MetroMitra: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, 2024ರಿಂದ ಆಟೋ ರೈಡ್ ಸೇವೆ ಆರಂಭ, ಮಾಹಿತಿ
ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆ ಆಗಿದೆ. ಬಳಕೆದಾರರು ಕ್ರಮೇಣ ಹೆಚ್ಚಾಗುತ್ತಿದೆ. ಈ ಸಂಬಂಧ ಕೊನೆ ಮೈಲಿಗೂ ಸಂಚಾರ ಸೇವೆ ನೀಡುವ ನಿಟ್ಟಿನಲ್ಲಿ ಬೆಂಗಳೂರು ಮೂಲದ ಆಟೋ ರಿಕ್ಷಾ ಸೇವೆ 'ಮೆಟ್ರೋಮಿತ್ರ' (Metromitra app) ತನ್ನ ಸ್ವಂತ ವಾಟ್ಸಾಪ್ ಚಾಟ್‌ಬಾಟ್ ವೈಶಿಷ್ಟ್ಯವನ್ನು ಹೊಸ ವರ್ಷ ಜನವರಿ 2024 ರಿಂದ ಪ್ರಾರಂಭಿಸಲಿದೆ.
'ಮೆಟ್ರೋಮಿತ್ರ' ಆಟೋ ವಾಟ್ಸಾಪ್ ಚಾಟ್‌ಬಾಟ್ ಬಳಕೆದಾರರಿಗೆ ಕೇವಲ ಮೂರು ಕ್ಲಿಕ್‌ಗಳಲ್ಲಿ ಮೆಟ್ರೋ ನಿಲ್ದಾಣಗಳಿಗೆ ಮತ್ತು ಅಲ್ಲಿಂದ ರೈಡ್‌ಗಳನ್ನು ಬುಕ್ ಮಾಡಲು ಅನುವು ಮಾಡಿಕೊಡುತ್ತದೆ. ಪ್ರಯಾಣಿಕರು ಮಟ್ರೋ ನಿಲ್ದಾಣಗಳಿಂದ ತಮ್ಮ ಗಮ್ಯ ಸ್ಥಳ (ಕೊನೆ ಮೈಲಿ)ಗಳಿಗೆ ಸಂಪರ್ಕ ಸೇತುವೆ ಆಗಿ ಕೆಲಸ ಮಾಡುತ್ತದೆ. ಈ ಚಾಟ್‌ಬಾಟ್ ವೈಶಿಷ್ಟ್ಯವು ಬಳಕೆದಾರರಿಗೆ ಇತರ ಸ್ಥಳಗಳಿಗೆ ಆಟೋ ರೈಡ್‌ಗಳನ್ನು ಬುಕ್ ಮಾಡಲು ಸಹ ಅವಕಾಶ ಕಲ್ಪಿಸುತ್ತದೆ.

ಚಾಟ್‌ಬಾಟ್ ಮೂಲಕ ಆಟೋರಿಕ್ಷಾ ಚಾಲಕರು ತಮ್ಮ ಗ್ರಾಹಕರನ್ನು ಹುಡುಕಲು ಸಹಾಯಕ್ಕೆ ಬರುತ್ತದೆ. ಪ್ರತಿ ರೈಡ್‌ಗೆ ರೂ 10 ಹೆಚ್ಚುವರಿ ವೆಚ್ಚದ ಜೊತೆಗೆ ಮೀಟರ್‌ಗೆ ಅನುಗುಣವಾಗಿ ದರಗಳನ್ನು ವಿಧಿಸಲಾಗುತ್ತದೆ ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟದ (ARDU) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದರು.
ಮೆಟ್ರೋ ಸವಾರರಿಗೆ ಸಿಹಿ ಸುದ್ದಿ: ಹೊಸ ವರ್ಷದಿಂದ ಸೇವೆ
ಮೆಟ್ರೋ ಪ್ರಯಾಣಿಕರು ಚಾಟ್‌ಬಾಟ್ ವಿಶೇಷ ಸೌಲಭ್ಯ ಬಳಸಿಕೊಂಡು ನಮ್ಮ ಮೆಟ್ರೋ ಟಿಕೆಟ್ ಖರೀದಿಸುವಾಗ ಕೊನೆಯ ಮೈಲಿ ಸಂಪರ್ಕಕ್ಕಾಗಿ ಆಟೋ ರೈಡ್‌ಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುವಂತೆ ಇದನ್ನು ಸಂಯೋಜಿಸಲು ಉದ್ದೇಶ ಹೊಂದಲಾಗಿತ್ತು. ಆದರೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ (BMRCL) ಏಕೀಕರಣದ ವಿಳಂಬ ಹಾಗೂ ಕೆಲವು ತಾಂತ್ರಿಕ ಕಾರಣದಿಂದ ಮುಂದಿನ ವರ್ಷ 2024ರಿಂದ ಆರಂಭವಾಗಲಿದೆ.
ನಮ್ಮ ಮೆಟ್ರೋ ಸಂಯೋಜಿತ ಆಟೋಗಳು ಹೊಸ ವರ್ಷದ ಆರಂಭದಲ್ಲಿ ವಾಟ್ಸಪ್ ಚಾಟ್ ಬಾಟ್ ಆರಂಭಿಸುವ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಇದನ್ನು ಗ್ರಾಹಕರು ಮೂರು ಸರಳ ಕ್ಲಿಕ್‌ಗಳಲ್ಲಿ ಆಟೋಗಳನ್ನು ಬುಕ್ ಮಾಡಬಹುದು. ನಿಮ್ಮ ಪ್ರಯಾಣ ಬುಕ್ ಮಾಡಲು ಸಂಭಾಷಣೆ ಆರಂಭಿಸಲು ವಾಟ್ಸಪ್ ಸಂಖ್ಯೆ ಸಿಗುತ್ತದೆ. ಅದರ ಮೂಲಕ ನೀವು ಮೆಟ್ರೋ ನಿಲ್ದಾಣದಿಂದ ನಿಮ್ಮ ಗಮ್ಯ ಸ್ಥಳವನ್ನು ತಲುಪಬಹುದಾಗಿದೆ.

