ಮೆಜೆಸ್ಟಿಕ್‌ನಲ್ಲಿ ನವೆಂಬರ್‌ಗೆ ಓಡಲಿದೆ ನಮ್ಮ ಮೆಟ್ರೋ ರೈಲು
ಬೆಂಗಳೂರು, ಫೆ.3 : ನಮ್ಮ ಮೆಟ್ರೋದ ಮೆಜೆಸ್ಟಿಕ್ ನಿಲ್ದಾಣ ನವೆಂಬರ್ ತಿಂಗಳಿನಲ್ಲಿ ಸೇವೆಗೆ ಮುಕ್ತವಾಗಲಿದೆ. ಪೀಣ್ಯ ಇಂಡಸ್ಟ್ರಿ- ನಾಗಸಂದ್ರ ರೀಚ್-3ಬಿ ಮಾರ್ಗ ಈ ತಿಂಗಳ ಅಂತ್ಯದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರು, ಮೆಜೆಸ್ಟಿಕ್ ನಿಲ್ದಾಣದ ನಿರ್ಮಾಣ ಕಾರ್ಯ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಮಗಾರಿ ವೇಗ ಪಡೆದಿದ್ದು, ನವೆಂಬರ್‌ನಲ್ಲೇ ನಿಲ್ದಾಣವನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಲಾಗುತ್ತದೆ ಎಂದರು. [ನಮ್ಮ ಮೆಟ್ರೋ ಬೇಗ ಕಟ್ರೋಗೆ 3 ವರ್ಷ]

ಈ ತಿಂಗಳಿನಲ್ಲಿ ಸಂಚಾರ : ಪೀಣ್ಯ ಕೈಗಾರಿಕಾ ನಿಲ್ದಾಣದಿಂದ ನಾಗಸಂದ್ರವರೆಗಿನ 3.5 ಕಿ.ಮೀ ಉದ್ದದ (ರೀಚ್ 3ಬಿ)ಹಸಿರು ಮಾರ್ಗದಲ್ಲಿ ಈ ತಿಂಗಳ ಅಂತ್ಯದಲ್ಲಿ ರೈಲು ಸೇವೆ ಆರಂಭವಾಗಲಿದೆ. ಈ ಮಾರ್ಗದಲ್ಲಿ ಈಗಾಗಲೇ ಸಂಪಿಗೆ ರಸ್ತೆಯಿಂದ ಪೀಣ್ಯದ ತನಕ ಮೆಟ್ರೋ ರೈಲು ಸಂಚರಿಸುತ್ತಿದೆ ಎಂದು ತಿಳಿಸಿದರು. [ಮೆಟ್ರೋದಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಹಾಕಿ]
ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಪ್ರತಿ ತಿಂಗಳು ಶೇ 1ರಷ್ಟು ಪ್ರಗತಿ ಕಾಣುತ್ತಿದ್ದು, ಇನ್ನು ಹತ್ತು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕಾಮಗಾರಿಗೆ ವೇಗ ಸಿಕ್ಕಿದರೆ, ಅವಧಿಗೆ ಮುನ್ನವೇ ಎಲ್ಲ ಮಾರ್ಗಗಳು ಸಂಚಾರಕ್ಕೆ ಮುಕ್ತವಾಗಲಿವೆ ಎಂದರು.
ದಕ್ಷಿಣ ಭಾಗದಲ್ಲಿ ರೈಲು ಸಂಚಾರ : ದಕ್ಷಿಣ ಭಾಗದಲ್ಲಿ ಪ್ರಾಯೋಗಿಕ ರೈಲು ಸಂಚಾರವನ್ನು ಆರಂಭಿಸುವ ಕುರಿತು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ನ್ಯಾಷನಲ್ ಕಾಲೇಜ್‌ನಿಂದ ಪುಟ್ಟೇನಹಳ್ಳಿವರೆಗಿನ ಮಾರ್ಗ ರೈಲು ಓಡಾಟಕ್ಕೆ ಬಹುತೇಕ ಸಿದ್ಧವಾಗಿದೆ. ಆದರೆ, ಈ ಮಾರ್ಗಕ್ಕೆ ರೈಲು ಬರಬೇಕಾದರೆ ಸಂಪಿಗೆ ರಸ್ತೆಯಿಂದ ನ್ಯಾಷನಲ್ ಕಾಲೇಜುವರೆಗಿನ ಸುರಂಗ ಮಾರ್ಗ ಪೂರ್ಣಗೊಳ್ಳಬೇಕು ಎಂದರು.
ಈ ಮಾರ್ಗದಲ್ಲಿ ಪ್ರಯೋಗಾರ್ಥ ಸಂಚಾರ ಆರಂಭಿಸಲು ಕಾರ್ಯತಂತ್ರ ರೂಪಿಸಲಾಗಿದೆ. ರೈಲನ್ನು ಕ್ರೇನ್ ಮೂಲಕ ಎತ್ತಿ ಮೇಲ್ಸೇತುವೆ ಮೇಲಿನ ಹಳಿಯ ಮೇಲೆ ಇರಿಸಲು ಉದ್ದೇಶಿಸಲಾಗಿದೆ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು ವಿವರಣೆ ನೀಡಿದರು.












Click it and Unblock the Notifications