Namma Metro: 3ನೇ ಹಂತದ ಯೋಜನೆ ನಿರ್ಮಾಣಕ್ಕೆ ಸಜ್ಜು: ಜಿಯೋಟೆಕ್ನಿಕಲ್ ಸರ್ವೇ ಆರಂಭ ಶೀಘ್ರ
ಬೆಂಗಳೂರು, ಮೇ 05: ಬೆಂಗಳೂರಿನಲ್ಲಿ ತನ್ನ ಜಾಲ ವಿಸ್ತರಣೆಗೆ ಮುಂದಾಗಿರುವ ನಮ್ಮ ಮೆಟ್ರೋ (Namma Metro) ಮೂರನೇ ಹಂತ ಯೋಜನೆಯನ್ನು (Metro 3rd Phase Project) ಆರಂಭಿಸಲಿದೆ. ಈ ಸಂಬಂಧ ತಾಂತ್ರಿಕ ಕಾರ್ಯವನ್ನು ಆರಂಭಿಸಲು ಸಜ್ಜಾಗಿದೆ.
ಎರಡು ಹೊಸ ಎಲಿವೆಟೆಡ್ ಕಾಮಗಾರಿ ಒಳಗೊಳ್ಳುವ ಈ ನಮ್ಮ ಮೆಟ್ರೋ-3ನೇ ಹಂತದ ಯೋಜನೆ ಪ್ರಾರಂಭಿಸಲು ಎಲ್ಲ ತಯಾರಿ ನಡೆಸಿದೆ. ಮೆಟ್ರೋ ಮೂಲಸೌಕರ್ಯದ ಸ್ಥಿರತೆ ಹಾಗೂ ಪರಿಣಾಮಕಾರಿ ಅನುಷ್ಠಾನದ ಖಚಿತತೆಗಾಗಿ ಮುಂಬರುವ ಹಂತಕ್ಕೆ ಜಿಯೋಟೆಕ್ನಿಕಲ್ ತನಿಖೆಯ ಪ್ರಾರಂಭಿಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಲಿವೇಟೆಡ್ ಲೈನ್ ಒಳಗೊಂಡ ಯೋಜನೆ
ಸದ್ಯ ಬೆಂಗಳೂರಿನಲ್ಲಿ 73 ಕಿಲೋ ಮೀಟರ್ ಜಾಲ ಹೊಂದಿರುವ ನಮ್ಮ ಮೆಟ್ರೋ-3ನೇ ಹಂತದ ವಿಸ್ತರಣೆಯು ಎರಡು ಹೊಸ ಎಲಿವೇಟೆಡ್ ಲೈನ್‌ಗಳನ್ನು ಒಳಗೊಂಡಿದೆ. ಈ ಎಲಿವೇಟೆಡ್‌ಗಳು ಸುವ್ಯವಸ್ಥಿತ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ನಮ್ಮ ಮೆಟ್ರೋ ಹೇಳಿದೆ.
ಯೋಜನೆಲ್ಲಿ ಮೊದಲ ಲೈನ್ ಬರೋಬ್ಬರಿ 32.5 ಕಿಮೀ ಉದ್ದವಿದೆ. ನಾಲ್ಕನೇ ಹಂತ ಜೆ.ಪಿ.ನಗರ-ಕೆಂಪಾಪುರದಿಂದ ಹೊರ ವರ್ತುಲ ರಸ್ತೆಯ ಪಶ್ಚಿಮ ಭಾಗದವರೆಗೆ ಈ ಲೈನ್ ಸಂಪರ್ಕಿಸುತ್ತದೆ. ಎರಡನೇ ಮಾರ್ಗವು 12.5 ಕಿಲೋಮೀಟರ್ ಉದ್ದವಿದ್ದು, ಇದು ಮಾಗಡಿ ರಸ್ತೆಯಲ್ಲಿ ಹೊಸಹಳ್ಳಿ-ಕಡಬಗೆರೆವರೆಗೆ ನಿರ್ಮಾಣಗೊಳ್ಳಲಿದೆ.
