Namma Metro: ನಿಗದಿಯಂತೆ ಡಿಸೆಂಬರ್‌ನಲ್ಲಿ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ
ಬೆಂಗಳೂರು, ನವೆಂಬರ್ 26: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗ ವಿಸ್ತರಣೆಯಾಗುತ್ತಲೇ ಇದೆ, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಗುಲಾಬಿ ಮಾರ್ಗದ 21.26 ಕಿ.ಮೀ. ಕುರಿತು ಈಗ ಅಪ್‌ಡೇಟ್ ಸಿಕ್ಕಿದೆ. ಈ ಮಾರ್ಗದ ಒಂದು ಹಂತ ಡಿಸೆಂಬರ್‌ಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಓಡಿಸಲು ಬೋಗಿ ನೀಡಲು ಬಿಇಎಂಎಲ್ ಜೊತೆ ಒಪ್ಪಂದವಾಗಿದೆ.
ಗುಲಾಬಿ ಮಾರ್ಗ ಕಾಳೇನ ಅಗ್ರಹಾರ (ಗೊಟ್ಟಿಗೆರೆ)-ನಾಗವಾರ ಮಾರ್ಗದಲ್ಲಿ ಒಂದು ಹಂತ ಡಿಸೆಂಬರ್ 2025ರಲ್ಲಿ ಸಂಚಾರಕ್ಕೆ ಮುಕ್ತವಾಗಲು ತಯಾರಿ ನಡೆಸುತ್ತಿದೆ. ಇದಕ್ಕಾಗಿ ತಾವರೆಕೆರೆ-ಕಾಳೇನ ಅಗ್ರಹಾರ ನಡುವಿನ 7.5 ಕಿ. ಮೀ. ಎತ್ತರಿಸಿದ ಮಾರ್ಗದಲ್ಲಿ 6 ನಿಲ್ದಾಣಗಳ ಕಾಮಗಾರಿ ಚುರುಕಿನಿಂದ ಸಾಗಿದೆ.

ಈ ಮಾರ್ಗದಲ್ಲಿ ಬಿಎಂಆರ್‌ಸಿಎಲ್ ರೈಲು ಓಡಿಸಲು ಬೆಮೆಲ್ 2025ರ ಮಧ್ಯದಲ್ಲಿ ಮೊದಲ ಸೆಟ್ ರೈಲುಗಳನ್ನು ನೀಡಲಿದೆ. ಒಪ್ಪಂದದ ಪ್ರಕಾರ ಮುಂದಿನ ವರ್ಷದ ಜೂನ್‌ಗೆ 53 ಸೆಟ್ ರೈಲುಗಳನ್ನು ಬೆಮೆಲ್ ನೀಡಬೇಕಿದೆ. ಜುಲೈ ವೇಳೆಗೆ ಮತ್ತೊಂದು ಸೆಟ್ ಹಸ್ತಾಂತರವಾಗುವ ನಿರೀಕ್ಷೆ ಇದೆ. ಡಿಸೆಂಬರ್ ವೇಳೆಗೆ ಎರಡು ಸೆಟ್ ಸಂಪೂರ್ಣವಾಗಿ ಕೈ ಸೇರಲಿದ್ದು, ಡಿಸೆಂಬರ್‌ನಲ್ಲಿ ಮಾರ್ಗದ ಉದ್ಘಾಟನೆ ವೇಳೆಗೆ 9-10 ಸೆಟ್ ರೈಲುಗಳು ಸಿದ್ಧವಾಗಿರಲಿದೆ.
ಯಾವ-ಯಾವ ನಿಲ್ದಾಣಗಳು: ಈ ಮಾರ್ಗದಲ್ಲಿ ತಾವೆರೆಕೆ, ಜಯದೇವ ಇಂಟರ್ ಚೇಂಜ್, ಜೆಪಿ ನಗರ 4ನೇ ಹಂತ, ಐಐಎಂಬಿ, ಹುಳಿಮಾವು, ಕಾಳೇನ ಅಗ್ರಹಾರ ಪ್ರಮುಖ ನಿಲ್ದಾಣಗಳು. ಈ ಮಾರ್ಗದ ನಿಲ್ದಾಣಗಳ ನಿರ್ಮಾಣದಲ್ಲಿ ರೈಲು ನಿಲ್ಲುವ ವಯಾಡಕ್ಟ್ ಬ್ರಿಡ್ಜ್ ಸಂಪೂರ್ಣ ಸಿದ್ಧವಾಗಿದೆ. ರೈಲು ಹಳಿಗಳನ್ನು ಹಾಕುವ ಕಾರ್ಯ ಶೇ 70ರಷ್ಟು ಪ್ರಗತಿಯಲ್ಲಿದೆ.
4 ನಿಲ್ದಾಣಗಳಿಗೆ ಆರ್ಕಿಟೆಕ್ಚರ್ ಅಂತಿಮ ರೂಪ ನೀಡಲಾಗುತ್ತಿದೆ. ಜೆ. ಪಿ. ನಗರ ನಿಲ್ದಾಣ ಮೆಟ್ರೋ ಹಂತ-3ರ ವ್ಯಾಪ್ತಿಗೂ ಒಳಪಡಲಿದ್ದು, ಆ ಭಾಗ ಮುಗಿದಿದೆ. ಮಾರ್ಚ್ 2025ಕ್ಕೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.
ಕಾಳೇನ ಅಗ್ರಹಾರದಲ್ಲಿ ಪ್ಲಾಟ್‌ಫಾರ್ಮ್‌ನ 50ರಷ್ಟು ಕಾಮಗಾರಿ ಮುಗಿದಿದ್ದು, ಬಲಭಾಗದಲ್ಲಿ ಇನ್ನೂ ಕಾಮಗಾರಿ ನಡೆಯಬೇಕಿದೆ. ಗುಲಾಬಿ ಮಾರ್ಗದ ರೈಲುಗಳು ಕೊತ್ತನೂರು ಡಿಪೋದಿಂದ ಸಂಚಾರ ನಡೆಸಲಿವೆ. ಈ ಡಿಪೋದ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಮಾರ್ಚ್ 2025ಕ್ಕೆ ಎಲ್ಲಾ ಸಿವಿಲ್ ಕೆಲಸಗಳನ್ನು ಮುಗಿಸಲು ಬಿಎಂಆರ್‌ಸಿಎಲ್ ಗುರಿ ಹೊಂದಿದೆ. ಅಲ್ಲದೇ ಸಿಗ್ನಲಿಂಗ್, ಟೆಲಿ ಕಮ್ಯನಿಕೇಶನ್ ಮುಂತಾದ ಕಾಮಗಾರಿಗಳನ್ನು ಬಳಿಕ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಈ ಗುಲಾಬಿ ಮಾರ್ಗದಲ್ಲಿ ಸುರಂಗ ಮಾರ್ಗ ಸಹ ಸೇರಿದೆ. 9ನೇ ಸುರಂಗ ಕೊರೆಯುವ ಟಿಬಿಎಂ ಯಂತ್ರ ಈ ವರ್ಷದ ಅಕ್ಟೋಬರ್ 30ರಂದು 13.86 ಕಿ. ಮೀ. ಸುರಂಗ ಮಾರ್ಗವನ್ನು ಕೊರೆದು ತನ್ನ ಕಾರ್ಯವನ್ನು ಪೂರ್ಣಗೊಳಿಸಿದೆ. ಈ ಮೂಲಕ ಗುಲಾಬಿ ಕಾರಿಡಾರ್ ಸುರಂಗ ಮಾರ್ಗದ ನಿರ್ಮಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ.
ಸುರಂಗ ಮಾರ್ಗದಲ್ಲಿ ಹಳಿ ಹಾಕುವ ಕಾಮಗಾರಿ ನಡೆಯುತ್ತಿದೆ. 4 ಕಿ. ಮೀ. ಕಾಮಗಾರಿ ಪೂರ್ಣಗೊಂಡಿದೆ. ಟೆಕ್ಸ್‌ಮಾಕೋ ರೈಲು ಇಂಜಿನಿಯರಿಂಗ್ ಲಿಮಿಟೆಡ್ ಕೆಲಸ ನಿಧಾನಗತಿಯಲ್ಲಿ ಸಾಗಿದ್ದು, ಈಗ ಎಲ್ & ಟಿ ಲಿಮಿಟೆಡ್ ಸಹ ಈ ಕೆಲಸಕ್ಕೆ ಕೈ ಜೋಡಿಸಿದೆ. ಈ ಮಾರ್ಗದ ಸುರಂಗ ಮಾರ್ಗ 2026ರಕ್ಕೆ ಸಂಪೂರ್ಣವಾಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಗುಲಾಬಿ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳು ಬರಲಿವೆ. 2025ರ ಡಿಸೆಂಬರ್‌ನಲ್ಲಿ ಎತ್ತರಿಸಿದ ಮಾರ್ಗದಲ್ಲಿ 7 ಕಿ. ಮೀ. ರೈಲು ಸಂಚಾರ ಆರಂಭವಾಗಲಿದೆ. ಒಟ್ಟು ಎರಡು ಹಂತದಲ್ಲಿ ಈ ಮಾರ್ಗದಲ್ಲಿ ರೈಲು ಓಡಿಸಲು ಬಿಎಂಆರ್‌ಸಿಎಲ್ ಯೋಜನೆಯನ್ನು ರೂಪಿಸಿದೆ.












Click it and Unblock the Notifications