Namma Metro: BMRCL ಮಹತ್ವದ ಒಪ್ಪಂದ, ಪ್ರತಿ ವರ್ಷ ₹25 ಕೋಟಿ ಆದಾಯ..
ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನಾದ್ಯಂತ ಎಲ್ಲ ದಿಕ್ಕುಗಳಲ್ಲೂ ಜಾಲ ವಿಸ್ತರಣೆ ಮಾಡಿಕೊಳ್ಳುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕೇವಲ ಪ್ರಯಾಣಿಕರಿಂದ ಮಾತ್ರವಲ್ಲದೇ ಜಾಹೀರಾತು ಮೂಲಕವು ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಗಳಿಕೆಗೆ ಮುಂದಾಗಿದೆ. ಜಾಹೀರಾತು ಪ್ರಕಟಿಸಲು ಕಂಪನಿಗಳ ಜೊತೆಗೆ 07 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ವಾರ್ಷಿಕ 25 ಕೋಟಿ ರೂಪಾಯಿ ಆದಾಯ ಗಳಿಸಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ಪರ್ಪಲ್ ಲೈನ್ ಮತ್ತು ಹಸಿರು ಮಾರ್ಗದ ರೈಲುಗಳಲ್ಲಿ ಜಾಹೀರಾತು ಹಕ್ಕುಗಳಿಗಾಗಿ ಕ್ರಮವಾಗಿ 'ಮುದ್ರಾ ವೆಂಚರ್ಸ್' ಮತ್ತು 'ಲೋಕೇಶ್ ಔಟ್ ಡೋರ್ ಸಂಸ್ಥೆ'ಗಳ ಜೊತೆಗೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದಗಳು ಏಳು ವರ್ಷ ಇರಲಿವೆ.

ಪ್ರಯಾಣಿಕರಿಂದ ಬರುವ ಆದಾಯದ ಜೊತೆಗೆ ಈ ಒಪ್ಪಂದಗಳಿಗೆ ಸುಮಾರು ₹25 ಕೋಟಿ ಆದಾಯ ಪ್ರತಿ ವರ್ಷ ಬರುವ ನಿರೀಕ್ಷೆ ಇದೆ. ಈ ಒಪ್ಪಂದದಡಿಯಲ್ಲಿ ರೈಲು ರಾಪಿಂಗ್ ಮತ್ತು ರೈಲಿನ ಒಳಾಂಗಣ ಜಾಹೀರಾತು ಸೇರಿದಂತೆ ವಿವಿಧ ಜಾಹೀರಾತು ಮಾಧ್ಯಮಗಳ ಬಳಕೆ ಸಹ ಇದೆ.
ಕಂಪನಿಗಳ ಬ್ರಾಂಡ್‌ಗಳು ನಮ್ಮ ಮೆಟ್ರೋದಲ್ಲಿ ಪ್ರತಿದಿನ ಪ್ರಯಾಣಿಸುವ ಜನರಿಗೆ ತಲುಪುವ ಅಪರೂಪದ ಅವಕಾಶಗಳು ಸಿಗಲಿವೆ. ಬಿಎಂಆರ್‌ಸಿಎಲ್ ತನ್ನ ಟಿಕೆಟ್ ಮಾರಾಟದ ಆದಾಯವಲ್ಲದೆ ಶಾಶ್ವತ ಆದಾಯ ಮಾರ್ಗಗಳನ್ನು ಹುಡುಕುವ ಪ್ರಯತ್ನದ ಭಾಗವಾಗಿ ಮಹತ್ವದ ಒಪ್ಪಂದಗಳು ಮಂಗಳವಾರ (ಏಪ್ರಿಲ್ 29) ಏರ್ಪಟ್ಟಿವೆ.