₹6 ಕೋಟಿ ಮೌಲ್ಯದ ಸರ್ವೇ
ಈ ಯೋಜನೆ ಆರಂಭಕ್ಕಾಗಿ BMRCL ಅಧಿಕಾರಿಗಳು ಅಂದಾಜು ₹6 ಕೋಟಿ ಮೌಲ್ಯದ ಜಿಯೋಟೆಕ್ನಿಕಲ್ ಸರ್ವೇ ಮುಂದಿನ ವಾರದಿಂದ ನಡೆಸಲಿದ್ದಾರೆ. ಈ ಸಮಗ್ರ ಮೌಲ್ಯಮಾಪನವು ಉದ್ದೇಶಿತ ಮಾರ್ಗಗಳ ನಿರ್ಮಿಸುವಲ್ಲಿ ಯಾವುದೇ ಅಡತಡೆ ಆಗದಂತೆ ನೋಡಿಕೊಳ್ಳಲಿದೆ. ಉದ್ದೇಶಿತ ಮಾರ್ಗಗಳ ಉದ್ದಕ್ಕೂ ಮಣ್ಣು ಮತ್ತು ಬಂಡೆಗಳ ಭೌತಿಕ ಗುಣಲಕ್ಷಣಗಳ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಲಿದೆ.

ಮಾರ್ಗ ನಿರ್ಮಾಣಕ್ಕೆ ಸರ್ವೇ ಸಹಕಾರಿ
ಜಿಯೋಟೆಕ್ನಿಕಲ್ ತನಿಖೆ ಮೂಲಕ ಮೆಟ್ರೋ ಲೈನ್‌ಗಳು ಹಾದು ಹೋಗುವ ಮಾರ್ಗದಲ್ಲಿ ಮಣ್ಣಿನ ಸ್ಥಿರತೆ, ಬಂಡೆ ರಚನೆಗಳು ಮತ್ತು ಇತರ ಭೌಗೋಳಿಕ ಅಂಶಗಳನ್ನು ವಿಶ್ಲೇಷಿಸಲಾಗುತ್ತದೆ. ಬಂದ ವರದಿ ಆಧಾರದಲ್ಲಿ BMRCL ಎಂಜಿನಿಯರ್‌ಗಳು ಎಲ್ಲೆಲ್ಲಿ ಮೆಟ್ರೊ ಪಿಲ್ಲರ್‌ಗಳಿಗೆ ಎಷ್ಟು ಅಡಿ ಪಾಯ ತೋಡಬೇಕು, ಆಳ ಅಗಲ, ವಿನ್ಯಾಸದ ಕುರಿತು ನಿರ್ಧರಿಸಲು ಇದು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2028ರ ವೇಳೆಗೆ 44 ಕಿಮೀ ಲೈನ್ ನಿರ್ಮಾಣ
ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿ ಆರಂಭಕ್ಕೆ ಅನುಮೋದನೆ ನೀಡಿತ್ತು. ಯೋಜನೆ ಮೂಲಕ ಬೆಂಗಳೂರಿನಲ್ಲಿ 2028ರ ವೇಳೆಗೆ 15,611 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 44.65 ಕಿಮೀ ಹೊಸ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ ಎಂದು ಅಂದಾಜಿಸಲಾಗಿದೆ.
ಇದೇ ವರ್ಷ 2024ರ ಮಾರ್ಚ್ ತಿಂಗಳಲ್ಲಿ ನಡೆದ ಸಂಪುಟ ಸಭೆಯ ನಂತರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಒಟ್ಟು ಯೋಜನಾ ವೆಚ್ಚದ ಶೇಕಡಾ 80ರಿಂದ 85 ರಾಜ್ಯ ಸರ್ಕಾರ ಭರಿಸಲಿದೆ. ಯೋಜನೆ ಬೇಕಾದ ಬಾಕಿ ಹಣವನ್ನು ಕೇಂದ್ರ ಸರ್ಕಾರ ತನ್ನ ಭೊಕ್ಕಸದಿಂದ ನೀಡಲಿದೆ ಎಂದು ಮಾಹಿತಿ ನೀಡಿದ್ದರು.
ಸಮಗ್ರ ಯೋಜನೆ ವರದಿಯಲ್ಲಿನ (ಡಿಪಿಆರ್) ಕೆಲವು ಬದಲಾವಣೆಗಳು, ಪುನರ್ ಸಲ್ಲಿಕೆ ಬಳಿಕ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರ ಅನುಮೋದನೆ ನೀಡಿದೆ. ಡಿಪಿಆರ್ ಸಹ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮೆಟ್ರೋ ಮಾರ್ಗಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.












Click it and Unblock the Notifications