ಬೆಂಗಳೂರಲ್ಲಿ ಅನಧಿಕೃತ ಫ್ಲೆಕ್ಸ್, ಜಾಹೀರಾತು ಹಾವಳಿ: 48 FIR, ತೆರವಾದ ಫ್ಲೆಕ್ಸ್ ಅಂಕಿ-ಸಂಖ್ಯೆ
ಬೆಂಗಳೂರು, ಜೂನ್ 16: ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಮೊಲದೇ ತಿಳಿಸಿದಂತೆ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ ಅಳವಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಇದುವರೆಗೆ ಪೊಲೀಸ್ ಠಾಣೆಯಲ್ಲಿ 76 ದೂರುಗಳನ್ನು ನೀಡಿದ್ದು, 48 ಎಫ್‌ಐಆರ್ ದಾಖಲಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಜಾಹೀರಾತುಗಳು ಇರದಂತೆ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಅದರಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

ಬಿಬಿಎಂಪಿ ಮುಖ್ಯ ಆಯುಕ್ತರು ಸೂಚನೆ ಮೇರೆಗೆ, ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ಎಲ್ಲಾ 8 ವಲಯಗಳ ಅಧಿಕಾರಿಗಳ ಜೊತೆ ಪ್ರತಿನಿತ್ಯ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ. ನಗರದಲ್ಲಿ ಎಲ್ಲಿಯಾದರೂ ಯಾವುದೇ ಅನಧಿಕೃತ ಜಾಹೀರಾತುಗಳು ಕಂಡರು ತೆರವು ಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಜೂನ್ 1ರವರೆಗೆ ತೆರವಾರದ ಫ್ಲೆಕ್ಸ್‌ಗಳ ಮಾಹಿತಿ
ಬಿಬಿಎಂಪಿ ಮುಖ್ಯಸ್ಥರ ಸೂಚನೆ ಮೇರೆಗೆ ಸೂಚನೆ ನೀಡುವ ಜೊತೆಗೆ ಅನಧಿಕೃತವಾಗಿ ಫ್ಲೆಕ್ಸ್/ಬ್ಯಾನರ್ಸ್ ಹಾಕುವವರ ಮೇಲೆ ಎಫ್.ಐ.ಆರ್ ದಾಖಲಿಸಲಾಗುತ್ತಿದೆ. ಜೂನ್ 1ರವರೆಗೆ ಬೆಂಗಳೂರಿನಲ್ಲಿ ಬರೋಬ್ಬರಿ 3843 ಫ್ಲೆಕ್ಸ್, ಬ್ಯಾನರ್, ಎಲ್.ಇ.ಡಿ ಹಾಗೂ ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸಲಾಗಿದೆ.
ಇನ್ನೂ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಒಟ್ಟು 76 ದೂರುಗಳನ್ನು ಅಧಿಕಾರಿಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ವ್ಯಕ್ತಿಗಳು ಸೇರಿದಂತೆ ಸಂಘ, ಸಂಸ್ಥೆ ಮೇಲೆ ಒಟ್ಟು 48 ಎಫ್.ಐ.ಆರ್ ದಾಖಲಿಸಲಾಗಿದೆ. ಜಾಹೀರಾತು ನಿಯಮ ಮೀರಿ ಫ್ಲೆಕ್ಸ್ ಹೋರ್ಡಿಂಗ್ ಹಾಕಿದ್ದಕ್ಕಾಗಿ 75,000 ರೂ. ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅನಧಿಕೃತ ಜಾಹೀರಾತು ಅಳವಡಿಸದಂತೆ ಬಿಬಿಎಂಪಿ ಮನವಿ
ಬೆಂಗಳೂರಿನಲ್ಲಿ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018"ರಡಿ ಹಲವು ವಿಧದ ಜಾಹೀರಾತು ನಿಷೇಧಿಸಲಾಗಿದೆ. ಅದರ ಪ್ರಕಾರ, ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿದಂತೆ ಸೂಚನೆ ಇದೆ.
ಅದರೊಂದಿಗೆ ವಾಣಿಜ್ಯ ಜಾಹೀರಾತು, LED ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಹಾಗೂ ಸಾರ್ವಜನಿಕ ಮತ್ತು ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ ಸಮಾರಂಭಗಳು ಕುರಿತ ಜಾಹೀರಾತು / ಪ್ರಕಟಣೆಗಳ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳು, ಭಿತ್ತಿಪತ್ರ, ಬಾವುಟಗಳು ಇತ್ಯಾದಿ ಅಳವಡಿಸುವುದನ್ನು ನಿಷೇದಿಸಲಾಗಿದೆ. ಆದ್ದರಿಂದ ಯಾರೊಬ್ಬರೂ ಕೂಡಾ ಅನಧಿಕೃತವಾಗಿ ಜಾಹೀರಾತು ಅಳವಡಿಸಬಾರದು ಎಂದು ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನಗರದ ಸೌಂದರ್ಯಕ್ಕೆ ಜಾಹೀರಾತುಗಳು ಕಪ್ಪು ಚುಕ್ಕೆ
ಬೆಂಗಳೂರಿನ ರಸ್ತೆ ಬದಿ, ಪಾದಚಾರಿ ಮಾರ್ಗ, ಮೇಲುಸೇತುವೆ ಸೇರಿದಂತೆ ಇನ್ನಿತರೆ ಕಡೆ ಅನಧಿಕೃತವಾಗಿ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸುವುದರಿಂದ ನಾಗರೀಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ನಗರದ ಸೌಂದರ್ಯ ಹಾಳಾಗುತ್ತಿದೆ. ಅಲ್ಲದೆ ಪರಿಸರಕ್ಕೆ ಮಾರಕವಾಗಿರುತ್ತದೆ ಎಂದು ಬಿಬಿಎಂಪಿ ಹಿಂದಿನಿಂದ ತಿಳಿಸುತ್ತಲೇ ಬಂದಿದೆ.
ಸಾರ್ವಜನಿಕರು ದೂರು ನೀಡಬಹುದು
ನಿಮಗೆ ನಗರದಲ್ಲಿ ಅನಧಿಕೃತ ಜಾಹೀರಾತು ಫ್ಲೆಕ್ಸ್ ಕಂಡು ಬಂದಲ್ಲಿ ಈ ದೂರವಾಣಿ 1533ಗೆ ಕರೆ ಮಾಡಿ ಅಥವಾ ವಾಟ್ಸಪ್ ಸಂಖ್ಯೆ 9480683939ಗೆ ಛಾಯಾಚಿತ್ರದ ಸಮೇತ ದೂರು ನೀಡಬಹುದುದಾಗಿದೆ. ಅಥವಾ ವೀಡಿಯೋ ಮಾಡಿ ವಿಳಾಸ ಸಹಿತ ಕಳುಹಿಸಿದಲ್ಲಿ ಕೂಡಲೇ ತೆರವಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications