28 ನಿಲ್ದಾಣ, 37 ಕಿ. ಮೀ. ಮಾರ್ಗದ ಮೆಟ್ರೋ ಹೊಸ ಮಾರ್ಗದ ಡಿಪಿಆರ್ ಸಲ್ಲಿಕೆ
ಬೆಂಗಳೂರು, ಜೂನ್ 25: ಬೆಂಗಳೂರು ನಗರದ ಸಂಚಾರ ದಟ್ಟಣೆ ತಗ್ಗಿಸಲು ಹೊಸ ನಮ್ಮ ಮೆಟ್ರೋ ಯೋಜನೆಯನ್ನು ತಯಾರು ಮಾಡಲಾಗುತ್ತಿದೆ. ಈಗ ಬಿಎಂಆರ್‌ಸಿಎಲ್ 28 ನಿಲ್ದಾಣಗಳನ್ನು ಒಳಗೊಂಡಿರುವ, 37 ಕಿ. ಮೀ. ಮಾರ್ಗದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದೆ.
ಹೆಬ್ಬಾಳ-ಸರ್ಜಾಪುರ ನಮ್ಮ ಮೆಟ್ರೋ ಕಾರಿಡಾರ್ ಡಿಪಿಆರ್ ಅನ್ನು ಬಿಎಂಆರ್‌ಸಿಎಲ್ ಸಿದ್ಧಪಡಿಸಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಕೋರಮಂಗಲ ಮೂಲಕ ಹಾದು ಹೋಗಲಿರುವ ಈ ಮಾರ್ಗದ ಅಂದಾಜು ವೆಚ್ಚ ಸುಮಾರು 16,500 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ.

17 ನೆಲದ ಮೇಲಿನ, 11 ಸುರಂಗ ಮಾರ್ಗ ನಿಲ್ದಾಣಗಳನ್ನು ಈ ಮಾರ್ಗ ಒಳಗೊಂಡಿದೆ. ಸರ್ಜಾಪುರದಿಂದ ಕೋರಮಂಗಲ 3ನೇ ಬ್ಲಾಕ್ ತನಕ 15 ಎತ್ತರಿಸಿದ ನಿಲ್ದಾಣಗಳು. ಕೋರಮಂಗಲ 2ನೇ ಬ್ಲಾಕ್‌ನಿಂದ ವೆಟರ್ನರಿ ಕಾಲೇಜು ತನಕ 11 ಸುರಂಗ ಮಾರ್ಗದ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಚಿಂತನೆ ಇದೆ. ಈ ಡಿಪಿಆರ್‌ಗೆ ಕರ್ನಾಟಕ ಸರ್ಕಾರದ ಒಪ್ಪಿಗೆ ಸಿಕ್ಕಿದರೆ ಮುಂದಿನ ಒಪ್ಪಿಗೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ.
ಯಾವ-ಯಾವ ನಿಲ್ದಾಣಗಳು?; ಹೆಬ್ಬಾಳ-ಸರ್ಜಾಪುರ ನಮ್ಮ ಮೆಟ್ರೋ ಕಾರಿಡಾರ್‌ನಲ್ಲಿ ಸರ್ಜಾಪುರ, ಕಾಡ ಅಗ್ರಹಾರ ರಸ್ತೆ, ಸೋಮಾಪುರ, ದೊಮ್ಮಸಂದ್ರ, ಮುತ್ತನಲ್ಲೂರು ಕ್ರಾಸ್, ಕೊಡತಿ ಗೇಟ್, ಅಂಬೇಡ್ಕರ್ ನಗರ, ದೊಡ್ಡಕನ್ನಳ್ಳಿ, ಕೈಕೊಂಡನಹಳ್ಳಿ, ಬೆಳ್ಳಂದೂರು ಗೇಟ್, ಅಗರ, ಜಕ್ಕಸಂದ್ರ, ಕೋರಮಂಗಲ 3ನೇ ಬ್ಲಾಕ್, ಕೋರಮಂಗಲ 2ನೇ ಬ್ಲಾಕ್, ಡೈರಿ ಸರ್ಕಲ್, ನಿಮ್ಹಾನ್ಸ್, ಶಾಂತಿ ನಗರ, ಟೌನ್ ಹಾಲ್, ಕೆಆರ್ ಸರ್ಕಲ್, ಬಸವೇಶ್ವರ ಸರ್ಕಲ್, ಬೆಂಗಳೂರು ಗಾಲ್ಫ್ ಕೋರ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮೇಖ್ರಿ ಸರ್ಕಲ್, ವೆಟರ್ನರಿ ಕಾಲೇಜ್, ಗಂಗಾ ನಗರ, ಹೆಬ್ಬಾಳ ನಿಲ್ದಾಣಗಳನ್ನು ಹೊಂದಿರಲಿದೆ ಎಂದು ಡಿಪಿಆರ್ ಹೇಳಿದೆ.
