ದಸರಾಗೆ ಬೆಂಗಳೂರಿಗೆ ' Metro Pink Line' ಉಡುಗೊರೆ?, ಲೋಕಾರ್ಪಣೆಗೆ ಪ್ರಧಾನಿ ಮೋದಿ ಆಹ್ವಾನಿಸಿದ ಡಿಕೆ ಶಿವಕುಮಾರ್
ಬೆಂಗಳೂರು: ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಎಲ್ಲ ಹಂತಗಳಲ್ಲಿ ಶಾಸನಬದ್ಧ ಪರೀಕ್ಷೆಗಳು ಪೂರ್ಣಗೊಂಡಿವೆ. ಇದೇ ದಸರಾ ಸಂದರ್ಭದಲ್ಲಿ ಉದ್ಘಾಟನೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಉದ್ಘಾಟನೆಗೆ ಆಹ್ವಾನಿಸಿದ್ದಾರೆ ಎನ್ನುವ ಮಾಹಿತಿ ತಡವಾಗಿ ವರದಿ ಆಗಿದೆ.
ಕಾಳೇನ ಅಗ್ರಹಾರ-ತಾವರೆಕರೆವರೆಗಿನ ಪಿಂಕ್ ಲೈನ್ ಮಾರ್ಗವನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (ಸಿಎಂಆರ್‍ಎಸ್ ) ತಂಡವು ಕಳೆದ ವಾರ ಮೂರು ದಿನಗಳ ತಪಾಸಣೆಯನ್ನು ಯಶಸ್ವಿಯಾಗಿ ಮುಗಿಸಿದ್ದರು. ಇದರ ಬೆನ್ನಲ್ಲೆ ಮಾರ್ಗವನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಲು ಸಜ್ಜಾಗಿರುವ ಸರ್ಕಾರವು, 'ಉದ್ಘಾಟನೆಗೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ' ಅವರನ್ನು ಆಹ್ವಾನಿಸಿದೆ.

ವಾರದ ಹಿಂದೆ ಪತ್ರ ಬರೆದಿದ್ದ ಡಿಕೆಶಿ?
ಒಂದು ವಾರದ ಹಿಂದೆಯೇ ಪಿಂಕ್ ಲೈನ್ ಮಾರ್ಗ ಲೋಕಾರ್ಪಣೆಗೆ ಬನ್ನಿ ಎಂದು ಡಿಕೆ ಶಿವಕುಮಾರ್ ಅವರು ಪ್ರಧಾನಿ ಮಂತ್ರಿ ಅವರಿಗೆ ಪತ್ರ ಮೂಲಕ ಕೋರಿದ್ದಾರೆ. ಆದರೆ ಈವರೆಗೂ ಪ್ರಧಾನಮಂತ್ರಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಜಯದಶಮಿಗೆ ಇನ್ನೂ ಕೆಲವು ದಿನಗಳು ಬಾಕಿ ಇರುವ ಕಾರಣಕ್ಕೆ, ಪ್ರಧಾನಿ ಆಗಮನದ ಅಪ್ಡೇಟ್‌ಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ.
103 ಕಿಮಿ.ಗೆ ಮೆಟ್ರೋ ಜಾಲ ವಿಸ್ತರಣೆ
ನಮ್ಮ ಮೆಟ್ರೋ ಸದ್ಯ 96 ಕಿಲೋ ಮೀಟರ್ ನೆಟ್‌ವರ್ಕ್ ಹೊಂದಿದೆ. ಕಾಳೇನ ಅಗ್ರಹಾರ-ತಾವರೆಕರೆವರೆಗಿನ 7.5 ಕಿಲೋ ಮೀಟರ್ ಉದ್ದದ ಎತ್ತರಿಸಿದ ಕಾರಿಡಾರ್ (ಗುಲಾಬಿ ಮಾರ್ಗವು) ಉದ್ಘಾಟನೆ ಆದರೆ ಮೆಟ್ರೋ ಜಾಲವು 103 ಕಿಲೋ ಮೀಟರ್‍ಗೆ ಹೆಚ್ಚಲಿದೆ.
