Namma Metro: ವೈಡಕ್ಟ್ ಕೆಳಗೆ ನಿರ್ಮಾಣವಾಗಲಿವೆ ಸುಂದರ ಮಿಡಿಯನ್ ಗಾರ್ಡನ್, ಏನಿದು? ತಿಳಿಯಿರಿ
ಬೆಂಗಳೂರು ನಮ್ಮ ಮೆಟ್ರೋ ಲೈನ್‌ಗಳ ಕೆಳಭಾಗ ಇನ್ನಷ್ಟು ಸುಂದರಗೊಳ್ಳಲಿ. ಇದಕ್ಕಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ ಯೋಜನೆಯೊಂದನ್ನು ಪರಿಚಯಿಸುತ್ತಿದ್ದು, ಒಪ್ಪಂದಕ್ಕೂ ಆಹ್ವಾನಿಸಿದೆ. ಇದರ ಮಾಹಿತಿ ಮುಂದೆ ಓದಿ.
ಬೆಂಗಳೂರು, ಫೆಬ್ರವರಿ 08: ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗದ ಕೆಳಗೆ ಹಸಿರು ಮೀಡಿಯನ್ ಗಾರ್ಡನ್ ನಿರ್ಮಾಣಗೊಳ್ಳಲಿವೆ. ಮೆಟ್ರೋ ವೈಡಕ್ಟ್‌ಗಳು ಇನ್ನಷ್ಟು ಸುಂದರವಾಗಿ ಕಾಣಲಿವೆ. ಇದಕ್ಕಾಗಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಕಾರ್ಪೋರೇಟ್ ಕಂಪನಿಗಳ ಸಹಾಯ ಕೇಳಿದೆ.
ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮಗಳ ಅಡಿಯಲ್ಲಿ ಮೀಡಿಯನ್ ಗಾರ್ಡನ್ ಅಭಿವೃದ್ಧಿಪಡಿಸಲು, ನಿರ್ವಹಣೆ ಹಾಗೂ ಪಿಯರ್ (ವೈಡಕ್ಟ್) ಪೇಂಟಿಂಗ್ ಕೆಲಸಕ್ಕಾಗಿ ಬೆಂಗಳೂರಿನ 'ನಮ್ಮ ಮೆಟ್ರೋ' ಕಾರ್ಪೊರೇಟ್ ಕಂಪನಿಗಳ ಸಹಾಯಕ್ಕಾಗಿ ಮನವಿ ಮಾಡಿದೆ.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ಮೆಟ್ರೊ ವೈಡಕ್ಟ್‌ಗಳ ಕೆಳಗೆ ಅಂದರೆ ಒಂದು ಪಿಲ್ಲರ್ ನಿಂದ ಮತ್ತೊಂದು ಪಿಲ್ಲರ್ ಮಧ್ಯದಲ್ಲಿನ ನಿರ್ವಹಣೆ, ಅಭಿವೃದ್ಧಿ, ವೈಡಕ್ಡ್ ಪೇಂಟಿಂಗ್‌ಗೆ ಕಾರ್ಪೋರೇಟ್ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಸಂಬಂಧ ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ನಮ್ಮ ಮೆಟ್ರೋ ಮುಕ್ತ ಆಹ್ವಾನ ನೀಡಿದೆ.

ಒಪ್ಪಂದ ಏರ್ಪಟ್ಟರೆ ಆ ಕಂಪನಿಗಳು ಮೀಡಿಯನ್ ಗಾರ್ಡ್‌ಗಳನ್ನು ನಿರ್ಮಿಸಲಿವೆ. ಅಲ್ಲಿ ಅಲಂಕಾರಿಕ ಸಸ್ಯಗಳನ್ನು ನೆಡಲಾಗುತ್ತದೆ. ಅವುಗಳ ಸಮರ್ಪಕ ನಿರ್ವಹಣೆ ಹಾಗೂ ನಿಯಮಿತವಾಗಿ ಹೂಬಿಡುವಂತೆ ಪೋಷಿಸಲಾಗುತ್ತದೆ. ಇದು ಉದ್ಯಾನ ನಗರಿ ಖ್ಯಾತಿಯ ಬೆಂಗಳೂರಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.
ಇದರೊಂದಿಗೆ ವೈಡಕ್ಟ್‌ಗಳಿಗೆ ಹಾಗೂ ಸುತ್ತಮುತ್ತಲಿನ ಭಾಗದ ಪೇಂಟಿಂಗ್ ಸಹ ಮಾಡಬೇಕಿರುತ್ತದೆ. ನಮ್ಮ ಮೆಟ್ರೋ ಮೀಡಿಯನ್ ಗಾರ್ಡನ್‌ಗಳನ್ನು ನಿರ್ಮಿಸುತ್ತದೆ. ಒಂದು ಅಡಿಯಷ್ಟು ಸಸಿಗಗಳಿಗೆ ಬೇಕಾದ ಅಗತ್ಯ ಕೆಂಪು ಮಣ್ಣು ತುಂಬಲಾಗುತ್ತದೆ. ಸುರಕ್ಷತಾ ಗ್ರಿಲ್ ಅಳವಡಿಸಲಾಗುತ್ತದೆ ಎಂದು ಯೋಜನೆ ಕುರಿತು ಅಧಿಕಾರಿಗಳು ವಿವರಿಸಿದ್ದಾರೆ.
ಮಿಡಿಯನ್ ಗಾರ್ಡನ್ ನಿರ್ಮಾಣಕ್ಕೆ ಈ ಮಾರ್ಗ ಆಯ್ಕೆ
ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಈಗಾಗಲೇ ಮಿಡಿಯನ್ ಗಾರ್ಡನ್ ನಿರ್ಮಾಣಕ್ಕೆ ಐದು ಮೆಟ್ರೋ ನಿಲ್ದಾಣಗಳ ಲೇನ್ ಆಯ್ಕೆ ಮಾಡಿಕೊಂಡಿದೆ. ಅವುಗಳೆಂದರೆ, ಆರ್‌ವಿ ರಸ್ತೆ-ಬೊಮ್ಮಸಂದ್ರದ ಮೆಟ್ರೋ ಮಾರ್ಗ (ಹೊಸೂರು ರಸ್ತೆ), ಡೈರಿ ವೃತ್ತದಿಂದ ಗೊಟ್ಟಿಗೆರೆವರೆಗಿನ ಮೆಟ್ರೋ ಮಾರ್ಗ (ಬನ್ನೇರುಘಟ್ಟ ರಸ್ತೆ). ಅದೇ ರೀತಿ ಜಾಲಹಳ್ಳಿಯಿಂದ ಮಾದಾವರ-BIEC (ತುಮಕೂರು ರಸ್ತೆ), ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆಆರ್ ಪುರಂ (ಹೊರವರ್ತುಲ ರಸ್ತೆ) ಹಾಗೂ ಬೆನ್ನಿಗಾನಹಳ್ಳಿಯಿಂದ KIA ಟರ್ಮಿನಲ್ (ವಿಮಾನ ನಿಲ್ದಾಣ ಮಾರ್ಗ) ಲೈನ್ ಗಳಲ್ಲಿ ಮುಂದಿನ ದಿನಗಳಲ್ಲಿ ಮಿಡಿಯನ್ ಗಾರ್ಡನ್ ನಿರ್ಮಾಣಗೊಳ್ಳಲಿವೆ.

ಈಗಾಗಲೇ ಕೆಲವು ಪ್ರದೇಶಗಳಲ್ಲಿ ಮೀಡಿಯನ್ ಗಾರ್ಡನ್ ಮತ್ತು ಪಿಲ್ಲರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications