Namma Metro Feeder Bus: ಶಾಲೆ, ಕಾಲೇಜು, ಕಂಪನಿಗಳಿಗೂ ಫೀಡರ್ ಬಸ್ ಸೇವೆ: ಕಿಮೀ, ರಿಯಾಯಿತಿ ದರ ತಿಳಿಯಿರಿ
ಬೆಂಗಳೂರು, ಜನವರಿ 02: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವತಿಯಿಂದ ಈಗಾಗಲೇ ನಮ್ಮ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಸೇವೆ ನೀಡಲಾಗುತ್ತಿದೆ. ಬಸ್‌ಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತಿದೆ. ಇದೀಗ ಈ ಸೇವೆಯನ್ನು ಶಾಲಾ-ಕಾಲೇಜುಗಳಿಗೆ, ಕಾರ್ಖಾನೆಗಳಿಗೂ ವಿಸ್ತರಣೆ ಮಾಡಲಾಗುತ್ತಿದೆ ಎಂದು ನಮ್ಮ ಮೆಟ್ರೋ (Namma metro) ಹಾಗೂ ಬಿಎಂಟಿಸಿ ಮಾಹಿತಿ ನೀಡಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯು ಸಾಂದರ್ಭಿಕ ಒಪ್ಪಂದ ಹಾಗೂ ಶಾಲಾ/ಕಾಲೇಜು/ ಕಾರ್ಖಾನೆಗಳಿಗೆ ಖಾಯಂ ಗುತ್ತಿಗೆ ಆಧಾರದ ಮೇಲೆ ಬಸ್ಸುಗಳನ್ನು ಕಾರ್ಯಾಚರಣೆ ಗೊಳಿಸಲು ನಿರ್ಧರಿಸಿದೆ. ಈ ಸಂಬಂಧ ಪ್ರತಿ ಕಿಲೋ ಮೀಟರ್ ಸಹಿತ ದರಗಳ ಪಟ್ಟಿಯನ್ನು ಪ್ರಕಟಿಸಿದೆ.

ಬೆಂಗಳೂರು ಮೆಟ್ರೋ ರೈಲ್ವೇ ಸಂಚಾರವು ಬೆಂಗಳೂರಿನ ವೈಟ್‌ಫೀಲ್ಡ್ ಹೊರವಲಯದ ಪ್ರದೇಶಗಳಿಗೆ ವಿಸ್ತರಣೆ ಆದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ವಿವಿಧ ಕಂಪನಿಗಳ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚು ಮೆಟ್ರೋ ಉಪಯೋಗಿಸುತ್ತಿದ್ದಾರೆ.
ಈವರೆಲ್ಲ ಸಾಮೂಹಿಕವಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಖಾಯಂ ಗುತ್ತಿಗೆ ಆಧಾರದ ಮೇರೆಗೆ ಮೆಟ್ರೋ ಫೀಡರ್ ಸೇವೆಗಳನ್ನು ಇದೇ ಜನವರಿ 01ರಿಂದ ರಿಯಾಯಿತಿ ದರಗಳಲ್ಲಿ ಆರಂಭಿಸಿದೆ.
ವಾಹನ ಮಾದರಿ, ಕಿಮೀಗೆ ದರ ನಿಗದಿ ಮಾಹಿತಿ
ಬಿಎಂಟಿಸಿ ಮಿಡಿ ಬಸ್ ಮಾದರಿಯ ವಾಹನದ ಖಾಯಂ ಗುತ್ತಿಗೆ ಮೆಟ್ರೋ ಫೀಡರ್ ಸೇವೆಗೆ ಪ್ರತಿ ದಿನ ದರ 0-80 ಕಿಲೋ ಮೀಟರ್‌ಗೆ 4000/ ರೂಪಾಯಿ ನಿಗದಿ ಮಾಡಲಾಗಿದೆ. 80 ಕಿಲೋ ಮೀಟರ್ ಮೇಲೆ ಪ್ರತಿ ಒಂದು ಕಿಲೋ ಮೀಟರ್‌ಗೆ 60 ರೂಪಾಯಿ ನಿಗದಿ ಮಾಡಲಾಗಿದೆ.
ಮುಂದವರಿದು ಸಾಮಾನ್ಯ ಬಸ್ ಮಾದರಿಯ ವಾಹನದ ಖಾಯಂ ಗುತ್ತಿಗೆ ಮೆಟ್ರೋ ಫೀಡರ್ ಸೇವೆಗೆ ಪ್ರತಿ ದಿನ ದರ 0-80 ಕಿಲೋ ಮೀಟರ್‌ಗೆ 5000/ ರೂಪಾಯಿ ಇದ್ದು, 80 ಕಿಲೋ ಮೀಟರ್ ಮೇಲೆ ಪ್ರತಿ ಒಂದು ಕಿಲೋ ಮೀಟರ್‌ಗೆ 70 ರೂಪಾಯಿ ಇದೆ.

ಬಿಎಸ್-6 ಬಸ್ ಮಾದರಿ ವಾಹನಕ್ಕೆ ಪ್ರತಿ ದಿನ ದರ 0-80 ಕಿಲೋ ಮೀಟರ್‌ಗೆ 6,000/ ರೂಪಾಯಿ ಇದ್ದು, 80 ಕಿಲೋ ಮೀಟರ್ ಮೇಲೆ ಪ್ರತಿ ಕಿಲೋ ಮೀಟರ್‌ಗೆ 80 ರೂಪಾಯಿ ಇರಲಿದೆ. ವೊಲ್ವೋ ಬಸ್ ಮಾದರಿಗೆ ಪ್ರತಿ ದಿನ ದರ 0-80 ಕಿಲೋ ಮೀಟರ್‌ಗೆ 8,000/ ರೂಪಾಯಿ ಇದ್ದು, 80 ಕಿಲೋ ಮೀಟರ್ ಮೇಲೆ ಪ್ರತಿ ಕಿಲೋ ಮೀಟರ್‌ಗೆ 90 ರೂಪಾಯಿ ನಿಗದಿ ಮಾಡಲಾಗಿದೆ.
ಇ-ಬಸ್ (9ಮೀಟರ್) ಮಾದರಿಯ ವಾಹನಕ್ಕೆ ಪ್ರತಿ ದಿನ ದರ 0-80 ಕಿಲೋ ಮೀಟರ್‌ಗೆ 9,000/ ರೂಪಾಯಿ ಇದ್ದು, 80 ಕಿಲೋ ಮೀಟರ್ ಮೇಲೆ ಪ್ರತಿ ಕಿಲೋ ಮೀಟರ್‌ಗೆ 100 ರೂಪಾಯಿ ಇದೆ. ಅದೇ ರೀತಿ ಇ-ಬಸ್ (12 ಮೀಟರ್) ಮಾದರಿಯ ವಾಹನಕ್ಕೆ ಪ್ರತಿ ದಿನ ದರ 0-80 ಕಿಲೋ ಮೀಟರ್‌ಗೆ 12,000/ ರೂಪಾಯಿ ಇದ್ದು, 80 ಕಿಲೋ ಮೀಟರ್ ಮೇಲೆ ಪ್ರತಿ ಕಿಲೋ ಮೀಟರ್‌ಗೆ 100 ರೂಪಾಯಿ ಇದೆ.
300ಕ್ಕೆ ಮೆಟ್ರೋ ಫೀಡರ್ ಬಸ್ ಹೆಚ್ಚಳ
ಇಷ್ಟು ರಿಯಾಯಿತಿ ದರಗಳಲ್ಲಿ ಕಂಪನಿ, ಕಾರ್ಖಾನೆ, ಶಾಲಾ ಕಾಲೇಜು ಬಸ್‌ಗಳ ಮೆಟ್ರೋ ಫೀಡರ್ ಸೇವೆ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ಬಿಎಂಟಿಸಿ ತಿಳಿಸಿದೆ. ಸದ್ಯ ಬೆಂಗಳೂರಿನಲ್ಲಿ 121 ಮೆಟ್ರೋ ಫೀಡರ್ ಬಸ್‌ಗಳು ನಿತ್ಯ ಸೇವೆ ನೀಡುತ್ತಿವೆ. ಇದೇ ವರ್ಷ 2024 ಏಪ್ರೀಲ್ ವೇಳೆಗೆ ಬಸ್ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗುವುದು ಎಂದು ಈ ಹಿಂದೆ BMRCL ಹೇಳಿತ್ತು..












Click it and Unblock the Notifications