Namma Metro; ಮೆಟ್ರೋ ಫೇಸ್‌-3 ಯೋಜನೆ ವಿವರ, ನಿಲ್ದಾಣಗಳು

ಬೆಂಗಳೂರು, ನವೆಂಬರ್ 22; ಬೆಳೆಯುತ್ತಿರುವ ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆ ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಮೆಟ್ರೋ ಫೇಸ್-3 ಯೋಜನೆಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಒಪ್ಪಿಗೆ ನೀಡಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡಬೇಕಿದೆ.

ನಮ್ಮ ಮೆಟ್ರೋ ಯೋಜನೆಯ 3ನೇ ಹಂತ 44.65 ಕಿ. ಮೀ.ಗಳನ್ನು ಒಳಗೊಂಡಿದೆ. ಈ ಯೋಜನೆಗೆ 16328 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಮಾತ್ರವಲ್ಲದೇ ಸಾಲ ಪಡೆದು ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.

ಮೆಟ್ರೋ 3ನೇ ಹಂತದ ಯೋಜನೆಯನ್ನು ಎರಡು ಕಾರಿಡಾರ್ ಆಗಿ ವಿಂಗಡನೆ ಮಾಡಲಾಗಿದೆ. ಯೋಜನೆಗೆ ಇನ್ನೂ ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿಲ್ಲ. 2023-24ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಯೋಜನೆಗೆ ಹಸಿರು ನಿಶಾನೆ ತೋರಿಸಲಿದೆಯೇ? ಎಂದು ಕಾದು ನೋಡಬೇಕಿದೆ.

314 ಕಿ. ಮೀ. ನಮ್ಮ ಮೆಟ್ರೋ ಜಾಲ

314 ಕಿ. ಮೀ. ನಮ್ಮ ಮೆಟ್ರೋ ಜಾಲ

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) 2025ರ ಜೂನ್ ಅಂತ್ಯಕ್ಕೆ ಬೆಂಗಳೂರು ನಗರದಲ್ಲಿ 175 ಕಿ. ಮೀ. ಮೆಟ್ರೋ ಮಾರ್ಗ ನಿರ್ಮಾಣ, 2041ರ ಅಂತ್ಯಕ್ಕೆ 314 ಕಿ. ಮೀ. ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜು ಪರ್ವೇಜ್‌ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಮಾತನಾಡುವ ಸಂದರ್ಭದಲ್ಲಿ ಎರಡು ಮತ್ತು ಮೂರನೇ ಹಂತದ ಮಾರ್ಗಗಳು ಸೇರಿ 2041ರ ವೇಳೆಗೆ ಬೆಂಗಳೂರು ನಗರ 314 ಕಿ. ಮೀ. ನಮ್ಮ ಮೆಟ್ರೋ ಜಾಲ ಹೊಂದಿರಲಿದೆ ಎಂದು ಹೇಳಿದ್ದಾರೆ.

3ನೇ ಹಂತದಲ್ಲಿ ಎರಡು ಕಾರಿಡಾರ್‌ಗಳು

3ನೇ ಹಂತದಲ್ಲಿ ಎರಡು ಕಾರಿಡಾರ್‌ಗಳು

ಕರ್ನಾಟಕ ಸರ್ಕಾರ 44.65 ಕಿ. ಮೀ.ಗಳ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಒಪ್ಪಿಗೆ ನೀಡಿದೆ. ಎರಡು ಕಾರಿಡಾರ್‌ಗಳನ್ನು ಈ ಯೋಜನೆ ಹೊಂದಿದೆ. ಹೊರವರ್ತುಲ ರಸ್ತೆಯ ಪಶ್ಚಿಮಕ್ಕೆ ಒಂದು ಕಾರಿಡಾರ್ ಮತ್ತು ಮಾಗಡಿ ರಸ್ತೆ ಮೂಲಕ ಮತ್ತೊಂದು ಕಾರಿಡಾರ್ ಸಾಗಲಿದೆ. 3ನೇ ಹಂತದ ಮೆಟ್ರೋ ಯೋಜನೆಗೆ 16328 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ಅನುಮೋದನೆ ಸಿಕ್ಕಿದ ಬಳಿಕ ಯೋಜನೆಗೆ ಚಾಲನೆ ದೊರೆಯಲಿದೆ. 2028ರಲ್ಲಿ ಈ ಯೋಜನೆ ಪೂರ್ಣಗೊಂಡು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.

ವೆಚ್ಚ ಹಂಚಿಕೆ ಸೂತ್ರ ಹೇಗೆ?

ವೆಚ್ಚ ಹಂಚಿಕೆ ಸೂತ್ರ ಹೇಗೆ?

