ಬೆಂಗಳೂರು ನಮ್ಮ ಮೆಟ್ರೋ ಬಿಗ್ ಅಪ್ಡೇಟ್: ನೀಲಿ, ಗುಲಾಬಿ ಮಾರ್ಗಗಳಲ್ಲಿ ಟ್ರಯಲ್ ರನ್‌ಗೆ ಮುಹೂರ್ತ ಫಿಕ್ಸ್?
ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ರಿಂಗ್ ರಸ್ತೆಯಲ್ಲಿ ಪ್ರಮುಖ ಐಟಿ ಕಾರಿಡಾರ್ ಆಗಿ ಗುರುತಿಸಿಕೊಂಡಿರುವ ಸಿಲ್ಕ್‌ಬೋರ್ಡ್-ಕೆ.ಆರ್.ಪುರಂವರೆಗಿನ ನೀಲಿ ಮಾರ್ಗ ಹಾಗೂ ಬಾಕಿ ಎರಡನೇ ಹಂತದ ಗುಲಾಬಿ ಮಾರ್ಗಕ್ಕೆ ಅಂತಿಮ ಗಡುವು ನೀಡಿದ ಬೆನ್ನಲ್ಲೆ ಪ್ರಾಯೋಗಿಕ ಸಂಚಾರ ಆರಂಭದ ಬಿಗ್ ಅಪ್ಡೇಟ್ ಸಿಕ್ಕಿದೆ. ಇವರೆಡು ಮಾರ್ಗಗಳಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಅಗತ್ಯ ಎಲ್ಲ ಸಿದ್ಧತೆಗಳು ನಡೆದಿವೆ.
ನಗರದ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ನೀಲಿ ಮಾರ್ಗ (2A- Blue Line Metro) ಸುಮಾರು 19 ಕಿಲೋ ಮೀಟರ್ ಉದ್ದವಿದೆ. ಪ್ರಮುಖ 500 ಕಂಪನಿಗಳು ಈ ಹೊರ ವರ್ತುಲ ರಸ್ತೆಯಲ್ಲಿ ಬರುತ್ತವೆ. ಲಕ್ಷಾಂತರ ಜನರು ಈ ರಸ್ತೆಯಲ್ಲಿ ಓಡಾಡುತ್ತಿದ್ದು, ದಿನವೀಡಿ ಟ್ರಾಫಿಕ್‌ನಲ್ಲಿ ಸಿಲುಕುತ್ತಾರೆ. ಸದರಿ ನೀಲಿ ಮಾರ್ಗ ತೆರೆದರೆ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಈಗಾಗಲೇ ತಡವಾಗಿರುವ ಈ ಮಾರ್ಗದ ಲೋಕಾರ್ಪಣೆಯು 2027ರ ಮೇ ಅಥವಾ ಮಧ್ಯಭಾಗದಲ್ಲಿ ತೆರೆಯಲು ಪ್ಲ್ಯಾನ್ ಮಾಡಲಾಗಿದೆ. ಅದೇ ರೀತಿ ತಾವೆಕೆರೆ-ನಾಗವಾರವರೆಗಿನ (Pink Line Metro Underground Line) ಅದೇ ಹೊತ್ತಿಗೆ (2027ರ ಮಾರ್ಚ್) ತೆರೆಯುವ ನಿರೀಕ್ಷೆಗಳು ಇವೆ.

ನವೆಂಬರ್‌ನಿಂದ 2 ಮಾರ್ಗಗಳಲ್ಲಿ ಪ್ರಾಯೋಗಿಕ ಸಂಚಾರ
ನಮ್ಮ ಮೆಟ್ರೋದ ಗುಲಾಬಿ ಮತ್ತು ನೀಲಿ ಮಾರ್ಗಗಳನ್ನು 2027ರ ಮೇ ತಿಂಗಳಲ್ಲಿ ಉದ್ಘಾಟಿಸಲು ಪ್ಲ್ಯಾನ್ ಮಾಡಲಾಗಿದೆ. ಈ ಕಾರಣಕ್ಕಾಗಿಯೇ ಅಕ್ಟೋಬರ್‌ನಲ್ಲಿ ಆರಂಭವಾಗಬೇಕಿದ್ದ ನೀಲಿ ಮಾರ್ಗದಲ್ಲಿನ ಪ್ರಾಯೋಗಿಕ ರೈಲು ಸಂಚಾರ, ಪರೀಕ್ಷೆಗಳು ಮತ್ತೆ ತಡವಾಗಿದೆ. ನವೆಂಬರ್‌ನಿಂದ ನೀಲಿ ಮಾರ್ಗವಷ್ಟೇ ಅಲ್ಲದೇ ಗುಲಾಬಿ ಮಾರ್ಗದಲ್ಲೂ ಪ್ರಾಯೋಗಿಕ ಸಂಚಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 'ಡೈರಿ ಸರ್ಕಲ್-ನಾಗವಾರ ಹಾಗೂ 'ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್. ಪುರಂ' ಮಾರ್ಗವು ಸದಾ ಜನನಿಬಿಡ ಪ್ರದೇಶವಾಗಿದೆ. ಈ ಭಾಗದಲ್ಲಿ ಹೆಚ್ಚಿನ ವಸತಿ ಸೌಲಭ್ಯಗಳು ಅಭಿವೃದ್ಧಿ ಆಗುತ್ತಿವೆ. ಹೀಗಾಗಿ ಪ್ರಯಾಣಿಕರು ಈ ಎರಡು ಮಾರ್ಗದ ಉದ್ಘಾಟನೆಗೆ ಒತ್ತಾಯಿಸುತ್ತಿದ್ದಾರೆ.
