Namma Metro: ಪ್ರಯಾಣಿಕರ ಸಂಖ್ಯೆ ಹೆಚ್ಚಾಯಿತು, ಹೊಸ ಮೆಟ್ರೋ ಬೋಗಿಗಳು ಬರೋದ್ಯಾವಾಗ?
ಬೆಂಗಳೂರು, ಆಗಸ್ಟ್ 16: ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಸರಿಸುಮಾರು 05 ಲಕ್ಷದಷ್ಟಿದ್ದ ಪ್ರಯಾಣಿಕರ ಸಂಖ್ಯೆ ಸದ್ಯ 09 ಲಕ್ಷ ಗಡಿ ದಾಟಿದೆ. ನಿತ್ಯ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದು, ನೂಕು ನುಗ್ಗಲು ಉಂಟಾಗುತ್ತಿದೆ. ಪೀಕ್ ಸಮಯದಲ್ಲಿ ರೈಲುಗಳ ಒಳಕ್ಕೆ ಹತ್ತಲು ಜಾಗವೇ ಇರದಷ್ಟು ಪ್ರಯಾಣಿಕರು ದಟ್ಟಣೆ ಕಂಡು ಬರುತ್ತಿದೆ. ಹಾಗಾದರೆ ರೈಲುಗಳ ಸಂಖ್ಯೆ ಹೆಚ್ಚಾಗೋದು ಯಾವಾಗ? ಎಂಬ ಪ್ರಶ್ನೆ ಪ್ರಯಾಣಿಕರಲ್ಲಿ ಕಾಡುತ್ತಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು ಹಾಲಿ 73ಕಿಲೋ ಮೀಟರ್ ವ್ಯಾಪ್ತಿ ಹೊಂದಿದೆ. ಇನ್ನೊಂದು ತಿಂಗಳಲ್ಲಿ ಸೆಪ್ಟಂಬರ್‌ನಲ್ಲಿ ಇದಕ್ಕೆ 3.7 ಕಿಲೋಮೀಟರ್ ಸೇರ್ಪಡೆಯಾಗಲಿದೆ. ಮಾದಾವರದಿಂದ ನಾಗಸಂದ್ರವರೆಗಿನ ವಿಸ್ತರಿತ 'ಹಸಿರು ಮಾರ್ಗ' ವಾಣಿಜ್ಯ ಕಾರ್ಯಾಚರಣೆ ಇನ್ನೇನು ಆರಂಭಿಸಲಿದೆ. ಆಗ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗಿ ಸಮಸ್ಯೆಗಳು ಉಲ್ಬಣಗೊಳುವ ಸಾಧ್ಯತೆ ಇದೆ.

ಅಸಲಿಗೆ ಆಗಿದ್ದೇನು?
ಬೆಂಗಳೂರು ಮೆಟ್ರೋ ಸಂಚಾರ ಶುರುವಾದ ಆರಂಭಿಕ ತಿಂಗಳುಗಳಲ್ಲಿ ಮಾಸಿಕವಾಗಿ 05 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ನಂತರ ಪ್ರಯಾಣಿಕರ ಮೆಟ್ರೋ ಅವಲಂಬನೆ ಹೆಚ್ಚಾಯಿತು. ಆಗ ದಿನಕ್ಕೆ 01ರಿಂದ 1.25 ಲಕ್ಷದಷ್ಟು ಮಂದಿ ಪ್ರಯಾಣಿಸುತ್ತಿದ್ದರು. ಇದು ವರ್ಷ ಕಳೆದಂತೆಲ್ಲ ಕ್ರಮೇಣ ಹೆಚ್ಚುತ್ತಲೇ ಹೋಯಿತು. ಕೆಲವು ತಿಂಗಳ ಹಿಂದಷ್ಟೆ ನಿತ್ಯ 7 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದರು.
ಮೆಟ್ರೋ ನೇರಳೆ ಮಾರ್ಗದಲ್ಲಿ ದಟ್ಟಣೆ ಅಧಿಕ
ಕೋವಿಡ್ ಮುನ್ನ ದಿನಕ್ಕೆ ಐದರಿಂದ ಆರು ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಕೋವಿಡ್ ಲಾಕ್ ಡೌನ್ ಎಲ್ಲಾ ಮುಗಿದ ಬಳಿಕ ನಿಧಾನಗತಿಯಲ್ಲಿ ಹೆಚ್ಚಾಯಿತು. ನಂತರ ಬಿಟ್ಟು ಹೋಗಿದ್ದ ಕೆ.ಆರ್ ಪುರಂ ಸಂಪರ್ಕ ಕೊಂಡಿ ಮಾರ್ಗವು ತೆರದ ಬಳಿಕ ನೇರಳೆ ಮಾರ್ಗವು ಮೊದಲ ಭಾರಿಗೆ ಐಟಿ ಕಾರಿಡಾರ್‌ಗೆ ಸಂಪರ್ಕ ಪಡೆಯಿತು.

ಚಲಘಟ್ಟದಿಂದ ವೈಟ್‌ಫಿಲ್ಡ್‌ವರೆಗೆ ನೇರಳೆ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದ ನಂತರ 07 ಲಕ್ಷ ಪ್ರಯಾಣಿಕರ ಸಂಚಾರದ ಗಡಿ ಮುಟ್ಟಲು ಪರದಾಡಬೇಕಾಯಿತು. ಕಳೆದ ವರ್ಷ ಡಿಸೆಂಬರ್‌ನಿಂದ ಇಂದಿನ ಆಗಸ್ಟ್ ಹೊತ್ತಿಗೆ ಮೆಟ್ರೋ ದೈನಂದಿನ ಪ್ರಯಾಣಿಕರ ಓಡಾಟ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಯಿತು.
ಒಂದೇ ದಿನ 9.17ಲಕ್ಷ ಮಂದಿ ಪ್ರಯಾಣ
ಜುಲೈ ನಲ್ಲಿ ದೈನಂದಿನ ಪ್ರಯಾಣಿಕ ಸಂಖ್ಯೆ 7.5ಲಕ್ಷಕ್ಕಿಂತಲೂ ಅಧಿಕ, ಆಗಸ್ಟ್ 06ರಂದು 8.26 ಲಕ್ಷ ಮುಟ್ಟಿತ್ತು. ಮೊನ್ನೆ ಆಗಸ್ಟ್ 14ರಂದು ಒಂದೇ ದಿನ 9.17ಲಕ್ಷ ಮಂದಿ ಒಂದೇ ದಿನ ಪ್ರಯಾಣ ನಡೆಸಿದ್ದಾರೆ. ಚೀನಾ ಕಂಪನಿ ಜೊತೆಗೆ ಬಿಎಂಆರ್‌ಸಿಎಲ್ ಮಾಡಿಕೊಂಡ ಒಪ್ಪಂದಂತೆ ಕೆಲವೇ ಕೆಲವು ಮೆಟ್ರೋ ಬೋಗಿಗಳು ಬಂದಿದ್ದು, ಅವು 'ಹಳದಿ ಮಾರ್ಗ'ದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿವೆ.
ಮೆಟ್ರೋ ಆವರ್ತನ ಸಮಯ ಇಳಿಸಿದರೂ ತಪ್ಪದ ದಟ್ಟಣೆ
ಜನದಟ್ಟಣೆ ಹೆಚ್ಚಾಗುತ್ತಿದ್ದಂತೆ ಮಟ್ರೋ ಅಧಿಕಾರಿಗಳು ಮೆಟ್ರೋ ರೈಲುಗಳ ಆವರ್ತನವನ್ನು ಪೀಕ್ ಅವರ್ ನಲ್ಲಿ ಪ್ರತಿ ಮೂರು ನಿಮಿಷಗಳಿಗೆ ಇಳಿಕೆ ಮಾಡಿದ್ದಾರೆ. ಆದರೆ ಹೊಸ ರೈಲು ಬೋಗಿಗಳು ನಿಗದಿತ ಸಮಯಕ್ಕೆ ಬಾರದ ಹಾಲಿ ರೈಲುಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಸದ್ಯ ಹೊಸ ರೈಲುಗಳು ಬರಲು ಇನ್ನಷ್ಟು ಹತ್ತು ತಿಂಗಳು ಕಾಯಬೇಕಿದೆ.
ಅಷ್ಟರದಲ್ಲಿ ವಿಸ್ತರಿತ ಹಸಿರು ಮಾರ್ಗ ಹಾಗೂ ಹಳದಿ ಮಾರ್ಗದಲ್ಲಿ ಸಂಚಾರ ಆರಂಭವಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ನಮ್ಮ ಮೆಟ್ರೋ ಪ್ರಯಾಣ ಮತ್ತಷ್ಟ ಪ್ರಯಾಸದಾಯಕ ಆಗುವ ಅನುಮಾನ ವ್ಯಕ್ತವಾಗಿದೆ.












Click it and Unblock the Notifications