Namma Metro: ಇದೇ ಆಗಸ್ಟ್ ಅಂತ್ಯಕ್ಕೆ ನೇರಳೆ ಮಾರ್ಗದ ಚಲಘಟ್ಟ-ವೈಟ್‌ಫಿಲ್ಡ್‌ಗೆ 60 ನಿಮಿಷದಲ್ಲಿ ಕ್ರಮಿಸಿ
ಬೆಂಗಳೂರು, ಆಗಸ್ಟ್ 06: ಸಾವಿರಾರು ಮಂದಿಗೆ ಸಾರಿಗೆ ಅನುಕೂಲ ಒದಗಿಸುವ ನೇರಳೆ ಮಾರ್ಗದಲ್ಲಿ ಚಲಘಟ್ಟ ಮತ್ತು ವೈಟ್‌ಫಿಲ್ಡ್ (ಕಾಡುಗೋಡಿ) ನಿಲ್ದಾಣ ಮಧ್ಯದಲ್ಲಿ ಈ ಆಗಸ್ಟ್ ತಿಂಗಳಾಂತ್ಯಕ್ಕೆ ವಾಣಿಜ್ಯ ಕಾರ್ಯ ಆರಂಭಿಸಲು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಯೋಜನೆ ರೂಪಿಸಿದೆ. ಅಂದುಕೊಂಡಂತೆ ಆದರೆ ಒಟ್ಟು ಸುಮಾರು ಒಂದು ಲಕ್ಷ ಪ್ರಯಾಣಿಕರಿಗೆ ವೇಗದ ಸಾರಿಗೆ ದೊರೆತಂತಾಗುತ್ತದೆ.
ಈ ನೇರಳೆ ಮಾರ್ಗದಲ್ಲಿ ಕೆಂಗೇರಿಯಿಂದ- ಚಲ್ಲಘಟ್ಟಕ್ಕೆ (1.9 ಕಿ.ಮೀ) ಹಾಗೂ ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರವರೆಗೆ (2 ಕಿ.ಮೀ.) ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪ್ರಾಯೋಗಿಕ ರೈಲು ಓಡಾಟ ಆರಂಭವಾಗಿದೆ. ಇದು ತಿಂಗಳ ಕೊನೆಯಲ್ಲಿ ಪ್ರಯಾಣಿಕರಿಗೆ ಮುಕ್ತಗೊಳ್ಳುವ ಸಾಧ್ಯತೆ ಇದೆ. ಹೀಗಾದರೆ ಚಲಘಟ್ಟ-ವೈಟ್‌ಫೀಲ್ಡ್ (ಕಾಡುಗೋಡಿ)ಯ ಪೂರ್ಣ ನೇರಳೆ ಮಾರ್ಗವನ್ನು ಸುಮಾರು 1 ಗಂಟೆ (60-70 ನಿಮಿಷಗಳಲ್ಲಿ) ಕ್ರಮಿಸಬಹುದಾಗಿದೆ. ರಸ್ತೆ ಮೂಲಕ ಸುಮಾರು ಎರಡು ಗಂಟೆಗೂ ಹೆಚ್ಚು ಅವಧಿ ಹಿಡಿಯುತ್ತದೆ.

ಈ ನೇರಳೆ ಮಾರ್ಗದ ಒಂದು ಸದ್ಯ ಆದಿಯಿಂದ ಅಂತ್ಯವರೆಗೆ ಒಟ್ಟು 37 ನಿಲ್ದಾಣಗಳು ಇದ್ದು, 43 ಕಿಲೋ ಮೀಟರ್ ಉದ್ದವಿದೆ. ಈ ಮಾರ್ಗವು ಹಾಲಿ ಮೆಜೆಸ್ಟಿಕ್ ನಲ್ಲಿ ಹಸಿರು ಮಾರ್ಗವನ್ನು ಮತ್ತು ಭವಿಷ್ಯದಲ್ಲಿ ಪಿಂಕ್ ಮತ್ತು ನೀಲಿ ಮಾರ್ಗವನ್ನು ಹಾದು ವೈಟ್ ಫಿಲ್ಡ್ ತಲುಪಲಿದೆ. ಈ ಆಗಸ್ಟ್ ಕೊನೆಗೆ ನೇರಳ ಮಾರ್ಗ ಸಂಚಾರ ಮುಕ್ತಗೊಂಡರೆ ಐಟಿ ಕಾರಿಡಾರ್‌ಗೆ ಮೆಟ್ರೋ ಸಂಚಾರ ಸಂಪೂರ್ಣ ಸಂಪರ್ಕ ಸಾಧಿಸಿದಂತಾಗುತ್ತದೆ. ಲಕ್ಷಾಂತರ ಉದ್ಯೋಗಿಗಳು ಮೆಟ್ರೋ ಬಳಸಲಿದ್ದಾರೆ.
ಈ ಮಾರ್ಗದಲ್ಲಿ ಎರಡು ಸಂಪರ್ಕ ಕೊಂಡಿಗಳಾದ ಕೆ.ಆರ್ ಪುರಂ -ಬೈಯಪ್ಪನಹಳ್ಳಿ ಹಾಗೂ ಕೆಂಗೇರಿ-ಚಲಘಟ್ಟ ಮಾರ್ಗ 3.9 ಕಿ.ಮೀ ನಿರ್ಮಾಣ ಕೆಲಸ ಬಾಕಿ ಇದ್ದ ಹಿನ್ನೆಲೆ ಪೂರ್ಣಗೊಳಿಸುವುದು ತುಸು ತಡವಾಗಿತ್ತು. ಈ ಹಿಂದೆ ಜೂನ್ ಅಂತ್ಯಕ್ಕೆ ಪ್ರಯೋಗಿಕ ಸಂಚಾರ ಎಂದು ಹೇಳಲಾಗಿತ್ತು.
2025ಕ್ಕೆ ಮೆಟ್ರೋ ನೀಲಿ ರೇಖೆ ಪೂರ್ಣ ಸಾಧ್ಯತೆ
2025ಕ್ಕೆ ಮೆಟ್ರೋ ನೀಲಿ ರೇಖೆ ಪೂರ್ಣ ಗೊಳಿಸುವ ಯೋಜನೆ ಜೊತೆಗೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವ್ಯಾಪಕವಾಗಿ ವಿಸ್ತರಣೆ ಆಗಿರಲಿದೆ. ನಗರದಿಂದ ದೇವನಹಳ್ಳಿಯ ಬೆಂಗಳೂರು ವಿಮಾನ ನಿಲ್ದಾಣವರೆಗೆ (ಕೆಐಎ) ವರೆಗೆ 37 ಕಿಲೋ ಮೀಟರ್ ಉದ್ದದ ನೀಲಿ ರೇಖೆಯ ನಿರ್ಮಾಣ ಕೆಲಸ ಭರದಿಂದ ಸಾಗಿದೆ. ಇತರ ಮಾರ್ಗಗಳಿಗೆ ಹೋಲಿಸಿದರೆ ನೀಲಿ ಲೈನ್ ಕಾಮಗಾರಿ ಹೆಚ್ಚು ಚುರುಕಿನಿಂದ ಸಾಗಿದೆ ಎನ್ನಲಾಗಿದೆ.

ಇದರ ಕೆಲಸ ಮೆಟ್ರೋ ಹಂತ 2B ಯೋಜನೆ ಅಡಿ ನಡೆಯುತ್ತಿದ್ದು, ಒಟ್ಟು ಈ ಲೈನ್‌ನಲ್ಲಿ 19 ನಿಲ್ದಾಣಗಳು ತಲೆ ಎತ್ತಲಿವೆ. ಬೆಂಗಳೂರಿನಲ್ಲಿ BMRCL ಹಾಲಿ 70 ಕಿಮೀ ಮೆಟ್ರೊ ಸೇವೆ ನೀಡುತ್ತಿದೆ. 2023ಕ್ಕೆ 75 ಕಿ.ಮೀ.ಮತ್ತು 2025ಕ್ಕೆ 175 ಕಿಲೋ ಮೀಟರ್‌ವರೆಗೆ ಮೆಟ್ರೊ ಜಾಲ ವಿಸ್ತರಿಸುವ ಗುರಿ ಹೊಂದಲಾಗಿದೆ. ಕೇವಲ ಮುಂದಿನ ಒಂದೂ ವರೆ ವರ್ಷದಲ್ಲಿ ಬಾಕಿ 100 ಕಿಲೋ ಮೀಟರ್ ಮೆಟ್ರೋ ಮಾರ್ಗ ನಿರ್ಮಾಣ ಕಾರ್ಯ ಅಂದುಕೊಂಡಂತೆ ಪೂರ್ಣಗೊಳ್ಳುವುದು ಎಂಬ ಪ್ರಶ್ನೆ ಉದ್ಭವಿಸಿದೆ.
2021ರಲ್ಲಿ ವಿಸ್ತರಣೆ ಆಗಿದ್ದ ಲೈನ್
ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗೆ ಮಾತ್ರವೇ ಇದ್ದ ನೇರಳೆ ಮಾರ್ಗದ ಇತಿಹಾಸ ನೋಡುವುದಾದರೆ, 2021ರಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ 7.5 ಕಿ.ಮೀವರೆಗೆ ಸೇವೆ ಆರಂಭಿಸಿತು. 2023ರ ಮಾರ್ಚ್‌ನಲ್ಲಿ ವೈಟ್‌ಫೀಲ್ಡ್‌ನಿಂದ ಕೆ.ಆರ್.ಪುರದವರೆಗೆ 13.71 ಕಿಲೋ ಮೀಟರ್ ಸಂಚಾರ ಸೇವೆ ಶುರುವಾಯಿತು. ಇನ್ನೂ ಈ ತಿಂಗಳಾಂತ್ಯಕ್ಕೆ 3.9 ಕಿಲೋ ಮೀಟರ್ ಸೇವೆ ಆರಂಭವಾಗುವ ವಿಶ್ವಾಸ ವಿದೆ.
ಸಂಪರ್ಕ ಕೊಂಡಿಯಾಗಿದ್ದ ಕೆ.ಆರ್.ಪುರಂನಿಂದ ಬೈಯಪ್ಪನಹಳ್ಳಿವರೆಗಿನ ಮಾರ್ಗ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಜನರು ಬೈಯಪ್ಪನಹಳ್ಳಿಯಿಂದ ಫಿಡರ್ ಬಸ್ ಮೂಲಕ ಕೆ.ಆರ್. ಪುರಂ ತೆರಳಿ ಅಲ್ಲಿಂದ ವೈಟ್‌ಫಿಲ್ಡ್‌ಗೆ ಹೋಗಬೇಕಿತ್ತು. ಮುಂದಿನ ತಿಂಗಳಿಂದ ಈ ಸಮಸ್ಯೆ ತಪ್ಪಲಿದೆ.












Click it and Unblock the Notifications