ಮೆಟ್ರೋ ಕಾಮಗಾರಿ 2015ರ ಮಾರ್ಚ್ ಅಂತ್ಯಕ್ಕೆ ಪೂರ್ಣ
ಬೆಂಗಳೂರು, ಜ.29 : ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ ಕಾಮಾಗಾರಿಗಳು 2015ರ ಮಾರ್ಚ್ ಅಂತ್ಯದಲ್ಲಿ ಪೂರ್ಣಗೊಳ್ಳಲಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 2013ರ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ಸದನಕ್ಕೆ ಮಾಹಿತಿ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಬಿಜೆಪಿ ಶಾಸಕ ಬಿ.ಎನ್.ವಿಜಯಕುಮಾರ್ ಮತ್ತು ಜೆಡಿಎಸ್ ಶಾಸಕ ಚೆಲುವರಾಯಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 42 ಕಿ.ಮೀ. ಉದ್ದದ ಮೆಟ್ರೊ-1 ಹಂತ (ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಹಾಗೂ ನಾಗಸಂದ್ರ-ತುಮಕೂರು ರಸ್ತೆ-ಪುಟ್ಟೇನಹಳ್ಳಿ) ಕಾಮಗಾರಿಯನ್ನು 2015ರ ಮಾರ್ಚ್ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುವುದು ಎಂದರು. [ಮಂಗಳವಾರದ ಕಲಾಪದ ಹೈಲೈಟ್ಸ್]

ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಂಡ ನಂತರ 72 ಕಿ.ಮೀ ಉದ್ದದ ಮೆಟ್ರೊ-2, ಸುಂಕದಕಟ್ಟೆ-ಮಾಗಡಿ ರಸ್ತೆ ಸಂಪರ್ಕಿಸುವ ಮೆಟ್ರೊ-3ನೇ ಹಂತದ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು. ರೀಚ್ 2 ಕಾಮಗಾರಿ ಶೇ.70ರಷ್ಟಾಗಿದ್ದು, 2014ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
2014ರ ಫೆಬ್ರವರಿ ವೇಳಗೆ ರೀಚ್ 3 ಮತ್ತು ರೀಚ್ 3ಎ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಾಗಲೇ ಈ ಕಾಮಗಾರಿಗಳು ಶೇ.95ರಷ್ಟು ಆಗಿದ್ದು, ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಲಿವೆ ಎಂದರು. ರೀಚ್-3 ಬಿ ಕಾಮಗಾರಿಯ ನಿಲ್ದಾಣ ಕಾಮಗಾರಿ ಶೇ.66ರಷ್ಟು ಮುಗಿದಿದ್ದು, ಆಗಸ್ಟ್ ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಿದ್ದರಾಮಯ್ಯ ಸದನಕ್ಕೆ ಮಾಹಿತಿ ನೀಡಿದರು.
ಸುರಂಗ ಮಾರ್ಗಗಳು : ಪೂರ್ವ-ಪಶ್ಚಿಮ ಸುರಂಗ ಮಾರ್ಗ ಡಿಸೆಂಬರ್‌ಗೆ ವೇಳೆಗೆ ಬಳಕೆಗೆ ಲಭ್ಯವಾಗಲಿದೆ. ಉತ್ತರ-ದಕ್ಷಿಣ ಸುರಂಗ ಮಾರ್ಗ ಮತ್ತು ಮೆಜೆಸ್ಟಿಕ್ ಸ್ಟೇಷನ್ ಸುರಂಗ ಕಾಮಗಾರಿ ಶೇ.45ರಷ್ಟು ಮುಗಿದಿದ್ದು, 2015ರ ಮಾರ್ಚ್‌ಗೆ ಪೂರ್ಣಗೊಳ್ಳಲಿದೆ ಎಂದು ಸಿಎಂ ವಿವರಿಸಿದರು.
ವೆಚ್ಚ ಹೆಚ್ಚಳ : ನಮ್ಮ ಮೆಟ್ರೋ ಕಾಮಗಾರಿ ವಿಳಂಬದಿಂದಾಗಿ ಮೆಟ್ರೊ-1ಹಂತದ ಕಾಮಗಾರಿ ವೆಚ್ಚ 2,200 ಕೋಟಿ ರೂ.ಗಳಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಒಂದನೇ ಹಂತದ ಕಾಮಗಾರಿಯ ಅಂದಾಜು ಮೊತ್ತ 11,609 ಕೋಟಿ ರೂ.ಗಳಾಗಿದ್ದು, 2013ರ ಡಿಸೆಂಬರ್ ಅಂತ್ಯಕ್ಕೆ 10,372 ಕೋಟಿ ರೂ. ಖರ್ಚಾಗಿದೆ. ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ 13,845 ಕೋಟಿ ರೂ. ಖರ್ಚಾಗಬಹುದು ಎಂದರು.












Click it and Unblock the Notifications