ಇನ್ನೂ ಈ ನೂತನ ಮಾರ್ಗದಲ್ಲಿ 'ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆಪಿ ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಹಳದಿ ಮಾರ್ಗ ಇಂಟರ್‍ಚೇಂಜ್) ಮತ್ತು ತಾವರೆಕರೆ' ಸೇರಿ ಒಟ್ಟು ಆರು ನಿಲ್ದಾಣಗಳು ನಿರ್ಮಿಸಲಾಗಿದೆ. ಈ ನಿಲ್ದಾಣಗಳು ಹಾಗೂ ಕೊನೆ ಮೈಲಿ ಸಂಪರ್ಕಕ್ಕಾಗಿ ಇತ್ತೀಚೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) 7 ಮೀಟರ್ ಉದ್ದದ ಕಾಂಪ್ಯಾಕ್ಟ್ ಮೆಟ್ರೋ ಫೀಡರ್ ಬಸ್‌ಗಳ ಕಾರ್ಯಾಚರಣೆಗೆ ತೀರ್ಮಾನಿಸಿದೆ. ಈ ಸಂಬಂಧ ಹೊಸ ಮಾರ್ಗಗಳನ್ನು ಘೋಷಿಸಿದೆ. ಪಿಂಕ್ ಲೈನ್ ತೆರೆದ ಬಳಿಕ ಪ್ರಯಾಣಿಕರಿಗೆ ಬಿಎಂಟಿಸಿ ಫೀಡರ್ ಬಸ್ ಆಸರೆಯಾಗಲಿವೆ.
ಮಿಸ್ ಆದ್ರೆ ನವೆಂಬರ್ 1ಕ್ಕೆ ಲೋಕಾರ್ಪಣೆ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪತ್ರಕ್ಕೆ ಪಿಎಂಒ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ ನವೆಂಬರ್ 1ರವರೆಗೆ ಕಾಯಲಾಗುತ್ತದೆ. ಈ ವೇಳೆ ಮತ್ತೊಮ್ಮೆ ಡಿಕೆ ಶಿವಕುಮಾರ್ ಅವರು ಪ್ರಧಾನಿಯವರ ಬಳಿ ವಿನಂತಿಸಿಕೊಳ್ಳಲಿದ್ದಾರೆ. ದಸರಾಗೆ ಮಿಸ್ ಆದಲ್ಲಿ, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ದಿನ ಪಿಂಕ್ ಲೈನ್ ತೆರೆಯುವುದು ಬಹುತೇಕ ಖಚಿತವಾಗಿದೆ.
ಸಿಎಂಆರ್‍ಎಸ್ ಮಾರ್ಗ ತೆರೆಯಲು ಒಪ್ಪಿಗೆ ನೀಡಿದ್ದು, ಸಚಿವಾಲಯದಿಂದ ವರದಿಯು ಈ ವಾರ ಬರಲಿದೆ. ಉದ್ಘಾಟನೆಗೆ ಅಧಿಕೃತ ಘೋಷಣೆಗೂ ಮೊದಲೇ ಈಗಾಗಲೇ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್) ಎಲ್ಲ ವಿಧದ ತಯಾರಿ ಮಾಡಿಕೊಳ್ಳುತ್ತಿದೆ.
ಮೀರಿದ ಗಡುವು, ಭೂಗತ ಮಾರ್ಗ ಓಪನ್ ಯಾವಾಗ?
ಒಟ್ಟು 21.5 ಕಿಲೋ ಮೀಟರ್ ಉದ್ದದ ಪಿಂಕ್ ಲೈನ್ ಮೊದಲ ಹಂತದಲ್ಲಿ 7.5 ಕಿಲೋ ಮೀಟರ್ ಉದ್ಘಾಟನೆ ಆಗಲಿದೆ. ಈ ಹಿಂದೆ ಮೇ ತಿಂಗಳಲ್ಲಿ, ನಂತರ ಆಗಸ್ಟ್ 15ರಂದು ಉದ್ಘಾಟನೆ ಆಗಲಿದೆ ಎಂದು ಹೇಲಾಗಿತ್ತು. ಆದರೆ ಶಾಸನಬದ್ಧ ತಪಾಸಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಗಡುವು ಮೀರಿತ್ತು. ಅದೇ ರೀತಿ ಉಳಿದ 13 ಕಿಮೀ ಪಿಂಕ್ ಲೈನ್ (ಭೂಗತ ಮೆಟ್ರೋ ಮಾರ್ಗ) ಇದೇ ವರ್ಷ ಡಿಸೆಂಬರ್ ಅಂತ್ಯಕ್ಕೆ ಉದ್ಘಾಟಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಡಿಸೆಂಬರ್‍ನಲ್ಲಿ ಪ್ರಾಯೋಗಿಕ ಸಂಚಾರ ಸೇರಿದಂತೆ ವಿವಿಧ ಶಾಸನಬದ್ಧ ಪರೀಕ್ಷೆಗಳು ಮಾತ್ರವೇ ಆರಂಭಗೊಳ್ಳಲಿದೆ. ಮಾರ್ಚ್ 2027ರ ಹೊತ್ತಿಗೆ ಎರಡನೇ ಹಂತದಲ್ಲಿ ಭೂಗತ ಪಿಂಕ್ ಲೈನ್ ತೆರೆಯುವ ನಿರೀಕ್ಷೆಗಳು ಇವೆ.


Click it and Unblock the Notifications