ಗುಲಾಬಿ ಮಾರ್ಗ
ಕಾಳೇನ ಅಗ್ರಹಾರದಿಂದ-ತಾವರೆಕೆರೆ ವರೆಗೆ 7.5ಕಿಲೋ ಮೀಟರ್ ಗುಲಾಬಿ ಮಾರ್ಗದ (ಮೊದಲ ಹಂತ) ಶಾಸನಬದ್ಧ ತಪಾಸಣೆ ಪೂರ್ಣಗೊಂಡಿದ್ದು, ನವೆಂಬರ್ ಹೊತ್ತಿಗೆ ಉದ್ಘಾಟನೆ ಆಗಲಿದೆ. ಅದಕ್ಕಾಗಿ ಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿಯವರನ್ನು ದಸರಾಗೆ ಉದ್ಘಾಟನೆ ಮಾಡಲು ಆಹ್ವಾನಿಸಿದ್ದಾರೆ. ಆದರೆ ಪಿಎಂಓ ದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪಿಂಕ್ ಲೈನ್‌ನಲ್ಲಿ ಎಲ್ಲಿ ಟ್ರಯಲ್ ರನ್?
ತಾವರೆಕೆರೆ-ನಾಗರವಾರವರೆಗಿನ 13.5 ಕಿಲೋ ಮೀಟರ್ ಉದ್ದದ ಗುಲಾಬಿ ಮಾರ್ಗವು (ಎರಡನೇ ಹಂತ) ಭೂಗತ/ಸುರಂಗ ಮಾರ್ಗವಾಗಿದೆ. ನವೆಂಬರ್‌ನಿಂದ ಡೈರಿ ಸರ್ಕಲ್ ಮತ್ತು ಶಿವಾಜಿನಗರದ ನಡುವಿನ ಲೈನ್‌ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮುಂದಿನ ಐದಾರು ತಿಂಗಳಲ್ಲಿ ಉದ್ಘಾಟನೆಯಾಗಲಿದೆ. ಈ ಮಾರ್ಗ ಪೂರ್ಣಗೊಂಡರೆ ಒಟ್ಟು 21 ಕಿ.ಮೀ ಗುಲಾಬಿ ಮಾರ್ಗ ಸಂಪೂರ್ಣವಾಗಿ ತೆರೆದಂತಾಗುತ್ತದೆ.
ಪಿಂಕ್ ಲೈನ್ ಸುರಂಗ ಮಾರ್ಗವು ಅತ್ಯಂತ ಸವಾಲಿನ ಹಂತವಾಗಿದೆ. ಇಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳನ್ನು (PSD) ಅಳವಡಿಸುವ, ಅವುಗಳನ್ನು ಸಿಗ್ನಲಿಂಗ್ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಕೆಲಸಗಳು ಸವಾಲು ಇದೆ. ಈಗಾಗಲೇ ಟೆಂಡರ್ ಕರೆದಂತೆ ಮುಂದಿನ ಕಾಮಗಾರಿಗಳು ನಡೆಯಲಿವೆ. ಒಂದು ಬಾರಿ PSD ಅಳವಡಿಕೆ ಆದರೆ ಆತ್ಮಹತ್ಯೆ ಯತ್ನ, ಹಳಿಗೆ ಜಿಗಿಸಯುವ ಘಟನೆಗಳು ನಿಯಂತ್ರಣಕ್ಕೆ ಬರುತ್ತವೆ.
ನೀಲಿ ಮಾರ್ಗದಲ್ಲಿ ಎಲ್ಲಿ ಟ್ರಯಲ್ ರನ್?
ಹೊರ ವರ್ತುಲ ರಸ್ತೆ ಸಿಲ್ಕ್ ಬೋರ್ಡ್-ಕೆ.ಆರ್. ಪುರಂ ಮಾರ್ಗದ ಪೈಕಿ ಮಾರತ್ತಹಳ್ಳಿಯಿಂದ ಕೆಆರ್. ಪುರಂವರೆಗೆ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧತೆಗಳು ನಡೆದಿವೆ. ಸಿಗ್ನಲಿಂಗ್ ಕೆಲಸವನ್ನು ಹೊರತುಪಡಿಸಿ, ಈ ಮಾರ್ಗದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು BMRCL ತಿಳಿಸಿದೆ. ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸಗಳು ಬಾಕಿ ಇದ್ದು, ಅವುಗಳನ್ನು ಶೀಘ್ರವೇ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications
