ಬೆಂಗಳೂರು ರೈಲ್ವೆ ಮಾಸಿಕ ಪಾಸು ದರ ತೀವ್ರ ಹೆಚ್ಚಳ
ಬೆಂಗಳೂರು, ಜೂನ್ 24: ಜುಲೈ 8ರಂದು ರೈಲ್ವೆ ಬಜೆಟ್ ಮಂಡಿಸುವ ಮುನ್ನ ರೈಲು ಪ್ರಯಾಣ ದರ ಏರಿಸಿ ಸಚಿವ ಡಿವಿ ಸದಾನಂದ ಗೌಡರು ಫಜೀತುಗಿಟ್ಟುಕೊಂಡಿದ್ದಾರೆ. ಪ್ರಯಾಣ ದರ ಏರಿಕೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದಿರುವ ಕೇಂದ್ರ ಸರಕಾರವು ಹೊಸ ದರಗಳು ಜೂನ್ 25ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಸ್ಪಷ್ಟಪಡಿಸಿದೆ.
ಈ ಹಿಂದೆಯೇ ರಿಸರ್ವೇಶನ್ ಆಗಿದ್ದರೂ ಅಥವಾ ಮಾಸಿಕ ಪಾಸುಗಳು ವಿತರಣೆಯಾಗಿದ್ದರೂ ಹೊಸ ದರಕ್ಕೆ ಅನ್ವಯವಾಗುವಂತೆ ವ್ಯತ್ಯಾಸ ಹಣವನ್ನು ಭರ್ತಿ ಮಾಡಬೇಕು ಎಂದೂ ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ. (ರೈಲ್ವೆ ಪ್ರಯಾಣ ದರ ಏರಿಕೆಗೆ ಅಸ್ತು: ಸದಾನಂದ ಗೌಡ)
ಈಗಾಗಲೇ ರೈಲು ಪ್ರಯಾಣ ದರ ಶೇ. 14.2ರಷ್ಟು ಏರಿಸಲಾಗಿದೆ. ಈ ಮಧ್ಯೆ, ರೈಲ್ವೆ ಮಾಸಿಕ ಪಾಸುಗಳ ದರವೂ ರೈಲಿಗಿಂತ ಹೆಚ್ಚು ವೇಗದಲ್ಲಿ ಏರಿಕೆಯಾಗಿದೆ. ಒಂದು ದಶಕದಿಂದ ಒಂದೇ ಗತಿಯಲ್ಲಿದ್ದ ರೈಲ್ವೆ ಮಾಸಿಕ ಪಾಸು ದರವನ್ನು ಈಗ ದಿಢೀರನೆ ಎರಡ್ಮೂರು ಪಟ್ಟು ಹೆಚ್ಚಿಸಿ, ದುಬಾರಿ ಮಾಡಲಾಗಿದೆ.
ರೈಲ್ವೆ ಮಾಸಿಕ ಪಾಸು ದರ ಏರಿಕೆ ಮಾಡಿ ದಶಕವೇ ಕಳೆದಿದೆ. ಈ ಮಧ್ಯೆ, ದೈನಂದಿನ ಪ್ರಯಾಣ ಟಿಕೆಟ್ ದರ ಕಾಲಕಾಲಕ್ಕೆ ಹೆಚ್ಚಾಗುತ್ತಿದ್ದರೂ ಮಾಸಿಕ ಪಾಸು ದರ ಏರಿಸಿರಲಿಲ್ಲ. ಹಲವು ವರ್ಷಗಳ ನಂತರ ದರ ಪರಿಷ್ಕರಣೆ ಆಗುತ್ತಿದೆ ಎಂದು ಸಮಜಾಯಿಷಿ ರೂಪದಲ್ಲಿ ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಮಾಸಿಕ ಪಾಸುಗಳ ಮೂಲಕ ಮೇಲ್, ಎಕ್ಸ್ ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಚಿಂತೆಗೀಡಾಗಿದ್ದಾರೆ.
ರೈಲ್ವೆ ಮಾಸಿಕ ಪಾಸು ದರ ಏರಿಕೆ ಪಟ್ಟಿ ಇಲ್ಲಿದೆ:

| ಎಲ್ಲಿಂದ | ಎಲ್ಲಿಗೆ | ಹಿಂದಿನ ದರ | ಹೊಸ ದರ |
| ಬೆಂಗಳೂರು | ತುಮಕೂರು | ರೂ 235 | 600 ರೂ. |
| ಬೆಂಗಳೂರು | ಬಂಗಾರುಪೇಟೆ | ರೂ 310 | 600 ರೂ. |
| ಬೆಂಗಳೂರು | ಮಂಡ್ಯ | ರೂ 310 | 750 ರೂ. |
| ಬೆಂಗಳೂರು | ಮೈಸೂರು | ರೂ 410 | 900 ರೂ. |
| ಬೆಂಗಳೂರು | ಚನ್ನಪಟ್ಟಣ | ರೂ 235 | 450 ರೂ. |
| ಬೆಂಗಳೂರು | ರಾಮನಗರ | ರೂ 160 | 450 ರೂ. |
| ಬೆಂಗಳೂರು | ಮದ್ದೂರು | ರೂ 310 | 600 ರೂ. |
| ಬೆಂಗಳೂರು | ಮಾಲೂರು | ರೂ 160 | 450 ರೂ. |
| ಬೆಂಗಳೂರು | ಹೊಸೂರು | ರೂ 235 | 450 ರೂ. |












Click it and Unblock the Notifications