ನಮ್ಮ ಮೆಟ್ರೋಗೆ 15 ವರ್ಷ: ಸಂಭ್ರಮದ ಡಿಕೆ ಶಿವಕುಮಾರ್ ಪೋಸ್ಟ್‌ಗೆ ನೆಟ್ಟಿಗರ ಪ್ರಶ್ನೆಗಳ ಸುರಿಮಳೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೇಗದ ಮತ್ತು ಸುರಕ್ಷಿತ ಸಾರಿಗೆ ' ನಮ್ಮ ಮೆಟ್ರೋ' ಆರಂಭವಾಗಿ ಇಂದಿಗೆ 15 ವರ್ಷಗಳು ಪೂರ್ಣಗೊಂಡಿವೆ. 6.7 ಕಿಲೋ ಮೀಟರ್‌ಗಳ ಸಣ್ಣ ಹಾದಿಯಿಂದ ಪ್ರಾರಂಭವಾಗಿ ಇಂದು 96.1 ಕಿಲೋ ಮೀಟರ್‌ಗಳ ಜಾಲವಾಗಿ ಬೆಳೆದಿದೆ. ಬೆಂಗಳೂರಿನ ಬೆಳೆವಣಿಗೆಯೊಂದಿಗೆ ಮೆಟ್ರೋ ಸಹ ವಿಸ್ತರಿಸುತ್ತಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾ್ ಅವರು ತಿಳಿಸಿದ್ದಾರೆ.
ದಸರಾ ಸಂದರ್ಭದಲ್ಲಿ ಮೆಟ್ರೋ ಸೇವೆ ಸ್ಮರಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, 'ನಮ್ಮ ಮೆಟ್ರೋಗೆ 15 ವರ್ಷಗಳು' ಶಿರ್ಷಿಕೆಯಡಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ನೋಡಿದ ನೆಟ್ಟಿಗರು ಅವರಿಗೆ ಹೊಸ ಮಾರ್ಗಗಳ ಆರಂಭ ಸೇರಿದಂತೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ನೀವು ಮೆಟ್ರೋ ದರ ಹೆಚ್ಚಳ, ನಿಧಾನಗತಿ ಮೆಟ್ರೋ ಕಾಮಗಾರಿ ಬಗ್ಗೆ ಮಾತನಾಡುವುದನ್ನು ಮರೆತಿದ್ದೀರಿ ಎಂದು ಕಾಮೆಂಟ್ ಮೂಲಕ ನೆನಪಿಸಿದ್ದಾರೆ. ಈ ಮೂಲಕ ಮೆಟ್ರೋ ಹೊಸ ಲೈನ್ ತೆರೆಯುವಲ್ಲಿನ ವಿಳಂಬ ಬಗ್ಗೆ ಅವರು ಆಕ್ಷೇಪ ಹೊರ ಹಾಕಿದ್ದಾರೆ.

ಮುಂದುವರಿದು ಡಿಕೆ ಶಿವಕುಮಾರ್ ಅವರು, ಕಳೆದ ಒಂದೂವರೆ ದಶಕದಲ್ಲಿ ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಮೆಟ್ರೋ ಬದಲಾಯಿಸಿದೆ. ನಗರದಾದ್ಯಂತ ಜನರನ್ನು ಮತ್ತು ಪ್ರಮುಖ ತಾಣಗಳನ್ನು ಪರಸ್ಪರ ಸಂಪರ್ಕಿಸುತ್ತಿದೆ. ನಿತ್ಯ 10 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ದಕ್ಷತೆ ಮೆರೆದಿದೆ ಎಂದಿದ್ದಾರೆ.
