Namma Metro Pink Line: ಮೆಟ್ರೋ ಎರಡನೇ ಹಂತದ ಪಿಂಕ್ ಲೈನ್ ಸುರಂಗ ಕಾಮಗಾರಿಯಲ್ಲಿ ಪ್ರಗತಿ, ವಿವರಗಳು
ಮೆಟ್ರೋ ಪಿಂಕ್ ಲೈನ್ ಸುರಂಗ ಕಾಮಗಾರಿಯಲ್ಲಿ ಒಂಬತ್ತು ಸುರಂಗ ಕೊರೆಯುವ ಯಂತ್ರಗಳಲ್ಲಿ ನಾಲ್ಕು ತಮ್ಮ ಕೆಲಸ ಮುಗಿಸಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಬೆಂಗಳೂರು, ಫೆಬ್ರವರಿ. 16: ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋದ II ನೇ ಹಂತದ ಯೋಜನೆಯಲ್ಲಿ ಶೇಕಡಾ 72 ರಷ್ಟು ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
ಕಾಳೇನ ಅಗ್ರಹಾರದಿಂದ ನಾಗವಾರ ಮೆಟ್ರೋ (ಪಿಂಕ್ ಲೈನ್) ಮಾರ್ಗದ ಭಾಗವಾಗಿ, ಬಿಎಂಆರ್‌ಸಿಎಲ್ ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ 13.90 ಕಿಮೀ ಸುರಂಗ ಜಾಲವನ್ನು ನಿರ್ಮಿಸುತ್ತಿದೆ. ಈ ಅವಳಿ ಸುರಂಗಗಳ ಒಟ್ಟು ಉದ್ದ 21.245 ಕಿಮೀ ಆಗಿದೆ. ಈ ಸುರಂಗ ಜಾಲವನ್ನು ನಿರ್ಮಿಸಲು, ಬಿಎಂಆರ್‌ಸಿಎಲ್ ಒಂಬತ್ತು ಸುರಂಗ ಕೊರೆಯುವ ಯಂತ್ರಗಳನ್ನು ನಿಯೋಜಿಸಿತ್ತು. 21.245 ಕಿಮೀ ಸುರಂಗ ಮಾರ್ಗದಲ್ಲಿ 15.210 ಕಿಮೀ (72%) ಪೂರ್ಣಗೊಂಡಿದೆ ಎಂದು ಬಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಈ ಬಗ್ಗೆ ಬಿಎಂಆರ್‌ಸಿಎಲ್‌ನ ಎಂಡಿ ಅಂಜುಮ್ ಪರ್ವೇಜ್ ಮಾತನಾಡಿ, 'ಟ್ಯಾನರಿ ರಸ್ತೆಯ ಶಾದಿ ಮಹಲ್‌ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆ (ವೆಲ್ಲಾರಾ ಜಂಕ್ಷನ್) ವರೆಗೆ ಎಲ್ ಅಂಡ್ ಟಿ ಗೆ ನೀಡಲಾದ ಎರಡು ಪ್ಯಾಕೇಜ್‌ಗಳ ಸುರಂಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮುಂದಿನ ತಿಂಗಳು ಮತ್ತೊಂದು ಸುರಂಗ ಕೊರೆಯುವ ಯಂತ್ರವು ತನ್ನ ಕಾರ್ಯ ಪೂರ್ಣಗೊಳಿಸುತ್ತದೆ. ಗುತ್ತಿಗೆದಾರರು ಮೊದಲ ಹಂತದ ಕಾಂಕ್ರಿಟೀಕರಣ ಮತ್ತು ಟ್ರ್ಯಾಕ್ ಹಾಕುವ ಕಾಮಗಾರಿಯನ್ನು ಆರಂಭಿಸಿದ್ದಾರೆ' ಎಂದು ತಿಳಿಸಿದ್ದಾರೆ.

