Namma Metro: ಶೇ.40-45ರಷ್ಟು ಮೆಟ್ರೋ ಟಿಕೆಟ್ ದರ ಏರಿಕೆ ಶೀಘ್ರ, 2 ರೀತಿಯ ದರ ಜಾರಿಗೆ ಚಿಂತನೆ
ಬೆಂಗಳೂರು, ಜನವರಿ 17: ರಾಜ್ಯದ ಜನರಿಗೆ ಬಸ್ ದರ ಏರಿಕೆಯು ಆಘಾತ ನೀಡಿದ ಬೆನ್ನಲ್ಲೆ ಬೆಂಗಳೂರು ಜನರಿಗೆ 'ನಮ್ಮ ಮೆಟ್ರೋ ಸಾರಿಗೆ'ಯು ದರ ಏರಿಕೆ ಬಿಸಿ ತಟ್ಟುವ ದಿನಗಳು ದೂರವೇನಿಲ್ಲ. ರಾಜ್ಯದ ಬಸ್‌ಗಳಂತೆ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಎರಡು ಸಮಯಕ್ಕೆ ವಿಭಿನ್ನ ದರಗಳನ್ನು ಜಾರಿಗೆ ತರಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಚಿಂತನೆ ನಡೆಸಿದೆ.
ಹೌದು, ಬಿಎಂಆರ್‌ಸಿಎಲ್ ಅಧಿಕಾರಿಗಳು ಮೆಟ್ರೋ ಪ್ರಯಾಣ ದುಬಾರಿ ಮಾಡಲು ನಿರ್ಧರಿಸಿದ್ದಾರೆ. ದರ ಹೊಂದಾಣಿಕೆ ಮಾಡಲು ತಯಾರಿ ಆರಂಭಿಸಿದ್ದಾರೆ. ದರ ಏರಿಕೆಯಿಂದ ಮೆಟ್ರೋ ಪ್ರಯಾಣಿಕರಿಗೆ ಉಂಟಾಗುವ ಆರ್ಥಿಕ ಹೊಡೆತ ತಪ್ಪಿಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ನಾನ್ ಪೀಕ್ ಹವರ್‌ಗಳಲ್ಲಿ ರಿಯಾಯಿತಿ ದರಗಳ ಪರಿಚಯಕ್ಕೆ ನಮ್ಮ ಮೆಟ್ರೋ ಮುಂದಾಗಿದೆ.

ನಮ್ಮ ಮೆಟ್ರೋ ಅಧಿಕಾರಿಗಳು ಶೇಕಡಾ 40 ರಿಂದ 45% ರಷ್ಟು ದರ ಏರಿಕೆ ಮಾಡುವ ಸಾಧ್ಯತೆ ಇದೆ. ಶುಲ್ಕ ನಿಗದಿ ಸಮಿತಿಯು ಪೂರ್ವ ಸಿದ್ಧತೆಯೊಂದಿಗೆ ಈಗಾಗಲೇ ಸಾರ್ವಜನಿಕರಿಂದ ಸಲಹೆ ಪಡೆದಿದೆ. ಸಮಾಲೋಚಿಸಿ ವರದಿ ಸಿದ್ಧಪಡಿಸಿದೆ. ಆ ವರದಿಯು ಶೇಕಡಾ 40 ರಿಂದ 45% ರಷ್ಟು ಬೆಲೆ ಏರಿಕೆಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಆದರೆ ಈ ದರ ನಿಗದಿಯು ಎಲ್ಲ ಪ್ರಯಾಣಿಕರಿಗೆ ಹೊರೆಯಾಗದಂತೆ ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ದರ ಏರಿಕೆ ಪ್ರಯಾಣಿಕರಿಗೆ ಅನಗತ್ಯ ಹೊರೆಯಾಗದಂತೆ ಮೆಟ್ರೋ ಸಿದ್ಧತೆ ನಡೆಸಿದೆ. ಜೊತೆಗೆ ಸಾರ್ವತ್ರಿಕ ರಜಾ ದಿನಗಳಲ್ಲಿ ಆದಾಯಕ್ಕೆ ಹೊಡೆತ ಬೀಳುವ ಕುರಿತೂ ಯೋಚನೆ ಮಾಡಿ ವಿಭಿನ್ನ ದರ ಜಾರಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ರಿಯಾಯಿತಿ ದರ ಪರಿಚಯ
ಮೆಟ್ರೋ ಪ್ರಯಾಣ ದರ ಏರಿಕೆ ಆದ ಬಳಿಕ ನಾನ್ ಪೀಕ್ ಹವರ್‌ಗಳಲ್ಲಿ ಕಡಿಮೆ ದರ (ರಿಯಾಯಿತಿ ದರ) ನಿಗದಿ ಮಾಡಲು ಚಿಂತನೆ ನಡೆದಿದೆ. ಪೀಕ್ ಹವರ್ ಅಲ್ಲದ ಸಮಯದಲ್ಲಿ ಓಡಾಡುವ ಪ್ರಯಾಣಿಕರು ಹೆಚ್ಚಳ ದರದಲ್ಲಿ ಶೇ.10-15ರಷ್ಟು ಕಡಿಮೆ ಹಣ ಪಾವತಿಸಲಿದ್ದಾರೆ.
ನಾನ್‌ಪಿಕ್ ಹವರ್ ದರ ರಜಾ ದಿನದಲ್ಲೂ ವಿಸ್ತರಣೆ?
ರಜಾದಿನಗಳಲ್ಲಿ ಹೆಚ್ಚಿನ ಜನರು ಓಡಾಡುತ್ತಾರೆ. ಆಗಲೂ ಈ ನಾನ್ ಪೀಕ್ ಹವರ್ ದರ ವಿಸ್ತರಣೆ ಆಗಲಿದೆ. ಇದರಿಂದ ಬೆಲೆ ಹೆಚ್ಚಳದಲ್ಲಿ ಸಮತೋಲನ ಸಾಧ್ಯವಾಗುತ್ತದೆ. ಬಸ್ ದರ ಏರಿಕೆಗೆ ಹತಾಶ ವ್ಯಕ್ತಪಡಿಸಿದ್ದ ಜನರಿಗೆ ಮೆಟ್ರೋ ದರ ಏರಿಕೆ ಶಾಕ್ ನೀಡಿದೆ. ಆದಷ್ಟು ಶೀಘ್ರವೇ ಹೊರ ದರ ಏರಿಕೆ ಬಗ್ಗೆ ನಮ್ಮ ಮೆಟ್ರೋ ಅಧಿಕೃತ ಮಾಹಿತಿ ನೀಡಲಿದೆ.












Click it and Unblock the Notifications