Namma Metro: ಐಟಿ ಉದ್ಯೋಗಿಗಳು ಕಚೇರಿಯಿಂದ ಕೆಲಸ, ನೇರಳೆ ಮಾರ್ಗದ ರೈಲುಗಳಲ್ಲಿ ದಟ್ಟಣೆ ಹೆಚ್ಚಳ
ಬೆಂಗಳೂರು, ಜುಲೈ 15: ಬೆಂಗಳೂರಿನಲ್ಲಿ ಹಾಳಿ ಬಹುದೊಡ್ಡ ಮೆಟ್ರೋ ಮಾರ್ಗವೆಂದರೆ ಅದು ನೇರಳೆ ಮಾರ್ಗ. ಇದು ಸುಮಾರು 43 ಕಿಮೀಗೂ ಉದ್ದವಾಗಿದ್ದು, ಪಶ್ಚಿಮ ಬೆಂಗಳೂರಿನ ಚಲ್ಲಘಟ್ಟದಿಂದ ಪೂರ್ವ ಬೆಂಗಳೂರಿನ ಕಾಡುಗೋಡಿಗೆ (ವೈಟ್‌ಫೀಲ್ಡ್) ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವು ಜನದಟ್ಟಣೆಯಿಂದ ಹೆಚ್ಚು ಸುದ್ದಿ ಆಗುತ್ತಿದೆ.
ಕಳೆದ ವರ್ಷ ಈ ಮಾರ್ಗವನ್ನು ಸಂಪೂರ್ಣವಾಗಿ ತೆರದ ಬಳಿಕ ಲಕ್ಷಾಂತರ ಜನರಿಗೆ ಪ್ರಯಾಣ ಸೇವೆಯ ಅನುಕೂಲ ಕಲ್ಪಿಸಿದೆ. ಮತ್ತೊಂದೆಡೆ ಸಂಚಾರ ದಟ್ಟಣೆ, ರೈಲಿಗಾಗಿ ಕಾಯುವಿಕೆ, ಪರದಾಟದಂತಹ ಸಮಸ್ಯೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ. ನೇರಳೆ ಮಾರ್ಗ ಐಟಿ ಕಾರಿಡಾರ್‌ಗೆ ಸಂಪರ್ಕಿಸಿದ ಮೊದಲ ಲೈನ್ ಆಗಿದೆ. ಹೀಗಾಗಿ ಸಾರ್ವಜನಿಕರು ಸೇರಿದಂತೆ ಐಟಿ ಉದ್ಯೋಗಿಗಳು ಈ ಮಾರ್ಗವನ್ನು ಹೆಚ್ಚಾಗಿ ಬಳಸುತ್ತಾರೆ.

ಹರಿರು ಮಾರ್ಗಕ್ಕಿಂತಲೂ ನೇರಳೆ ಮೆಟ್ರೋ ಮಾರ್ಗದಲ್ಲಿ ಅತೀ ಹೆಚ್ಚು ಜನ ಪ್ರಯಾಣಿಸುತ್ತಾರೆ. ಅಲ್ಲದೇ ಇಂಟರ್‌ಚೇಂಜ್ ನಿಲ್ದಾಣದ ಮೂಲಕ ಹಸಿರು ಮಾರ್ಗ ಪ್ರಯಾಣಿಕರು ವೈಟ್‌ಫಿಲ್ಡ್ ಇಲ್ಲವೇ ಕೆಂಗೇರಿ ಕಡೆಗೆ ಹೋಗಲು ನೇರಳೆ ಮಾರ್ಗವನ್ನೇ ಬಳಸುತ್ತಾರೆ. ಇಷ್ಟು ದೊಡ್ಡ ಮಾರ್ಗದಲ್ಲಿ ರೈಲುಗಳ ಆವರ್ತನ ಕಳಪೆ ಆಗಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.
ಮೆಟ್ರೋದಲ್ಲಿ ದಟ್ಟಣೆ, ಗಲಾಟೆ, ಪ್ರಯಾಣಿಕರಿಗೆ ಕಿರಿಕಿರಿ
ಜನರನ್ನು ತುಂಬಿಕೊಂಡು ಬಂದ ರೈಲುಗಳು ಮೆಜೆಸ್ಟಿಕ್ ಇತರ ನಿಲ್ದಾಣಗಳಲ್ಲಿ ನಿಲ್ಲಿಸುತ್ತವೆ. ಹತ್ತಲು ಜಾಗ ಇರುವುದಿಲ್ಲ. ಕೆಲವು ರೈಲುಗಳು ಮಾರ್ಗ ಮಧ್ಯವೇ ನಿಲ್ಲುತ್ತಿವೆ. ಬಾಗಿಲು ಮುಚ್ಚಲು ಆಗದಷ್ಟು ಜನದಟ್ಟಣೆ ಮೆಟ್ರೋ ರೈಲುಗಳಲ್ಲಿ ಕಂಡು ಬರುತ್ತದೆ. ಇದರಿಂದ ಹಲವು ಬಾರಿ ಜಗಳ, ಗಲಾಟೆಗಳು ಆಗಿವೆ.
ಈ ಮೊದಲು ಅಷ್ಟಾಗಿ ಇಂತಹ ಘಟನೆಗಳು ವರದಿ ಆಗುತ್ತಿರಲಿಲ್ಲ. ನೇರಳೆ ಮಾರ್ಗ ಸಂಪೂರ್ಣವಾಗಿ ತೆರೆದ ಬಳಿಕ ಐಟಿ ಕಂಪನಿಗಳು ಹೆಚ್ಚಿನ ದಿನ ಕಚೇರಿಯಿಂದಲೇ ಕೆಲಸ ಮಾಡಬೇಕೆಂದು ಸೂಚಿಸಿದವು. ಕೆಲವು ಕಂಪನಿಗಳು ಹೈಬ್ರಿಡ್ ವ್ಯವಸ್ಥೆ ಜಾರಿಗೆ ತಂದವು. ಇದರಿಂದ ಟ್ರಾಫಿಕ್ ಹೆಚ್ಚಿರುವ ಬೆಂಗಳೂರಿನಲ್ಲಿ ಐಟಿ ಕಾರಿಡಾರ್ ಸಂಪರ್ಕಿಸುವ ಈ ನೇರಳೆ ಮಾರ್ಗ ಮೆಟ್ರೋ ಏರುವುದು ಉದ್ಯೋಗಿಗಳಿಗೂ ಅನಿವಾರ್ಯವಾಯಿತು.