ಉತ್ತಮ ಸಂಪರ್ಕ ವ್ಯವಸ್ಥೆ, ಸುಸ್ಥಿರ ಸಂಚಾರ ನೀಡಲು ಬದ್ಧ
ಈ ಮಹತ್ವದ ಮೈಲಿಗಲ್ಲನ್ನು ಗುರುತಿಸುವಾಗ, ನಾವು ಪ್ರತಿದಿನ ನಡೆಯುವ ಸಾವಿರಾರು ಪ್ರಯಾಣಗಳನ್ನು, ಉಳಿತಾಯವಾದ ಸಮಯ ಮತ್ತು 'ನಮ್ಮ ಮೆಟ್ರೋ'ದ ಮೂಲಕ ಸಾಧ್ಯವಾದ ಸಂಪರ್ಕಗಳನ್ನು ಸಂಭ್ರಮಿಸುತ್ತೇವೆ. ಉತ್ತಮ ಸಂಪರ್ಕ ವ್ಯವಸ್ಥೆ, ಸುಸ್ಥಿರ ಸಂಚಾರ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಜೀವನಮಟ್ಟವನ್ನು ಒದಗಿಸುವ ಬೆಂಗಳೂರನ್ನು ನಿರ್ಮಿಸುವತ್ತ ನಮ್ಮ ಬದ್ಧತೆ ಮುಂದುವರಿಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು. ದೈನಂದಿನ ಓಡಾಟವನ್ನು ಸರಾಗಗೊಳಿಸುವುದು ಮತ್ತು ಮುಂದಿನ ಪೀಳಿಗೆಗೂ ಬೆಂಗಳೂರು ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಹೊಂದಿರುವಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಡಿಕೆ ಶಿವಕುಮಾರ್ ಅವರಿಗೆ ನೆಟ್ಟಿಗರು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. 'ನಮ್ಮ ಮೆಟ್ರೋ ಗುಲಾಬಿ ಮಾರ್ಗ ತೆರೆಯುವುದು ಯಾವಾಗ?' ಎಂದು ಕೇಳಿದ್ದಾರೆ. ಇನ್ನೊಬ್ಬರು 'ಮುಖ್ಯಮಂತ್ರಿಗಳೇ ನೀವು ನಮ್ಮ ಮೆಟ್ರೋನ ಅತ್ಯಧಿಕ ಟಿಕೆಟ್ ದರ ಏರಿಕೆ ಬಗ್ಗೆ ಮಾತನಾಡುವುದು ಮರೆತಿದ್ದೀರಿ' ಎಂದಿದ್ದಾರೆ.
ಜನದಟ್ಟಣೆ: ಎರಡೇ ಮೂತ್ರಾಲಯ ಸೌಲಭ್ಯ
'ಇಷ್ಟೊಂದು ಜನದಟ್ಟಣೆ ಇರುವ ಊರಲ್ಲಿ, ನಮ್ಮ ಮೆಟ್ರೋ ನಿಲ್ದಾಣಗಳ ಒಳಗೆ ಯಾರಿಗೂ ಕಾಣದಂತೆ ಎಲ್ಲೋ ಮೂಲೆಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದೂರದೃಷ್ಟಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಲ್ದಾಣಗಳಲ್ಲಿ ಕೇವಲ ಎರಡು ಮೂತ್ರಾಲಯ ಒದಗಿಸಿದೆ. ಅದು ಎಲ್ಲಿದೆ ಎಂದು ಸುಲಭಕ್ಕೆ ಕಾಣುವುದೂ ಇಲ್ಲ' ಎಂದು ಮೂರನೇಯವರು ಕಾಮೆಂಟ್ ಮಾಡಿದ್ದಾರೆ.
100 ಕಿಮೀ ದಾಟದ ಮೆಟ್ರೋ ಜಾಲ
ನಾಲ್ಕನೇಯವರು '15 ವರ್ಷಗಳಲ್ಲಿ ಮೆಟ್ರೋ ಜಾಲ ಇನ್ನೂ 100 ಕಿಲೋ ಮೀಟರ್ ಸಹ ದಾಟಿಲ್ಲ. ಕನಿಷ್ಠ 250ಕಿಲೋ ಮೀಟರ್ ಆದರೂ ವಿಸ್ತರಿಸಬೇಕಿತ್ತು' ಎಂದಿದ್ದಾರೆ. ಅದೇ ರೀತಿ ನಗರದ ಮೂಲಸೌಕರ್ಯ ಸಮಸ್ಯೆ, ಅಭಿವೃದ್ಧಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಜನರು ಒಂದಷ್ಟು ಕಾಮೆಂಟ್‌ಗಳನ್ನು ಮಾಡಿದ್ದಾರೆ.
Every day, lakhs of Bengalureans board Namma Metro to get to work, pursue their dreams and get on with life. In many ways, their journeys tell the story of our city.As Namma Metro completes 15 years, I am proud to see how far we have come, from 6.7 kilometres in 2011 to a network spanning 96.1 kilometres today. What began as a new way to travel has become an inseparable part of Bengaluru’s daily life.Our responsibility is to keep building on this progress, making public transport more accessible, easing daily commutes and ensuring Bengaluru is better connected for generations to come.Here’s to 15 years of Namma Metro, and to the millions of journeys that keep our city moving!@OfficialBMRCL
— DK Shivakumar (@DKShivakumar) October 20, 2026


Click it and Unblock the Notifications
