Namma Metro: ಮೆಟ್ರೋ 'ಪಿಂಕ್ ಲೈನ್' ಮಾರ್ಗದಲ್ಲಿ 45,000 ಚ.ಅಡಿ ಭೂ ಸ್ವಾಧೀನ ಆರಂಭಿಸಿದ BMRCL
ಬೆಂಗಳೂರು, ಡಿಸೆಂಬರ್ 25: ಬೆಂಗಳೂರಿನಲ್ಲಿ ಸಂಚಾರ ವೇಗ ಹೆಚ್ಚಿಸುತ್ತಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ತನ್ನ ಮೆಟ್ರೊ ಹಂತ 2ರ ಅಡಿಯಲ್ಲಿ ನಾಗವಾರದಲ್ಲಿ ರಿಸೀವಿಂಗ್ ಸಬ್ ಸ್ಟೇಷನ್ ನಿರ್ಮಿಸುತ್ತಿದೆ. ಅದಕ್ಕೆ ಅಗತ್ಯವಿರುವ 45,000 ಚದರ ಅಡಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ.
ಈ ಕುರಿತು ಪ್ರಾಥಮಿಕ ಅಧಿಸೂಚನೆಯನ್ನು ಇತ್ತೀಚೆಗೆ ಸರ್ಕಾರಿ ಗೆಜೆಟ್‌ನಲ್ಲಿ ಹೊರಡಿಸಲಾಗಿದೆ. ನಂತರ ನಮ್ಮ ಮೆಟ್ರೋ ಪರವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಪ್ರಕಟಣೆಯ ಪ್ರಕಾರ, ಪಿಂಕ್ ಲೈನ್ ಕಾಮಗಾರಿ ವ್ಯಾಪ್ತಿಯ ಕಸಬಾ ಹೋಬಳಿಯ ನಾಗವಾರ ಗ್ರಾಮದಲ್ಲಿ ಕೆಐಎಡಿಬಿಯು 4,182.63 ಚದರ ಮೀಟರ್ (45,021.45 ಚದರ ಅಡಿ) ಅಳತೆಯ ಮೂರು ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಈ ಎರಡು ಆಸ್ತಿ 2.762.93 ಚದರ ಮೀಟರ್ ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕತ್ವದಲ್ಲಿವೆ. ಮೂರನೆಯ ಆಸ್ತಿಯಾದ 1,419.7 ಚದರ ಮೀಟರ್ ಖಾಸಗಿ ವ್ಯಕ್ತಿಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿದು ಬಂದಿದೆ.

ಈ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ವಿಚಾರಣೆಗಳು ಮುಂದಿನ ಜನವರಿ 17 ರಂದು ನಡೆಯಲಿದೆ. 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.
2017ರ ಟೆಂಡರ್ ರದ್ದು
ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್.ಯಶವಂತ ಚವ್ಹಾಣ ಮಾತನಾಡಿ, ರಿಸೀವ್ ಸ್ಟೇಷನ್ (ಸ್ವೀಕೃತಿ ಉಪಕೇಂದ್ರ) ನಿರ್ಮಿಸಲು ಜಮೀನು ಅಗತ್ಯವಿತ್ತು. ಸಬ್‌ಸ್ಟೇಷನ್ 21.25 ಕಿ.ಮೀ. ನಾಗವಾರದಿಂದ ಕಾಕಳೇನ ಅಗ್ರಹಾರ ಮೆಟ್ರೋ ಲೈನ್‌ಗೆ (ವಿಸ್ತರಣೆ 6) ಇದು ಅನುಕೂಲವಾಗಿದೆ. ಇದರಲ್ಲಿ 13.79 ಕಿ.ಮೀ. ಭೂಗತ ಮಾರ್ಗವಾಗಿರುತ್ತದೆ. 25ಕೆವಿ ಎಸಿ ಓವರ್‌ಹೆಡ್ ಉಪಕರಣ ವ್ಯವಸ್ಥೆಯು ಈ ಸಂಕೀರ್ಣ ಮಾರ್ಗದ ಕಾಮಗಾರಿ ವ್ಯಾಪ್ತಿಯಲ್ಲಿ ಬರಲಿವೆ. ಅಲ್ಲದೇ ಹುಳಿಮಾವು, ಬನ್ನೇರುಘಟ್ಟ ರಸ್ತೆಯಲ್ಲಿ ಮತ್ತೊಂದು ಸ್ವೀಕೃತಿ ಉಪಕೇಂದ್ರ ಸ್ಥಾಪನೆಯಾಗಲಿದೆ.
ಈ ವಿಸ್ತರಿಸಿದ ಪಿಂಕ್ ಮೆಟ್ರೋ ಮಾರ್ಗವು ಸಿಲ್ಕ್ ಬೋರ್ಡ್‌ನಿಂದ ವಿಮಾನ ನಿಲ್ದಾಣದ ಮಾರ್ಗದಲ್ಲಿ ಬೇರ್ಪಡುವ ಮಾರ್ಗದ ಮೂಲಕ ಎಂಜಿ ರಸ್ತೆಯ ಪ್ರದೇಶಗಳ ಮಾರ್ಗವಾಗಿ ಹಾದು ಹೋಗಲಿದೆ. 2017ರಲ್ಲಿ ಮೊದಲು ಕರೆದಿದ್ದ ಟೆಂಡರ್‌ಗಳು ಹಲವು ಕಾರಣಗಳಿಂದ ರದ್ದುಗೊಂಡಿವೆ.

ಕಳೆದ ನವೆಂಬರ್ 30ರ ಹೊತ್ತಿಗೆ ಈ ಪಿಂಕ್ ಮಾರ್ಗದಲ್ಲಿನ ವಿವಿಧ ವಿಭಾಗಗಳ ಸಿವಿಲ್ ಕಾಮಗಾರಿಗಳು ಶೇ. 35.85 ರಿಂದ 75.82 ರಷ್ಟು ಪೂರ್ಣಗೊಂಡಿವೆ. ಕೊತ್ತನೂರು ಡಿಪೋ ಶೇ.29.1ರಷ್ಟು ಪೂರ್ಣಗೊಂಡಿದೆ. ಮೂಲ ಗಡುವುಗಿಂತ ನಾಲ್ಕು ವರ್ಷಗಳ ನಂತರ 2024ರಲ್ಲಿ ಮಾತ್ರ ಪಿಂಕ್ ಲೈನ್ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications