Namma Metro Pink Line: 'ತುಂಗಾ' ಟಿಬಿಎಂನಿಂದ ಒಂದೇ ತಿಂಗಳಲ್ಲಿ ಗರಿಷ್ಠ ಸುರಂಗ ಕಾರ್ಯ
ಬೆಂಗಳೂರು, ಆಗಸ್ಟ್ 01: ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ನಮ್ಮ ಮೆಟ್ರೋ ಗುಲಾಬಿ ಮಾರ್ಗದ (Metro Pink Line) ಸುರಂಗ ಕಾಮಗಾರಿಯಲ್ಲಿ ಒಂದೇ ತಿಂಗಳಲ್ಲಿ ಗರಿಷ್ಠ ಸಾಧನೆ ಮಾಡಿದೆ. ಟನಲ್ ಬೋರಿಂಗ್ ಮಷಿನ್ (ಟಿಬಿಎಂ) 'ತುಂಗಾ' ನಿಗದಿತ ಸುರಂಗ ಕಾರ್ಯ ಮುಗಿಸಿದೆ.
ನಗರದ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ನಮ್ಮ ಮೆಟ್ರೋ ಪಿಂಕ್ ಲೈನ್ ನಿರ್ಮಾಣವಾಗುತ್ತಿದೆ. ನಗರದ ಹೃದಯಭಾಗದಲ್ಲಿಯೇ ಈ ಮಾರ್ಗ ಹಾದು ಹೋಗಲಿದ್ದು, ಬಹುತೇಕ ಈ ಲೈನ್ ನೆಲದಡಿಯಲ್ಲಿಯೇ ನಿರ್ಮಾಣವಾಗುತ್ತಿದೆ. ವರ್ಷಗಳಿಂದಲೂ ಈ ಮಾರ್ಗದಲ್ಲಿ 'ತುಂಗಾ, ಭದ್ರಾ ಮತ್ತು ಉರ್ಜಾ' ಟಿಬಿಎಂಗಳು ಸುರಂಗ ಕಾರ್ಯ ಮಾಡುತ್ತಿವೆ.

ಸದ್ಯ BMRCL ಒಂದೇ ತಿಂಗಳಲ್ಲಿ ಗರಿಷ್ಠ ಸುರಂಗ ಕೊರೆಯುವ ವಿಚಾರ ಕುರಿತು ಟ್ವೀಟ್ (ಎಕ್ಸ್) ಮಾಡಿದೆ. ಈವರೆಗಿನ ಸುರಂಗ ಕಾರ್ಯದಲ್ಲಿ ಕಳೆದ ಜುಲೈನಲ್ಲಿ ಅತ್ಯಧಿಕ ಸುರಂಗ ಕೊರೆಯಲಾಗಿದೆ. ಜುಲೈ 2024 ರಲ್ಲಿ ಕೆಜಿ ಹಳ್ಳಿಯ ನಡುವೆ M/s ITD ಮೂಲಕ ನಾಗವಾರ ಹಿಂಪಡೆಯುವ ಶಾಫ್ಟ್ ಕಡೆಗೆ 308 ಮೀಟರ್ ಸುರಂಗವನ್ನು ಯಶಸ್ವಿಯಾಗಿ ಕೊರೆಯಲಾಗಿದೆ.
ರಸ್ತೆಯಲ್ಲಿ ಹೊಂಡ ಬಿದ್ದು ಕಾಮಗಾರಿಗೆ ಅಡಚಣೆ
ತುಂಗಾ ಟಿಬಿಎಂ ಕೊರೆಯುವ ಇದೇ ನೆಲದಡಿ ಸುರಂಗ ಮಾರ್ಗದ ದಾರಿಯಲ್ಲಿ ಕೆಜಿ ಹಳ್ಳಿಯ ಕಡೆಗೆ ರಸ್ತೆ ಮೇಲೆ ದೊಡ್ಡ ಹೊಂಡ ಬಿದ್ದು, ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ಈ ನಡುವೆಯೇ ಒಂದೇ ತಿಂಗಳಲ್ಲಿ ತುಂಗಾ ಟಿಬಿಎಂ ಉತ್ತಮ ಪ್ರಗತಿ ಸಾಧಿಸಿದೆ.

ಇದೇ ಮಾರ್ಗದಲ್ಲಿ 2022 ಮೇ ತಿಂಗಳಲ್ಲಿ M/s L&T ಕಂಪನಿಯು ಕಂಟೋನ್ಮೆಂಟ್ ಮತ್ತು ಪಾಟರಿಟೌನ್ ನಡುವೆ ಉರ್ಜಾ ಟಿಬಿಎಂ 273 ಮೀಟರ್ ಉತ್ತಮ ಕಾರ್ಯಸಾಧನೆ ಮಾಡಿತ್ತು ಎಂದು ಟ್ವಿಟ್ ನಲ್ಲಿ ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಅಡ್ಡಿಗಳ ಮಧ್ಯೆ ಸುರಂಗ ಕಾರ್ಯದ ಪ್ರಗತಿ
ಜೂನ್ ತಿಂಗಳಲ್ಲಿ ಇದೇ ಕಾಳೇನ ಅಗ್ರಹಾರ-ನಾಗವಾರ ನಮ್ಮ ನಮ್ಮ ಮೆಟ್ರೋ ಪಿಂಕ್ ಭೂಗತ ಮಾರ್ಗದ ಕೆಲಸ ನಡೆಯುತ್ತಿರುವಾಗಲೇ ದೊಡ್ಡ ಕಲ್ಲು ಸಹ ಎದುರಾಗಿ ಕೆಲಸಕ್ಕೆ ತೊಂದರೆ ಆಗಿತ್ತು. ಅಲ್ಲದೇ ಜೂನ್ ನಲ್ಲಿ ಕೆ.ಜಿ.ಹಳ್ಳಿಯಲ್ಲಿ ರಸ್ತೆಯ ಮೇಲ್ಮೈನಲ್ಲಿ ಹೊಂಡ (ಸಿಂಕ್ ಹೋಲ್) ಕಾಣಿಸಿಕೊಂಡಿತ್ತು. ಈ ಮಾರ್ಗದಲ್ಲಿ ಮೂರನೇ ಬಾರಿಗೆ ರಸ್ತೆಯಲ್ಲಿ ಹೊಂಡ ಕಂಡು ಬಂದಿದ್ದು, ಕಾಂಕ್ರೀಟ್ ಮುಚ್ಚಿದ ಬಳಿಕವೇ ಕೆಲಸ ಸಾಗಿತ್ತು. ಹೀಗೆ ಅಡ್ಡಿ ಆತಂಕ ಇದ್ದರೂ ಸಹ ಮೆಟ್ರೊದ ಪಿಂಕ್ ಲೈನ್ ಭೂಗತ ಕಾರ್ಯದಲ್ಲಿ ಒಂದೇ ತಿಂಗಳಲ್ಲಿ ಗರಿಷ್ಠ ಸಾಧನೆ ಆಗಿದೆ.












Click it and Unblock the Notifications