ಅಂಡರ್‌ಗ್ರೌಂಡ್ ನಿಲ್ದಾಣವನ್ನು ಕಾರ್ಯಗತಗೊಳಿಸಲಾಗುತ್ತಿದೆ. 2024ರ ವೇಳೆಗೆ ಸಂಪೂರ್ಣ ಅಂಡರ್‌ಗ್ರೌಂಡ್ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡೈರಿ ಸರ್ಕಲ್‌ನಿಂದ ವೆಲ್ಲರಾ ಜಂಕ್ಷನ್ ನಡುವಿನ ಸುರಂಗ ಕಾಮಗಾರಿ ಈ ವರ್ಷಾಂತ್ಯಕ್ಕೆ ಮತ್ತು ಟ್ಯಾನರಿ ರಸ್ತೆಯಿಂದ ನಾಗವಾರದವರೆಗಿನ ಸುರಂಗ ಕಾಮಗಾರಿ ಮುಂದಿನ ವರ್ಷದ ಆರಂಭದಲ್ಲಿ ಮುಗಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಒಂಬತ್ತು ಯಂತ್ರಗಳ ಪೈಕಿ ನಾಲ್ಕು ಯಂತ್ರಗಳು ಕೆಲಸ ಪೂರ್ಣಗೊಳಿಸಿವೆ. ಈ ಹಿಂದೆ, ಉರ್ಜಾ, ವರದಾ ಮತ್ತು ಅವ್ನಿ ಹೆಸರಿನ ಟಿಬಿಎಂಗಳು ತಮ್ಮ ಗೊತ್ತುಪಡಿಸಿದ ಉದ್ದದ ಸುರಂಗವನ್ನು ಪೂರ್ಣಗೊಳಿಸಿದ್ದವು. ಬುಧವಾರ, ಮತ್ತೊಂದು ಟಿಬಿಎಂ ಲಾವಿ ರಾಷ್ಟ್ರೀಯ ಮಿಲಿಟರಿ ಶಾಲಾ ನಿಲ್ದಾಣದಲ್ಲಿ (ವೆಲ್ಲಾರಾ ಜಂಕ್ಷನ್) ತನ್ನ ಕೆಲಸ ಮುಗಿಸಿದೆ.

ಈ ಯಂತ್ರವು ಮಾರ್ಚ್ 26, 2021 ರಂದು ಶಿವಾಜಿನಗರದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು. ಮೇ 26, 2022 ರಿಂದ ವೆಲ್ಲಾರಾ ಜಂಕ್ಷನ್ ಕಡೆಗೆ ಸುರಂಗ ಕೊರೆಯಲು ಆರಂಭಿಸಿದ್ದು, ಬುಧವಾರ ಯಶಸ್ವಿಯಾಗಿ ಹೊರಹೊಮ್ಮಿದೆ.
ಪಾಟರಿ ಟೌನ್ ನಿಲ್ದಾಣದಿಂದ ಶಾದಿ ಮಹಲ್ ಶಾಫ್ಟ್‌ಗೆ ಸುರಂಗ ಕೊರೆಯುತ್ತಿರುವ ಟಿಬಿಎಂ ವಿಂಧ್ಯಾ ಈ ತಿಂಗಳ ಅಂತ್ಯದ ವೇಳೆಗೆ ಕೆಲಸ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
ಇನ್ನು, ಅಂಡರ್‌ಗ್ರೌಂಡ್ ನಿಲ್ದಾಣದ ಕೆಲಸಗಳು ಉತ್ತಮ ಪ್ರಗತಿಯಲ್ಲಿದ್ದು, ಬಿಎಂಆರ್‌ಸಿಎಲ್ ಮಾರ್ಚ್ 2025 ರ ಅಂತ್ಯದ ವೇಳೆಗೆ 21.30 ಕಿಮೀ ಉದ್ದದ ಪಿಂಕ್ ಲೈನ್ ಅನ್ನು ಪೂರ್ಣಗೊಳಿಸಲು ಯೋಜಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications