Namma Metro: ಸರ್ಜಾಪುರ-ಹೆಬ್ಬಾಳವರೆಗೆ ಹೊಸ ಮೆಟ್ರೋ ಮಾರ್ಗ, ಯಾವೆಲ್ಲ ಪ್ರದೇಶಗಳಿಗೆ ಅನುಕೂಲ ತಿಳಿಯಿರಿ
ಬೆಂಗಳೂರು, ಜುಲೈ 13: ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ BMRCL ನಮ್ಮ ಮೆಟ್ರೋ ಸಾರಿಗೆ ಸೇವೆಯು ಸುಮಾರು 70 ಕಿಲೋ ಮೀಟರ್‌ನಷ್ಟು ವ್ಯಾಪಿಸಿದೆ. ಇದರ ಮಧ್ಯೆ ಸಾಕಷ್ಟು ಕಡೆಗಳಲ್ಲಿ ಹೊಸ ಮೆಟ್ರೋ ಮಾರ್ಗ, ಹಾಲಿ ಮಾರ್ಗಗಳ ವಿಸ್ತರಣೆ ಕಾರ್ಯ ಭರದಿಂದ ಸಾಗಿದೆ. ಇದೀಗ ಕರ್ನಾಟಕ ಸರ್ಕಾರವು ಮತ್ತೊಂದು ಹೊಸ ಮೆಟ್ರೋ ಮಾರ್ಗದ ಬಗ್ಗೆ ಪ್ರಸ್ತಾಪವಿದೆ.
ರಾಜ್ಯ ಸರ್ಕಾರವು ನಗರದ ಹೆಬ್ಬಾಳ ಮತ್ತು ಸರ್ಜಾಪುರವರೆಗೆ ಹೊಸ ಮೆಟ್ರೋ ಮಾರ್ಗ ನಿರ್ಮಾಣ ಬಗ್ಗೆ ಪ್ರಸ್ತಾಪಿಸಿದೆ. ಈ ಪ್ರಸ್ತಾಪಿತ ಮಾರ್ಗಕ್ಕೆ 15,000 ಕೋಟಿ ಅಂದಾಜು ವೆಚ್ಚದಲ್ಲಿ ಹೆಬ್ಬಾಳ-ಸರ್ಜಾಪುರವರೆಗೆ 37 ಕಿಲೋ ಮೀಟರ್ ಮೆಟ್ರೋ ಕಾರಿಡಾರ್ ನಿರ್ಮಾಣ ಬಗ್ಗೆ ಇತ್ತೀಚೆಗೆ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಈ ಮಾರ್ಗವನ್ನು ಅತ್ಯಧಿಕ ಜನರು ಓಡಾಡುವ ಪ್ರದೇಶಗಳಲ್ಲಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಅಂದರೆ ಅಗರ, ಕೋರಮಂಗಲ ಮತ್ತು ಡೈರಿ ಸರ್ಕಲ್ ಮಾರ್ಗವಾಗಿ ಸರ್ಜಾಪುರ-ಹೆಬ್ಬಾಳಕ್ಕೆ ಸಂಪರ್ಕ ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ. ನಮ್ಮ ಮೆಟ್ರೊದ ಈ ಹೊಸ ಮಾರ್ಗದ ಪ್ರಸ್ತಾವನೆ ಆರಂಭಿಕ ಹಂತದಲ್ಲಿದೆ. ಅದರ ಅನುಮೋದನೆಗಾಗಿ ಕೇಂದ್ರ ಸರ್ಕಾರದ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
ಪ್ರಸ್ತಾಪಿತ ಈ ಹೊಸ ಮೆಟ್ರೋ ಮಾರ್ಗವು ನಗರದ ಪ್ರಮುಖ ಎರಡು ಪ್ರದೇಶಗಳ ಮಧ್ಯೆದ ಸಮಯ ಕಡಿಮೆ ಮಾಡುವ ಜೊತೆಗೆ ಸಂಚಾರ ದಟ್ಟಣೆಗೂ ತುಸು ಬ್ರೇಕ್ ಹಾಕಲಿದೆ. ಈ ಉದ್ದೇಶದಿಂದ ಬಿಎಂಆರ್‌ಸಿಎಲ್ ಮತ್ತು ರಾಜ್ಯ ಸರ್ಕಾರ ಪ್ರಸ್ತಾವನೆ ಬಗ್ಗೆ ಚರ್ಚಿಸಿವೆ.
ಸರ್ಜಾಪುರ- ಹೆಬ್ಬಾಳ ಮಧ್ಯೆದ ಪ್ರದೇಶಗಳ ವಿವರ
ಅಂದುಕೊಂಡಂತೆ ಎಲ್ಲವು ನಡೆದರೆ ಮುಂದಿನ ದಿನಗಳಲ್ಲಿ ಸರ್ಜಾರಪುರ ಮತ್ತು ಹೆಬ್ಬಾಳ ಮಧ್ಯೆದ ಅನೇಕ ಪ್ರದೇಶಗಳ ಜನರಿಗೆ ಈ ಮೆಟ್ರೋ ಮಾರ್ಗವು ಪ್ರಮುಖ ಮತ್ತು ನೆಚ್ಚಿನ ಸಾರಿಗೆ ಆಗುವುದರಲ್ಲಿ ಅನುಮಾನವೇ ಇಲ್ಲ. ಸರ್ಜಾಪುರ, ಸೋಂಪುರ, ದೊಮ್ಮಸಂದ್ರ ಸರ್ಕಲ್, ಸೂಲಿಕುಂಟೆ, ಎಸ್‌ಇಜೆಡ್ ಕೊಡತಿ, ವಿಪ್ರೋ, ಮುತ್ತಾನಲ್ಲೂರು ಕ್ರಾಸ್, ಕಾರ್ಮೆಲಾರಂ, ದೊಡ್ಡಕನ್ನೆಲ್ಲಿ ಗೇಟ್, ಇಬ್ಬಲೂರು, ಕೈಕೊಂಡಹಳ್ಳಿ, ಬೆಳ್ಳಂದೂರು ಗೇಟ್, ಅಗರ, ಜಕ್ಕಸಂದ್ರ.

ಇನ್ನೂ ಸುದ್ದಗುಂಟೆಪಾಳ್ಯ, ಕೋರಮಂಗಲ, ಸೆಂಟ್ ಜಾನ್ಸ್ ರಸ್ತೆ, ಡೈರಿ ವೃತ್ತ, ನಿಮ್ಹಾನ್ಸ್, ವಿಲ್ಸನ್ ಗಾರ್ಡನ್, ಟೌನ್ ಹಾಲ್, ಸೆಂಟ್ರಲ್ ಕಾಲೇಜ್, ಬಸವೇಶ್ವರ ವೃತ್ತ, ಕನ್ನಿಂಗ್‌ಹ್ಯಾಮ್ ರಸ್ತೆ, ಪ್ಯಾಲೇಸ್ ಗುಟ್ಟಹಳ್ಳಿ, ಮೇಖ್ರಿ ವೃತ್ತ, ಗಂಗೇನಹಳ್ಳಿ, ಪಶುವೈದ್ಯಕೀಯ ಕಾಲೇಜು ಮಾರ್ಗವಾಗಿ ಈ ಮಾರ್ಗ ಹೆಬ್ಬಾಳ ತಲುಪಲಿದೆ
ಮುಂದಿನ ವರ್ಷವೇ 100ಕಿ.ಮೀ.ಗೆ ವಿಸ್ತರಣೆ
ಇಷ್ಟು ಪ್ರದೇಶಗಳ ಲಕ್ಷಾಂತರ ಜನರಿಗೆ ಈ ನೂತನ ಮಾರ್ಗವು ಪರಿಣಾಮಕಾರಿಯಾಗಿ ಅನುಕೂಲವಾಗಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್) ಮುಂದಿನ ಹಣಕಾಸು ವರ್ಷದಲ್ಲಿ ಮೆಟ್ರೋ ಜಾಲವನ್ನು 100 ಕಿಲೋ ಮೀಟರ್‌ಗೆ ವಿಸ್ತರಿಸಲಿದೆ ಎಂದು ಈ ಹಿಂದೆ ಸರ್ಕಾರ ತಿಳಿಸಿತ್ತು.