ಹೊಸ ವ್ಯಾಪಾರ ಮಾದರಿ ಅಳವಡಿಕೆ..
ಜಾಹೀರಾತು ಒಪ್ಪಂದ ಕುರಿತಂತೆ BMRCL ವ್ಯವಸ್ಥಾಪಕ ನಿರ್ದೇಶಕರಾದ ಎಂ. ಮಹೇಶ್ವರ ರಾವ್ ಅವರು ಪ್ರತಿಕ್ರಿಯಿಸಿ, "ಮುದ್ರಾ ವೆಂಚರ್ಸ್ ಮತ್ತು ಲೋಕೇಶ್ ಔಟ್ ಡೋರ್ ಸಂಸ್ಥೆಗಳು ಈ ಸಹಕಾರದ ಮೂಲಕ, ಬಿಎಂಆರ್‌ಸಿಎಲ್ ವಿಶ್ವಮಟ್ಟದ ಮೆಟ್ರೋ ಸೇವೆಗಳನ್ನು ನೀಡುವುದರ ಜೊತೆಗೆ ನೂತನ ವ್ಯಾಪಾರ ಮಾದರಿಗಳನ್ನು ಅಳವಡಿಸಿಕೊಂಡು ಆರ್ಥಿಕ ಶಾಶ್ವತತೆಯನ್ನು ಖಚಿತಪಡಿಸಲು ಮತ್ತು ನಗರ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗುತ್ತದೆ" ಎಂದು ತಿಳಿಸಿದರು.
ಟ್ರಾನ್ಸಿಟ್ ಮೀಡಿಯಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಮುದ್ರಾ ವೆಂಚರ್ಸ್ ಮತ್ತು ಲೋಕೇಶ್ ಔಟ್‌ಡೋರ್, ಪರ್ಪಲ್ ಮತ್ತು ಹಸಿರು ಮಾರ್ಗಗಳಲ್ಲಿ ಆಕರ್ಷಕ ವಿನ್ಯಾಸ ಮತ್ತು ನವೀನ ಜಾಹೀರಾತು ಮಾದರಿಗಳನ್ನು ಪರಿಚಯಿಸಲಿದೆ. ಈ ಮೂಲಕ ಬೆಂಗಳೂರು ಮೆಟ್ರೋ ವ್ಯವಸ್ಥೆಗಳು ಹೆಚ್ಚು ಜೀವನವಾದ ಸಾರ್ವಜನಿಕ ಸ್ಥಳವನ್ನಾಗಿ ಮಾಡಲಿದ್ದಾರೆ ಎಂದರು.
ಬೇರೆ ಮೂಲದಿಂದ ಆದಾಯ ಗಳಿಕೆಗೆ ಸಲಹೆ
ನಮ್ಮ ಮೆಟ್ರೋ ದರ ಏರಿಕೆ ಮಾಡಿದ್ದ ಸಂದರ್ಭದಲ್ಲಿ ನಮ್ಮ ಮೆಟ್ರೋ ಅಧಿಕಾರಿಗಳು ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಅಗತ್ಯ ವಸ್ತುಗಳ ದರ ಏರಿಕೆ ಆಗಿದೆ. ಈ ಕಾರಣದಿಂದ ಮೆಟ್ರೋ ಪ್ರಯಾಣ ಏರಿಕೆ ಅನಿವಾರ್ಯ ಎಂದು ತಿಳಿಸಿತ್ತು. ಆಗ ತಜ್ಞರು, ನಾಗರಿಕರಿಗೆ ನೀವು ಅಧಿಕ ಆದಾಯ ಗಳಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಿ. ಜಾಹೀರಾತು ಪ್ರದರ್ಶನ, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿನ ಕಟ್ಟಡಗಳ ಬಾಡಿಗೆ ಕೊಡುವುದು ಸೇರಿದಂತೆ ವಿವಿಧ ಬೇರೆ ಬೇರೆ ಮೂಲಗಳಿಂದ ಆದಾಯ ಗಳಿಕೆಗೆ ಮುಂದಾಬೇಕು ಎಂದು ಸಲಹೆ ನೀಡಿದ್ದರು. ನಂತರ ಪ್ರಯಾಣದ ಬೆಲೆ ಏರಿಕೆ ಆಯಿತು. ಇದೀಗ ಬೇರೆಂದೂ ಆದಾಯ ಮೂಲವನ್ನು ಮೆಟ್ರೋ ಸೃಷ್ಟಿಸಿಕೊಂಡಿದೆ.












Click it and Unblock the Notifications