Namma Metro Phase-3: ನಮ್ಮ ಮೆಟ್ರೋ 3ನೇ ಹಂತದಿಂದ ಎಷ್ಟೆಲ್ಲಾ ಅನುಕೂಲ; ಮಾಹಿತಿ, ವಿವರ
ನಮ್ಮ ಮೆಟ್ರೋದ ಮಹತ್ವದ ಮೂರನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಿತ್ತಳೆ ಮಾರ್ಗದ ಯೋಜನೆಗಾಗಿ ₹15,611 ಕೋಟಿ ಅಂದಾಜು ವೆಚ್ಚವಾಗುವ ನಿರೀಕ್ಷೆಯಿದೆ. ಮೂರನೇ ಹಂತದಲ್ಲಿ 44.65 ಕಿಲೋಮೀಟರ್ ಮಾರ್ಗದಲ್ಲಿ ಒಟ್ಟು 31 ನಿಲ್ದಾಣಗಳು ನಿರ್ಮಾಣವಾಗಲಿದ್ದು ಎರಡು ಎಲಿವೇಟೆಡೆ ಕಾರಿಡಾರ್ ಕೂಡ ಇರಲಿದೆ. ವರಮಹಾಲಕ್ಷ್ಮಿ ಹಬ್ಬದಂದೇ ಕೇಂದ್ರ ಸರ್ಕಾರ ಬೆಂಗಳೂರು ಜನತೆಗೆ ಭರ್ಜರಿ ಕೊಡುಗೆ ನೀಡಿದೆ.
ಮೊದಲ ಕಾರಿಡಾರ್ ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32.15 ಕಿ.ಮೀ. ಮಾರ್ಗದಲ್ಲಿ 22 ನಿಲ್ದಾಣಗಳು ಬರಲಿದ್ದಿ, ಎರಡನೇ ಕಾರಿಡಾರ್ ನಲ್ಲಿ ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.50 ಕಿಲೋಮೀಟರ್ ಮಾರ್ಗದಲ್ಲಿ 9 ನಿಲ್ದಾಣಗಳು ತಲೆ ಎತ್ತಲಿವೆ. ಕಿತ್ತಳೆ ಮಾರ್ಗ ಪೂರ್ಣಗೊಂಡ ಬಳಿಕ ಬೆಂಗಳೂರು ಮೆಟ್ರೋ ಜಾಲದ ಉದ್ದ 220.20 ಕಿಮೀ ಗೆ ಏರಿಕೆಯಾಗಲಿದೆ.

ಪ್ರಮುಖ ಪ್ರಯೋಜನಗಳು
ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಬೆಂಗಳೂರಿನ ಚಿತ್ರಣವನ್ನು ಮತ್ತಷ್ಟು ಬದಲಾಯಿಸಲಿದೆ. ಅದರಲ್ಲೂ ಹೆಚ್ಚುತ್ತಿರುವ ನಗರದ ಟ್ರಾಫಿಕ್ ಸಮಸ್ಯೆಗೆ ನಮ್ಮ ಮೆಟ್ರೋ ಪರಿಹಾರ ಎನ್ನಲಾಗಿದೆ. ಈ ಮಾರ್ಗವು ಬೆಂಗಳೂರಿನ ಪ್ರಮುಖ ಸ್ಥಳಗಳಾದ ಪೀಣ್ಯ ಕೈಗಾರಿಕಾ ಪ್ರದೇಶ, ಬನ್ನೇರುಘಟ್ಟ ರಸ್ತೆ ಮತ್ತು ಹೊರ ವರ್ತುಲ ರಸ್ತೆಯ ಐಟಿ ಹಬ್‌ಗಳು ಮತ್ತು ತುಮಕೂರು ರಸ್ತೆಯಲ್ಲಿರುವ ಉತ್ಪಾದನಾ ಘಟಕಗಳನ್ನು ಒಳಗೊಂಡಂತೆ ಬೆಂಗಳೂರಿನ ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ಕಾರಣ ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ವೇಗ ತುಂಬಲಿದೆ.
ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಪಿಇಎಸ್ ವಿಶ್ವವಿದ್ಯಾಲಯ, ಅಂಬೇಡ್ಕರ್ ಕಾಲೇಜು, ದಯಾನಂದ ಸಾಗರ್ ವಿಶ್ವವಿದ್ಯಾಲಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಮುಖ ಆಸ್ಪತ್ರೆಗಳು, ಕೈಗಾರಿಕ ಕೇಂದ್ರಗಳ ನಡುವಿನ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ.
ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ
ಬೆಂಗಳೂರಿನ ದಕ್ಷಿಣ ಭಾಗ, ಹೊರ ವರ್ತುಲ ರಸ್ತೆ ಪಶ್ಚಿಮ ಮತ್ತು ಮಾಗಡಿ ರಸ್ತೆಯನ್ನು ಸಂಪರ್ಕಿಸುವ ಮೂಲಕ ಸಂಚಾರವನ್ನು ಸುಲಭವಾಗಿಸುತ್ತದೆ. ಔಟರ್ ರಿಂಗ್ ರೋಡ್ ವೆಸ್ಟ್ ಮತ್ತು ಮಾಗಡಿ ರಸ್ತೆಯಂತಹ ಹೆಚ್ಚು ವಾಹನ ದಟ್ಟಣೆ ಇರುವ ಸ್ಥಳಗಳನ್ನು ಸಂಪರ್ಕಿಸುವ ಕಾರಣ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.
ರಸ್ತೆ ಸಾರಿಗೆ ಮೇಲಿನ ಅವಲಂಬನೆ ಕಡಿಮೆಯಾಗುವ ಕಾರಣ, ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ. ವೇಗದ ಸಂಪರ್ಕ ಜಾಲದ ಪರಿಣಾಮ ಪ್ರಯಾಣಿಕರ ಸಮಯ ಕೂಡ ಉಳಿತಾಯವಾಗಲಿದ್ದು, ಉತ್ಪಾದಕತೆಯನ್ನು ಹೆಚ್ಚಿಸಲಿದೆ. ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ.












Click it and Unblock the Notifications