Namma Metro: ಮೆಟ್ರೋ ಪ್ರಯಾಣಿಕರೇ ಗಮನಿಸಿ, ದರ ಏರಿಕೆ ಬಗ್ಗೆ ಅಪ್‌ಡೇಟ್
ಬೆಂಗಳೂರು, ಜನವರಿ 06: ಕರ್ನಾಟಕದಲ್ಲಿ ಸರ್ಕಾರಿ ಬಸ್ ಪ್ರಯಾಣ ದರ ಏರಿಕೆಯಾಗಿದೆ. ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜನವರಿ 5ರಿಂದಲೇ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಶೇಕಡ 15ರಷ್ಟು ಹೆಚ್ಚಿಸಲಾಗಿದೆ. ಬೆಂಗಳೂರು ನಗರದಲ್ಲಿ ಬಿಎಂಟಿಸಿ ಪ್ರಯಾಣ ದರ ಏರಿಕೆಯಾಗಿದೆ. ಈಗ ಆಟೋ ದರ, ನಮ್ಮ ಮೆಟ್ರೋ ದರ, ನೀರಿನ ದರ ಏರಿಕೆಯ ಪ್ರಸ್ತಾವನೆ ಇದೆ. ಯಾವುದು ಮೊದಲು ಏರಿಕೆಯಾಗಲಿದೆ?, ಯಾವ ದರ ಏರಿಕೆ ಬಿಸಿ ಜನರಿಗೆ ಮೊದಲು ತಟ್ಟಲಿದೆ ಎಂಬುದಕ್ಕೆ ಇನ್ನೂ ಸಹ ಉತ್ತರವಿಲ್ಲ.
ಸದ್ಯದ ಮಾಹಿತಿಯಂತೆ ಜನವರಿ 21ರಿಂದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಾಗಲಿದೆ ಎಂಬ ವರದಿಗಳಿವೆ. ಪ್ರಸ್ತುತ ನಮ್ಮ ಮೆಟ್ರೋ ಕನಿಷ್ಠ ಪ್ರಯಾಣ ದರ 10 ಮತ್ತು ಗರಿಷ್ಠ ದರ 60 ರೂ. ಇದೆ. ದರ ಏರಿಕೆ ಕುರಿತು ವರದಿ ನೀಡಲು ಬಿಎಂಆರ್‌ಸಿಎಲ್ ರಚನೆ ಮಾಡಿದ್ದ ಸಮಿತಿ ವರದಿ ಸಲ್ಲಿಸಿದೆ. ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ದರ ಏರಿಕೆ ಕುರಿತು ಅಂತಿಮ ತೀರ್ಮಾನವಾಗಲಿದೆ.

2017ರ ಬಳಿಕ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿಲ್ಲ. ಆದ್ದರಿಂದ ಈಗ ಪ್ರಯಾಣ ದರವನ್ನು ಏರಿಕೆ ಮಾಡಲಾಗುತ್ತದೆ. ಶೇ 40 ರಿಂದ 45ರಷ್ಟು ದರ ಏರಿಕೆಗೆ ಸಮಿತಿ ಶಿಫಾರಸು ಮಾಡಿದೆ. ಎಷ್ಟು ದರ ಏರಿಕೆ ಮಾಡಬೇಕು? ಎಂದು ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ.
ದರ ಏರಿಕೆ ಬೇಡ: ಬೆಂಗಳೂರು ಕೇಂದ್ರ ಸಂಸದ ಪಿ. ಸಿ. ಮೋಹನ್ ಸೋಮವಾರ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಭೇಟಿಯಾಗಿ ಮಾತುಕತೆ ನಡೆಸಿದರು. ಶೇ 40-45ರಷ್ಟು ಪ್ರಯಾಣ ದರ ಏರಿಕೆ ಪ್ರಸ್ತಾವನೆಯನ್ನು ಮರು ಪರಿಶೀಲನೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಿದರು.
