮೆಟ್ರೋ ಹಳದಿ ಮಾರ್ಗವು ನಾಲ್ಕೈದು ತಿಂಗಳ ತಡವಾಗಬಹದು ಎಂದು ಹೇಳಲಾಗುತ್ತಿದೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಕಾರ, ಹಳದಿ ಮಾರ್ಗದ ಮೂಲ ಮಾದರಿಯ ರೈಲುಗಳು ಗುರುವಾರ ಚೀನಾದಿಂದ ಬಂದು ಬೆಂಗಳೂರು ಸೇರಲಿವೆ. ಆದರೆ ಲೋಕಸಭಾ ಚುನಾವಣೆ ಪ್ರಯುಕ್ತ ಫೆಬ್ರುವರಿಗೆ ಈ ಮಾರ್ಗದಲ್ಲಿ ರೈಲುಗಳು ವಾಣಿಜ್ಯ ಸೇವೆ ನೀಡುವುದು ಅನುಮಾನ ಎನ್ನಲಾಗಿದೆ.
ಪ್ರಾಯೋಗಿಕ ಪರೀಕ್ಷೆಗೆ ಅನುಮೋದನೆ ಪಡೆಯಬೇಕಿದೆ
ಈಗಾಗಲೇ ಆರು ಬೋಗಿಗಳ ರೈಲು ಸೆಟ್‌ನ ಸಾಗಣೆಗೆ ಡೆಕ್‌ಗಳನ್ನು ತೆರವುಗೊಳಿಸಲಾಗಿದೆ. ಚೀನಾದಿಂದ ಮೆಟ್ರೋ ಬೋಗಿ ಸ್ವೀಕರಿಸಿದ ನಂತರ ಹಳದಿ ಮಾರ್ಗದಲ್ಲಿ ಅವರುಗಳ ಪ್ರಾಯೋಗಿಕ ಪರೀಕ್ಷೆಗೆ ಅನುಮೋದನೆ ಪಡೆಯಲು ಸುಮಾರು ಮೂರು ತಿಂಗಳು ಕಾಲಾವಕಾಶ ಹಿಡಿಯುತ್ತದೆ ಎಂದು BMRCL ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ್ ಚೌವಾಣ್ ಮಾಹಿತಿ ನೀಡಿದ್ದಾರೆ.
ಸಾರ್ವತ್ರಿಕ ಚುನಾವಣೆ ಬಳಿಕ ಈ ಮಾರ್ಗ ಮುಕ್ತ?
ಫೆಬ್ರುವರಿಗೆ ಲೋಕಾರ್ಪಣೆ ಮಾಡಬೇಕು ಎಂದುಕೊಂಡಿದ್ದ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಮೂರು ತಿಂಗಳ ನಂತರ ಆಗುವ ನಿರೀಕ್ಷೆ ಇದೆ. ನಂತರ ಸಿಗ್ನಲಿಂಗ್ ಸೇರಿದಂತೆ ಇನ್ನಿತರ ತಾಂತ್ರಿಕತೆ ಪರಿಶೀಲಿಸುವ ಹೊತ್ತಿಗೆ ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ. ಇದರಿಂದ ಹಳದಿ ಮಾರ್ಗದ ಆರಂಭವು ಇನ್ನಷ್ಟು ವಿಳಂಬವಾಗಲಿದೆ. ಸಾರ್ವತ್ರಿಕ ಚುನಾವಣೆ ಬಳಿಕ ಹಳದಿ ಮಾರ್ಗ ಪ್ರಯಾಣಿಕರಿಗೆ ಮುಕ್ತವಾಗುವ ಸಾಧ್ಯತೆಗಳು ಇವೆ.

ಒಟ್ಟು 19.15-ಕಿಮೀ ಹಳದಿ ಮಾರ್ಗವು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದು ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಂಪರ್ಕಿಸುತ್ತದೆ. ಈಗಾಗಲೇ ನಿರ್ಮಾಣದ ಕೆಲಸಗಳು ಶೇಕಡಾ 99.7% ಪೂರ್ಣಗೊಂಡಿವೆ.
ಒಪ್ಪಂದಂತೆ ಚೀನಾ ಮೆಟ್ರೋ ಬೋಗಿಗಳು ಬರಲಿವೆ
2020 ರಲ್ಲಿ ನಮ್ಮ ಮೆಟ್ರೋ ಹಾಗೂ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಜೊತೆಗೆ ಮಾಡಿಕೊಂಡ ಒಪ್ಪಂದದಂತೆ BMRCL ಗೆ ಒಟ್ಟು 216 ಕೋಚ್‌ಗಳ 36 ರೈಲು ಸೆಟ್‌ಗಳು ಲಭಿಸಲಿವೆ. ಸದ್ಯ ಆರ್ ವಿ ರಸ್ತೆಯಲ್ಲಿ ಮೊದಲ ಸೆಟ್‌ಗಳು ಕಾರ್ಯಚರಣೆ ನಡೆಸಲಿವೆ.