ಹೆಬ್ಬಾಳ-ಸರ್ಜಾಪುರ ನಮ್ಮ ಮೆಟ್ರೋ ಮಾರ್ಗವನ್ನು ನೀಲಿ, ಗುಲಾಬಿ ಮತ್ತು ನೇರಳೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವಂತೆ ರೂಪಿಸಲಾಗಿದೆ. ಒಂದು ಕಡೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು, ಮತ್ತೊಂದು ಕಡೆ ಎಂ. ಜಿ. ರಸ್ತೆ ಕಡೆಗೆ ಪ್ರಯಾಣಿಸುವವರಿಗೆ ಈ ಮಾರ್ಗ ಅನುಕೂಲವಾಗಲಿದೆ. ಸರ್ಕಾರ ಈ ಡಿಪಿಆರ್‌ಗೆ ಒಪ್ಪಿಗೆ ನೀಡಿದರೆ ಮುಂದಿನ ಕಾರ್ಯಗಳು ಆರಂಭವಾಗಲಿದೆ.
2022-23ನೇ ಸಾಲಿನ ಬಜೆಟ್ ಮಂಡಿಸಿದ ಅಂದಿನ ಹಣಕಾಸು ಸಚಿವ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೆಬ್ಬಾಳ-ಸರ್ಜಾಪುರ ವಯಾ ಅಗರ, ಕೋರಮಂಗಲ ನಮ್ಮ ಮೆಟ್ರೋ ಯೋಜನೆಯನ್ನು ಘೋಷಣೆ ಮಾಡಿದ್ದರು. ಆಗ ಅಂದಾಜು ವೆಚ್ಚ 15 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿತ್ತು.
2022ರಲ್ಲಿ ಈ ಯೋಜನೆ ಕುರಿತು ಡಿಪಿಆರ್ ಸಿದ್ಧಪಡಿಸಲು ರೈನಾ ಕನ್ಸಲ್ಟಿಂಗ್ ಸಂಸ್ಥೆಗೆ ಮುಂದೆ ಬಂದಿತ್ತು. 2023ರ ಅಂತ್ಯದಲ್ಲಿ ಬಿಎಂಆರ್‌ಸಿಎಲ್ ಟೆಂಡರ್‌ಗೆ ಒಪ್ಪಿಗೆ ನೀಡಿತ್ತು. ಮೊದಲು ಈ ಡಿಪಿಆರ್ ಅನ್ನು ನಗರಾಭಿವೃದ್ಧಿ ಇಲಾಖೆ, ಹಣಕಾಸು ಸಚಿವಾಲಯದ ಮುಂದೆ ಇಡಲಾಗುತ್ತದೆ. ಕೇಂದ್ರ ಸರ್ಕಾರ ಮುಂದಿನ 2 ಅಥವ 3 ವರ್ಷದಲ್ಲಿ ಯೋಜನೆಗೆ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.
ಕರ್ನಾಟಕ ಸರ್ಕಾರ 2022ರ ನವೆಂಬರ್‌ನಲ್ಲಿ ನಮ್ಮ ಮೆಟ್ರೋ 3ನೇ ಹಂತದ 44.6 ಕಿ. ಮೀ. ಮಾರ್ಗದ ಯೋಜನೆಗೆ ಒಪ್ಪಿಗೆ ನೀಡಿದೆ. ಜೆ. ಪಿ. ನಗರ 4ನೇ ಹಂತ-ಕೆಂಪಾಪುರ-ರಿಂಗ್ ರಸ್ತೆ (32.1 ಕಿ. ಮೀ.). ಹೊಸಹಳ್ಳಿ-ಕಡಬಗೆರೆ ಮಾಗಡಿ ರಸ್ತೆ ಮಾರ್ಗ ( 12.5 ಕಿ. ಮೀ.) ಮಾರ್ಗಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆ ನೀಡಿದೆ. ಆದರೆ ಈ ಯೋಜನೆಗೆ ಇನ್ನೂ ಕೇಂದ್ರ ಸರ್ಕಾರದ ಒಪ್ಪಿಗೆ ಬಾಕಿ.












Click it and Unblock the Notifications