ಪ್ರಯಾಣ ದರ ಏರಿಕೆ ಪ್ರಯಾಣಿಕರಿಗೆ ಹೊರೆಯಾಗಲಿದೆ. ಇದರ ಕಾರಣ ಪುನಃ ಜನರು ಖಾಸಗಿ ವಾಹನಗಳಲ್ಲಿ ಸಂಚಾರ ಆರಂಭಿಸಿದರೆ ಸಂಚಾರ ದಟ್ಟಣೆಗೆ ಕಾರಣವಾಗಲಿದೆ ಎಂದು ಎಂಡಿಗೆ ಸಂಸದರು ವಿವರಣೆ ನೀಡಿದ್ದಾರೆ. ಪ್ರಯಾಣದರ ಏರಿಕೆ ಹೊರತಾದ ಆದಾಯ ಸಂಗ್ರಹಣೆಯತ್ತ ಗಮನಹರಿಸುವಂತೆಯೂ ಸಂಸದರು ಮನವಿ ಮಾಡಿದ್ದಾರೆ.
ನಮ್ಮ ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರ ರಚಿಸಿದ ಬಿಎಂಆರ್‌ಸಿಎಲ್‌ನ ದರ ನಿಗದಿ ಸಮಿತಿ ನಮ್ಮ ಮೆಟ್ರೋ ದರ ಏರಿಕೆ ಕುರಿತು ಈಗಾಗಲೇ ಶಿಫಾರಸು ಸಲ್ಲಿಸಿದೆ.
ಮೂವರು ಸದಸ್ಯರು ಇರುವ ಸಮಿತಿ ಜನರಿಂದ, ಸಂಘ ಸಂಸ್ಥೆಗಳಿಂದ ದರ ಏರಿಕೆ ಕುರಿತು ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. 2 ಸಾವಿರಕ್ಕೂ ಅಧಿಕ ಸಲಹೆಗಳನ್ನು ಸ್ವೀಕಾರ ಮಾಡಿದ ಬಳಿಕ ಬಿಎಂಆರ್‌ಸಿಎಲ್‌ಗೆ ವರದಿಯನ್ನು ಸಲ್ಲಿಸಿದ್ದು, ದರ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಿದೆ.
ಮೂಲ ಸೌಕರ್ಯಗಳು, ಇಂಧನ ವೆಚ್ಚ, ವೇತನ, ನಿರ್ವಹಣೆ ವೆಚ್ಚ ಮುಂತಾದ ಅಂಶಗಳನ್ನು ಪರಿಗಣಿಸಿ ಈ ದರ ಏರಿಕೆಯ ಶಿಫಾರಸು ಮಾಡಿದೆ. ಆದರೆ ಈ ಕುರಿತು ಬಿಎಂಆರ್‌ಸಿಎಲ್ ಸಭೆಯಲ್ಲಿ ಅಂತಿಮ ತೀರ್ಮಾನವಾಗಬೇಕು, ಬಳಿಕ ಸರ್ಕಾರದ ಒಪ್ಪಿಗೆ ಪಡೆದು ಅಂತಿಮ ಘೋಷಣೆ ಮಾಡಬೇಕಿದೆ.
ಸಮಿತಿ ಶಿಫಾರಸು ಮಾಡಿರುವ ಮಾದರಿಯಲ್ಲಿ ದರ ಏರಿಕೆ ಮಾಡದಿದ್ದರೂ ಸಹ ಶೇ 15 ರಿಂದ 20ರಷ್ಟು ದರವನ್ನು ಏರಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಆದರೆ ಕೇಂದ್ರ ರೈಲ್ವೆ ಸಚಿವಾಲಯದ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ದರ ಏರಿಕೆ ಕುರಿತು ಅಂತಿಮ ತೀರ್ಮಾನವಾಗಬೇಕಿದೆ.












Click it and Unblock the Notifications