ಈ ಒಪ್ಪಂದಂತೆ ಚೀನಾದ ರೈಲುಗಳನ್ನು ಕೆಲವು ನೇರಳೆ ಮತ್ತು ಹಸಿರು ಮಾರ್ಗದಲ್ಲಿ ನಿಯೋಜಿಸಲು ನಮ್ಮ ಮೆಟ್ರೋ ಚಿಂತನೆ ನಡೆಸಿದೆ. ಉಳಿದವುಗಳು ಹಳದಿ ಮಾರ್ಗದಲ್ಲಿ ಓಡಿಸಲಿದೆ. ಲಾಕ್‌ಡೌನ್ ಜೊತೆಗೆ ನಿರ್ಮಾಣ ಘಟಕ ಹುಡುಕುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ನಿರ್ದಿಷ್ಟ ಸಮಯದಲ್ಲಿ ಬಿಎಂಆರ್‌ಸಿಎಲ್‌ಗೆ ಚೀನಾ ಸಂಸ್ಥೆ ಬೋಗಿಗಳನ್ನು ಪೂರೈಕೆ ಮಾಡಲಿಲ್ಲ.
ಮೆಟ್ರೋ ಬೋಗಿ ಪೂರೈಕೆ ವಿಳಂಬ
ಇದೀಗ ಚೀನಾ ಸಂಸ್ಥೆ 204 ಕೋಚ್‌ಗಳನ್ನು ತಯಾರಿಸಲು ಬಂಗಾಳ ಮೂಲದ ಟಿಟಾಗರ್ ವ್ಯಾಗನ್ಸ್ ಲಿಮಿಟೆಡ್ ಜತೆ ಒಪ್ಪಂದಿ ಮಾಡಿಕೊಂಡಿದ್ದು, ಅದರಂತೆ ಬೋಗಿಗಳನ್ನು ಪೂರೈಕೆ ಮಾಡಲಿದೆ. ಮೆಟ್ರೋ ಬೋಗಿಗಳ ಪೂರೈಕೆ ವಿಳಂಬವು ಹಳದಿ ಮಾರ್ಗದ ಆರಂಭದ ಮೇಲೂ ತಕ್ಕಮಟ್ಟಿನ ಪರಿಣಾಮ ಭೀರಿತು.
ಸದ್ಯ ಚೀನಾದಿಂದ ಬಂದಿರುವ ಪ್ರೊಟೊಟೈಪ್ ರೈಲುಗಳು ಸಾಗಣೆಗೆ ಸಿದ್ಧವಾಗಿವೆ. ಅವು ರಾಜಧಾನಿ ತೆಲುಪಿದ ಮೇಲೆ ಅವುಗಳ ಅಗತ್ಯ ಮತ್ತು ಸಮಗ್ರ ಪರೀಕ್ಷೆ ನಡೆಸುತ್ತೇವೆ. ಟ್ರೇನ್ಸೆಟ್ ಮತ್ತು ಸಿಗ್ನಲಿಂಗ್ ನಡುವೆ ಸರಿಯಾದ ಇಂಟರ್‌ಫೇಸಿಂಗ್ ಇರಬೇಕು. ಇದಕ್ಕೆ ಅದರದ್ದೆ ಆದಂತಹ ಮಾನದಂಡಗಳಿವೆ. ಅಲ್ಲದೇ ಪರೀಕ್ಷೆಯ ಸಮಯದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದ್ದೇ ಆದಲ್ಲಿ ಅವುಗಳನ್ನು ಸರಿಪಡಿಸಿಕೊಂಡು ಮತ್ತೆ ಶಾಸನಬದ್ಧ ಸುರಕ್ಷತಾ ತಪಾಸಣೆಗೆ ಮಾಡಬೇಕಾಗುತ್ತದೆ ಎಂದು ಚೌವಾಣ್ ತಿಳಿಸಿದರು.
ಚೀನಾದಿಂದ ಆದಷ್ಟು ಶೀಘ್ರವೇ ಇಂಜಿನಿಯರ್‌ಗಳು ದೇಶಕ್ಕೆ ಆಗಮಿಸಲಿದ್ದಾರೆ. ರೈಲುಗಳ ಜೋಡಣೆ ಮತ್ತು ಪರೀಕ್ಷೆಗಾಗಿ ಕೌಶಲ್ಯ ತರಬೇತಿಯನ್ನು ನೀಡುತ್ತಾರೆ. ಈ ಮೇಲಿನ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಆರ್ ವಿ ರಸ್ತೆ ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳು ಓಡಲಿವೆ.












Click it and Unblock the Notifications