Namma Metro: ಇನ್ನು ಮುಂದೆ ಈ 09 ಟ್ರಾವೆಲ್ ಆಪ್‌ಗಳಲ್ಲೂ ಮೆಟ್ರೋ ಟಿಕೆಟ್ ಲಭ್ಯ, ಯಾವುವು?..BMRCL
ಬೆಂಗಳೂರು, ಜುಲೈ 08: ಬೆಂಗಳೂರು ನಮ್ಮ ಮೆಟ್ರೋ ಟಿಕೆಟ್ ವಿತರಣೆಗೆ ಹೊಸ ವ್ಯವಸ್ಥೆ ಜಾರಿ ಮಾಡಿದೆ. ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ನೆಟ್‌ವರ್ಕ್ ಮೂಲಕ ಕ್ಯೂಆರ್ ಟಿಕೆಟ್ ಸೇವೆ ನೀಡಲು ಚಾಲನೆ ನೀಡಿದೆ. ಇನ್ನು ಮುಂದೆ ಹಾಲಿ ಸೇವೆಗಳ ಜೊತೆಗೆ ಸುಮಾರು ಈ ಮಲ್ಟಿ ಅಪ್ಲಿಕೇಷನ್‌ಗಳ ಮೂಲಕವು ನೀವು ಟಿಕೆಟ್ ಖರೀದಿಸಬಹುದಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.
ನಮ್ಮ ಮೆಟ್ರೋ ಟಿಕೆಟ್‌ಗಳು ಈಗ ಹೆಚ್ಚುವರಿ 9 ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಲಭ್ಯ ಇವೆ. ಪ್ರಯಾಣಿಕರಿಗೆ ಸುಗಮ ಹಾಗೂ ತಡೆರಹಿತ ಟಿಕೆಟ್ ಬುಕ್ಕಿಂಗ್ ಅನುಭವವನ್ನು ಒದಗಿಸುತ್ತವೆ. ಟೊಕನ್‌ಗಾಗಿ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುತ್ತದೆ. ಪ್ರಯಾಣಿಕರ ಸ್ನೇಹಿ ವ್ಯವಸ್ಥೆ ಇದಾಗಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಟಿಕೆಟ್ ವಿತರಣೆ ವ್ಯವಸ್ಥೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಯಾಣಿಕರಿಗೆ ಈ ಸೇವೆ ವರದಾನವು ಆಗಬಹುದೆಂದು ಅಂದಾಜಿಸಲಾಗಿದೆ. ಹಾಗಾದರೆ ಯಾವೆಲ್ಲ ಅಪ್ಲಿಕೇಷನ್‌ಗಳಲ್ಲಿ ನಮನ್ಮ ಮೆಟ್ರೋ ಟಿಕೆಟ್ ಲಭ್ಯ ಇವೆ ಎಂಬ ಮಾಹಿತಿ ಮುಂದಿದೆ.
ಇಂದಿನಿಂದ 9 ಆಪ್‌ನಲ್ಲಿ ಮೆಟ್ರೋ ಟೀಕೆಟ್ ಲಭ್ಯ..
* ಈಸಿ ಮೈ ಟ್ರಿಪ್ (EaseMyTrip)
* ಹೈವೇ ಡಿಲೈಟ್ (Highway Delite)
* ಮೈಲ್ಸ್ ಆಂಡ್ ಕಿಲೋ ಮೀಟರ್ಸ್ (Miles & Kilometres via Telegram)
* ನಮ್ಮ ಯಾತ್ರಿ (Namma Yatri)
* ಒನ್ ಟಿಕೆಟ್ (OneTicket)
* ರ್ಯಾಪಿಡೋ (Rapido)
* ರೆಡ್ ಬಸ್ (Redbus)
* ಟಮ್ಮಾಕ್ (Tummoc)
* ಯಾತ್ರಿಸಿಟಿ - ಟ್ರಾವೆಲ್ ಗೈಡ್ (Yatri City Travel Guide)
ಈ ಹೊಸ ಆಯ್ಕೆಗಳು ಈಗಾಗಲೇ ಲಭ್ಯವಿರುವ ಟಿಕೆಟ್ ಬುಕ್ಕಿಂಗ್ ಆಯ್ದ ಮಾರ್ಗಗಳಾದ ನಮ್ಮ ಮೆಟ್ರೋ ಮೊಬೈಲ್ ಆಪ್, ಬಿಎಂಆರ್‌ಸಿಎಲ್ ವಾಟ್ಸಾಪ್ ಚಾಟ್‌ಬಾಟ್ (8105556677), ಮತ್ತು ಪೇಟಿಎಂ (Paytm) ಆಪ್‌ಗೆ ಪೂರಕವಾಗಿ ಸೇವೆ ಒದಗಿಸಲಿವೆ. ಮೆಟ್ರೋ ಡಿಜಿಟಲ್ ಬಳಕೆದಾರ ಪ್ರಯಾಣಿಕರಿಗೆ ಈ ಸೇವೆ ಮತ್ತಷ್ಟು ಹತ್ತಿರವಾಗಲಿದೆ. ಸಹಜ ಟಿಕೆಟ್ ಬುಕ್ಕಿಂಗ್ ಸೇವೆ ನೀಡಲಿದೆ.
