Breaking; ವೈಟ್‌ಫೀಲ್ಡ್-ಐಟಿಪಿಎಲ್ ಮೆಟ್ರೋ ಪ್ರಾಯೋಗಿಕ ಸಂಚಾರ ಶುರು
ಬೆಂಗಳೂರು, ಅಕ್ಟೋಬರ್ 21; ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಸಿಹಿಸುದ್ದಿ. ಬೆಂಗಳೂರು ನಗರದ ಮತ್ತೊಂದು ಮಾರ್ಗದಲ್ಲಿ ನಮ್ಮ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭವಾಗಿದೆ.
ಶುಕ್ರವಾರ ವೈಟ್‌ಫೀಲ್ಡ್-ಐಟಿಪಿಎಲ್ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ಸಿಕ್ಕಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು, ಸಿಬ್ಬಂದಿ ಈ ಕ್ಷಣಕ್ಕೆ ಸಾಕ್ಷಿಯಾದರು.
ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಸಿಬ್ಬಂದಿಗಳ ಜೊತೆ ಪೂಜೆ ಸಲ್ಲಿಸುವ ಮೂಲಕ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದರು. ನೇರಳೆ ಮಾರ್ಗದಲ್ಲಿ ರೈಲು ಪ್ರಾಯೋಗಿಕ ಸಂಚಾರ ಆರಂಭಿಸಿದೆ.

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ ವೈಟ್‌ಫೀಲ್ಡ್-ಐಟಿಪಿಎಲ್ ನಡುವೆ ಮಾತ್ರ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ ಅಕ್ಟೋಬರ್ 25ರಿಂದ ಪ್ರಾಯೋಗಿಕ ಸಂಚಾರ ನಡೆಸಲಿದೆ.
ಬಿಎಂಆರ್‌ಸಿಎಲ್ ಈ ವರ್ಷದ ಡಿಸೆಂಬರ್ ವೇಳೆಗೆ ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವಿನ ಸುಮಾರು 15 ಕಿ. ಮೀ. ಮಾರ್ಗವನ್ನು ಉದ್ಘಾಟಿಸುವ ಗುರಿ ಹೊಂದಿದೆ. ಇದಕ್ಕಾಗಿ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಲಾಗಿದೆ.

ಈ ಪ್ರಾಯೋಗಿಕ ಸಂಚಾರದ ಅವಧಿಯಲ್ಲಿ ಮಾರ್ಗದ ನಡುವಿನ ಸಂಚಾರದ ಸಮಯ, ಸಿಗ್ನಲ್, ನಿಲ್ದಾಣದ ಮೂಲ ಸೌಕರ್ಯಗಳು, ಹಳಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಪ್ರಾಯೋಗಿಕ ಸಂಚಾರಕ್ಕಾಗಿಯೇ ಆರು ಬೋಗಿಗಳನ್ನು ಬೈಯ್ಯಪ್ಪನಹಳ್ಳಿ ನಮ್ಮ ಮೆಟ್ರೋ ಡಿಪೋದಿಂದ ತರಲಾಗಿದೆ.
ನಾಲ್ಕು ವಾರಗಳ ಕಾಲ ಪ್ರಾಯೋಗಿಕ ಸಂಚಾರ ನಡೆಯಲಿದೆ. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಮಾರ್ಗದಲ್ಲಿ ಪರಿಶೀಲನೆ ನಡೆಸಲು ಬಿಎಂಆರ್‌ಸಿಎಲ್ ಮನವಿ ಮಾಡಲಿದೆ. ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಚಾಲನೆ ಸಿಗಲಿದೆ.
ಈ ಮೆಟ್ರೋ ಮಾರ್ಗದಲ್ಲಿ ರೈಲುಗಳು ಸಂಚಾರ ಆರಂಭವಾದರೆ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಹಾಯಕವಾಗಲಿದೆ. ಕ್ಯಾಬ್ ಅಥವ ಖಾಸಗಿ ವಾಹನಗಳ ಮೂಲಕ ಸಂಚಾರ ನಡೆಸುವುದು ತಪ್ಪಲಿದೆ.












Click it and Unblock the Notifications