ಈ ಒಟ್ಟು ವಿಸ್ತರಣೆ ಮಾರ್ಗದಲ್ಲಿ ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ, ಕೆಂಗೇರಿ-ಚಲ್ಲಘಟ್ಟ, ನಾಗಸಂದ್ರ- ಮಾದವಾರ ಮತ್ತು ಆರ್‌ವಿ ರಸ್ತೆ-ಬೊಮ್ಮಸಂದ್ರದ ವರೆಗಿನ ಮಾರ್ಗಗಳು ಇರಲಿವೆ.
ಮುಂದಿನ 2024ರ ವರ್ಷಾಂತ್ಯಕ್ಕೆ ಒಟ್ಟು 27 ಕಿಲೋ ಮೀಟರ್‌ನ ಹೊಸ ಮಾರ್ಗಗಳು ಹಾಲಿ ಮಾರ್ಗಕ್ಕೆ ಸೇರ್ಪಡೆಯಾಗಲಿದೆ. ಮುಂದಿನ ಮೂರು ವರ್ಷಗಳಲ್ಲಿ ಹಾಲಿ ಮೆಟ್ರೋ 70 ಕಿ.ಮೀ ಜಾಲವನ್ನು 176 ಕಿ.ಮೀ.ಗೆ ಹೆಚ್ಚಿಸುವ ಗುರಿ ಸರ್ಕಾರ ಹೊಂದಿದೆ. ಈ ಸಂಬಂಧ ಹಾಲಿ ನಡೆಯುತ್ತಿರುವ ಮೆಟ್ರೋ ಮಾರ್ಗಗಳ ಕಾಮಗಾರಿ ಕೆಲಸದ ವೇಗವನ್ನು ಇನ್ನಷ್ಟು ಹೆಚ್ಚಿಸಲಾಗುವುದು.
45 ಕಿಮೀಯ ಮೆಟ್ರೋ 3ನೇ ಹಂತದ ಯೋಜನೆ
ಇನ್ನೂ ಮೆಟ್ರೋ 3ನೇ ಹಂತದ ಯೋಜನೆಗಾಗಿ ಕೇಂದ್ರ ಸರ್ಕಾರಕ್ಕೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಲಾಗಿದ್ದು, ಅನುಮೋದನೆ ನೀಡುವುದು ಬಾಕಿ ಇದೆ. ಈ ಯೋಜನೆಗೆ ಸುಮಾರು 16,328 ಕೋಟಿ ರೂ.ವೆಚ್ಚವಾಗಲಿದೆ. ಈ ಯೋಜನೆ ಕೆಂಪಾಪುರದಿಂದ ಆರಂಭಗೊಂಡು ಜೆ.ಪಿ.ನಗರ 4ನೇ ಹಂತದವರೆಗೆ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗೆ ಪಶ್ಚಿಮ ದಿಕ್ಕಿನ ಹೊರ ವರ್ತುಲ ರಸ್ತೆಗೆ ತಲುಪಲಿದೆ. ಇದರ ಒಟ್ಟು ವಿಸ್ತೀರ್ಣ ಒಟ್ಟು 45 ಕಿ.ಮೀ ಎಂದು ನಮ್ಮ ಮಟ್ರೋ ತಿಳಿಸಿದೆ.
ಹಾಲಿ ಸುಮಾರು 70 ಕಿಲೋ ಮೀಟರ್ ಮಾರ್ಗದಲ್ಲಿ ಜನರಿಗೆ ನಮ್ಮ ಮೆಟ್ರೋ ಸೇವೆ ದೊರೆಯುತ್ತಿದೆ. ಪ್ರತಿ ದಿನ 5.7 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ, ಮೆಟ್ರೋ ಜಾಲವನ್ನು 70 ಕಿಲೋ ಮೀಟರ್‌ನಿಂದ 176 ಕಿಲೋ ಮೀಟರ್‌ಗೆ ಹೆಚ್ಚಿಸಲಾಗುವುದು. ಇದು ಪ್ರಸ್ತುತ ವ್ಯಾಪ್ತಿಯ 2.5 ಪಟ್ಟು ಹೆಚ್ಚು ಎನ್ನಲಾಗಿದೆ.












Click it and Unblock the Notifications