BMRCL ವ್ಯವಸ್ಥಾಪಕ ನಿರ್ದೇಶಕರಾದ ಎಂ. ಮಹೇಶ್ವರ ರಾವ್, ಅವರು"ಡಿಜಿಟಲ್ ಟಿಕೆಟ್ ವ್ಯವಸ್ಥೆಯ ಈ ವಿಸ್ತರಣೆಯು ಮೊದಲ ಹಂತದಿಂದ ಕೊನೆಯ ಹಂತದ ಸಂಪರ್ಕವರೆಗೆ (ಫಸ್ಟ್, ಮಿಡ್ ಮತ್ತು ಲಾಸ್ಟ್ ಮೈಲ್ ಕನೆಕ್ಟಿವಿಟಿ) ಏಕೀಕೃತಗೊಳಿಸುವ ನಮ್ಮ ದೀರ್ಘಕಾಲಿಕ ಪ್ರಯತ್ನದ ಭಾಗವಾಗಿದೆ ಎಂದರು.
2023 ರಿಂದ ಓಎನ್‌ಡಿಸಿ ನೆಟ್ವರ್ಕ್‌ನಲ್ಲಿ ಆಟೋ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿರುವ ಹಿನ್ನೆಲೆಯಲ್ಲಿ, ಮೆಟ್ರೋ ಟಿಕೆಟ್‌ಗಳ ಸೇರ್ಪಡೆ ಬಹುಮಾದ್ಯಮ ಸಂಚಾರ ವ್ಯವಸ್ಥೆಯ ಪ್ರಮುಖ ಅಂಗವಾಗುತ್ತಿದೆ. ಪ್ರಯಾಣಿಕರು ಇದೀಗ ಒಂದೇ ಅಪ್ಲಿಕೇಶನ್‌ನಿಂದ ತಮ್ಮ ಮನೆಯಿಂದ ಗಮ್ಯಸ್ಥಳದವರೆಗೆ ತಮ್ಮ ಸಂಪೂರ್ಣ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದಾಗಿದೆ. ಈ ವ್ಯವಸ್ಥೆ ಪ್ರಯಾಣಿಕರ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. BMRCL ಈ ಮೂಲಕ ಒಂದು ಮುಕ್ತ, ಒಳಗೊಳ್ಳುವಿಕೆಯಿಂದ ಕೂಡಿದ, ತಂತ್ರಜ್ಞಾನಾಧಾರಿತ ಭವಿಷ್ಯದ ನಗದುರಹಿತ ನಗರ ಸಂಚಾರ ವ್ಯವಸ್ಥೆ ಕಡೆಗೆ ನಿರ್ಣಾಯಕ ಹೆಜ್ಜೆ ಇಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸದ್ಯ ನಮ್ಮ ಮೆಟ್ರೋದಲ್ಲಿ ಪ್ರತಿ ದಿನ 8.5 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಸುಗಮ, ಏಕೀಕೃತ ಹಾಗೂ ಆಪ್ ಆಧಾರಿತ ಸಾರಿಗೆ ಅನುಭವ ನೀಡುವತ್ತ ನಿಗಮ ಗಮನಹರಿಸಿದೆ ಎಂದರು.












Click it and Unblock the Notifications