ನಮ್ಮ ಮೆಟ್ರೋ 3ನೇ ಹಂತದ ಯೋಜನೆಯ ವೆಚ್ಚ ಸದ್ಯದ ಮಾಹಿತಿ ಪ್ರಕಾರ 16328 ಕೋಟಿ ರೂ.ಗಳು. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ಶೇ 20ರಷ್ಟು ಅನುದಾನ ನೀಡಲಿವೆ. ಉಳಿದ ಶೇ 60ರಷ್ಟು ಅನುದಾನವನ್ನು ಸಾಲವಾಗಿ ಪಡೆದು ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ.

ಸದ್ಯ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ ವಿಸ್ತರಣೆ ಮಾರ್ಗ, 2ನೇ ಹಂತದ ಮೆಟ್ರೋ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಹ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತಿದೆ.

ನಮ್ಮ ಮೆಟ್ರೋ ಫೇಸ್-3 ಕಾರಿಡಾರ್‌ 1

ನಮ್ಮ ಮೆಟ್ರೋ ಫೇಸ್-3 ಕಾರಿಡಾರ್‌ 1

ಜೆ. ಪಿ. ನಗರ 4ನೇ ಹಂತದಿಂದ ಕೆಂಪಾಪುರವನ್ನು ಹೊರವರ್ತುಲ ರಸ್ತೆ ಮೂಲಕ ನಮ್ಮ ಮೆಟ್ರೋ ಫೇಸ್‌-3 ಮಾರ್ಗದ ಕಾರಿಡಾರ್-1 ಸಂಪರ್ಕಿಸುತ್ತದೆ. ಈ ಜಾಲ 32.15 ಕಿ. ಮೀ. ಇರಲಿದ್ದು, ಒಟ್ಟು 22 ನಿಲ್ದಾಣಗಳಿವೆ.

ಈ ಮಾರ್ಗದಲ್ಲಿ ಜೆಪಿ ನಗರ 4ನೇ ಹಂತ, ಜೆಪಿ ನಗರ 5ನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್, ಹೊಸಕೆರೆಹಳ್ಳಿ, ದ್ವಾರಕಾ ನಗರ, ಮೈಸೂರು ರಸ್ತೆ, ನಾಗರಬಾವಿ ಸರ್ಕಲ್, ವಿನಾಯಕ ಲೇಔಟ್, ಪಾಪರೆಡ್ಡಿ ಪಾಳ್ಯ, ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್, ಸುಮನಹಳ್ಳಿ ಕ್ರಾಸ್, ಚೌಡೇಶ್ವರಿ ನಗರ, ಫ್ರೀಡಂ ಫೈಟರ್ಸ್ ಕಾಲೋನಿ, ಕಂಠೀರವ ನಗರ, ಪೀಣ್ಯ, ಮುತ್ಯಾಲ ನಗರ, ಬಿಇಎಲ್ ಸರ್ಕಲ್, ನಾಗಶೆಟ್ಟಿಹಳ್ಳಿ, ಹೆಬ್ಬಾಳ ರೈಲು ನಿಲ್ದಾಣ, ಕೆಂಪಾಪುರ ನಿಲ್ದಾಣಗಳಿವೆ.

ಮೆಟ್ರೋ ಫೇಸ್‌-3 ಕಾರಿಡಾರ್‌ 2

ಮೆಟ್ರೋ ಫೇಸ್‌-3 ಕಾರಿಡಾರ್‌ 2

ನಮ್ಮ ಮೆಟ್ರೋ ಫೇಸ್ -3 ಹೊಸಹಳ್ಳಿ-ಕಡಬಗೆರೆ ಸಂಪರ್ಕ ಕಲ್ಪಿಸುತ್ತದೆ. 12.5 ಕಿ. ಮೀ. ವ್ಯಾಪ್ತಿಯ ಜಾಲದಲ್ಲಿ 9 ನಿಲ್ದಾಣಗಳಿವೆ.

ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೆರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್‌, ಕಡಬಗೆರೆ ನಿಲ್ದಾಣಗಳು ಇರಲಿವೆ.

ಫೇಸ್‌-3 ಯೋಜನೆಯಲ್ಲಿ ಕನಕಪುರ ರೋಡ್ ಜಂಕ್ಷನ್, ಸಾರಕ್ಕಿ ಜಂಕ್ಷನ್‌ನಲ್ಲಿ ರೋಡ್ ಕಂ ಫ್ಲೈ ಓವರ್ ನಿರ್ಮಾಣವಾಗಲಿದೆ. ಕಾಮಾಕ್ಯ-ಇಟ್ಟಮಡು-ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿಯೂ ಇದೇ ಮಾದರಿ ವ್ಯವಸ್ಥೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+