ಹೀಗಾಗಿ ಈ ಮೇಲಿನ ಕಾರಣಗಳಿಂದ ಮೆಟ್ರೋ ಸಂಚಾರದಲ್ಲಿ ನಿತ್ಉ ದಟ್ಟಣೆ ಕಂಡು ಬರುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ತಿಳಿಸಿದ್ದಾರೆ.
ಶಾರ್ಟ್-ಲೂಪ್ ಸೇವೆ ನೀಡಿದರೂ ದಟ್ಟಣೆ ಸಮಸ್ಯೆ
ಟೆಕ್ ಕಂಪನಿಗಳು ಉದ್ಯೋಗಿಗಳಿಗೆ ಕಚೇರಿಗೆ ಹಿಂತಿರುಗುವಂತೆ ಒತ್ತಾಯಿಸಿದವು. ಇದರಿಂದ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗುತ್ತಾ ಬಂತು. ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಿಂದ ವೈಟ್‌ಫೀಲ್ಡ್ ಕಡೆಗೆ 15 ಹೆಚ್ಚುವರಿ ಮೆಟ್ರೋ ಮೂಲಕ ಶಾರ್ಟ್-ಲೂಪ್ ಸೇವೆಗಳನ್ನು ನಿರ್ವಹಿಸುವುದು ಸೇರಿದಂತೆ ದಟ್ಟಣೆ ಕಡಿಮೆಗೆ ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ.
ನಮ್ಮ ಮೆಟ್ರೋಗೆ ಮುಂದಿನ ವರ್ಷವೇ ಹೊಸ ರೈಲುಗಳು ಸೇರ್ಪಡೆಗೊಳ್ಳಲಿದ್ದು, ಆಗ ಜನದಟ್ಟಣೆ ಕಡಿಮೆ ಆಗಲಿದೆ. ಸದ್ಯ ನಿತ್ಯ ನಮ್ಮ ಮೆಟ್ರೋದಲ್ಲಿ ಸುಮಾರು ಎಂಟು ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.
ಹೆಚ್ಚು ದಟ್ಟಣೆ ಮೆಟ್ರೋ ನಿಲ್ದಾಣಗಳಿವು
BMRCL ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣ, ಇಂದಿರಾನಗರ, ಬೆನ್ನಿಗಾನಹಳ್ಳಿ, ಎಂಜಿ ರಸ್ತೆ, ನಾಗಸಂದ್ರ, ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ, ಮತ್ತು ಕೆಆರ್ ಪುರಂ ನಿಲ್ದಾಣಗಳು ಇವು ಅತ್ಯಂತ ಜನದಟ್ಟಣೆ ನಿಲ್ದಾಣಗಳಾಗಿವೆ.
ಬೆಂಗಳೂರು ಮೆಟ್ರೋದ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದಲ್ಲಿ ಪ್ರಯಾಣಿಕ ದಟ್ಟಣೆ ಹೆಚ್ಚಾಗಲು ಚೀನಾ ಕಂಪನಿಯು ಸಕಾಲದಲ್ಲಿ ಮೆಟ್ರೋ ಬೋಗಿ ಒದಗಿಸದಿರುವುದು ಒಂದು ಕಾರಣವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ನಿತ್ಯ ಸಂಜೆ ವೈಟ್‌ಫಿಲ್ಡ್ ನಿಂದ ಬರುವವರಿಗೆ ತೊಂದರೆ
ಪೀಕ್ ಹವರ್ ನಲ್ಲಿ ಬೆಳಗ್ಗೆ ಮೆಟ್ರೋ ರೈಲುಗಳು ಮೂರು ನಿಮಿಗಳ ಆವರ್ತನಲ್ಲಿ ಸಂಚಾರ ಸೇವೆ ನೀಡುತ್ತವೆ. ಇದೇ ವಳೆ ನಿಲ್ದಾಣಕ್ಕೆ ಬರುವ ರೈಲುಗಳು ಫುಲ್ ಪ್ಯಾಕ್ ಆಗಿ ಬರುತ್ತವೆ. ಹೀಗಾಗಿ ನಿಲ್ದಾಣಗಳಲ್ಲಿ ನಿಂತ ಜನರಿಗೆ ರೈಲು ಏರಲು ಆಗದೇ ಬೇರೆ ರೈಲುಗಳಿಗೆ ಕಾಯಬೇಕಾಗಿದೆ. ಸಂಜೆ ವೈಟ್‌ಫೀಲ್ಡ್ ಮಾರ್ಗದಲ್ಲಿ ಜನರಿಗೆ ಸಾಕಷ್ಟು ತೊಂದರೆ ಅಗುತ್ತಿದೆ ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.












Click it and Unblock the Notifications