ಮನೆ/ಕಚೇರಿ ಸುತ್ತಮುತ್ತಲಿನ ಆಟೋಗಳ ಮಾಹಿತಿ
ಇದರಿಂದ ನೀವು ಮೆಟ್ರೋ ಇಳಿದ ಕೂಡಲೇ ಆಟೋ, ಟ್ಯಾಕ್ಸಿಗಳು ಮನ ಬಂದ ದರಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುವುದು, ಚಿಲ್ಲರೆ ಜಗಳ ಎಲ್ಲವು ತಪ್ಪಲಿದೆ. ಇನ್ನೂ ಚಾಟ್‌ಬಾಟ್ ಸೌಲಭ್ಯವು ನಿಮ್ಮ ಮನೆ ಅಥವಾ ಕಚೇರಿ ಹತ್ತಿರದ ನೋಂದಾಯಿತ ಆಟೋಗಳನ್ನು ತೋರಿಸುತ್ತದೆ. ಕೆಲಸ ಮುಗಿಯುತ್ತಿದ್ದಂತೆ/ಮನೆಯಿಂದ ಹೊರಡುತಿದ್ದಂತೆ ನೀವು ಬುಕ್ ಮಾಡಿಕೊಂಡು ಆಟೋ ಏರಬಹುದಾಗಿದೆ. ಕಾಯುವ ಸಮಯ ತಪ್ಪಲಿದೆ.
1000ಕ್ಕೂ ಹೆಚ್ಚು ಡೌನ್‌ಲೋಡ್ ಆದ 'ಮೆಟ್ರೋಮಿತ್ರ'
ಇನ್ನೂ ಬಳಕೆದಾರರು ಮೆಟ್ರೋ ನಿಲ್ದಾಣವನ್ನು ಆಯ್ಕೆ ಮಾಡಿದ ನಂತರ, ಸ್ಥಳದಿಂದ ಗ್ರಾಹಕರನ್ನು ಕರೆದೊಯ್ಯಲು ಹತ್ತಿರದ ಮೆಟ್ರೋಮಿತ್ರ ಚಾಲಕರನ್ನು ನಿಯೋಜಿಸಲಾಗುವುದು. ಮೆಟ್ರೋ ಮಿತ್ರ ಆಪ್ ಅನ್ನು ಸುಮಾರು ಈಗಾಗಲೇ 1000ಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೇ ಸುಮಾರು 300 ಆಟೋ ಚಾಲಕರು ಇದರಲ್ಲಿ ನೋಂದಾಯಿತಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೊಸ ವರ್ಷದಿಂದ ಈ ಸೇವೆ ಆರಂಭವಾಗಲಿದೆ. ಈ ಸಂಬಂಧ ನಾವು ಆಟೋ ಚಾಲಕರ ಜೊತೆಗೆ ಸಭೆ ಮಾಡಿದ್ದೇವೆ. ಮೆಟ್ರೋ ನಿಲ್ದಾಣಗಳನ್ನು ಮೀರಿ ಸೇವೆ ನೀಡುವ ಗುರಿ ಇಟ್ಟುಕೊಂಡಿದ್ದೇವೆ. ಇದರಿಂದ ಆಟೋ ಚಾಲಕರ ಆದಾಯವು ಹೆಚ್ಚಾಗಲಿದೆ.
ಇನ್ನೂ ಈ ವೇದಿಕೆಯಲ್ಲಿ ಹೆಚ್ಚಿನ ಆಟೋರಿಕ್ಷಾ ಚಾಲಕರನ್ನು ಪಡೆಯಲು ಚಾಲಕರನ್ನು ಪ್ರೋತ್ಸಾಹಿಸುತ್ತೇವೆ. ಸದ್ಯ ಚಾಟ್‌ಬಾಟ್ ಸೇವೆಯನ್ನು ಮೂರು ವಿಧಾನಗಳಲ್ಲಿ QR ಕೋಡ್, ಸ್ಟ್ರೀಟ್-ಹೇಲಿಂಗ್ ಮತ್ತು ವೆಬ್ ಪೋರ್ಟಲ್ ಮೂಲಕ ಬುಕಿಂಗ್ ಮಾಡಲು ಅವಕಾಶ ಇದೆ ಎದು ರುದ್ರಮೂರ್ತಿ ಹೇಳಿದರು.












Click it and Unblock the Notifications