ಬೆಂಗಳೂರಿನ ಸೂತ್ರ ಹಿಡಿದವರು ಮಂಡೂರಲ್ಲಿ ವಾಸ್ತವ್ಯ ಹೂಡಲಿ

ಬೆಂಗಳೂರು, ಜೂ. 7 : ವಿದೇಶ ಪ್ರಯಾಣ ಅಂದ ಕೂಡಲೆ ಮಿನಿಸ್ಟ್ರುಗಳ, ಅವರ ಹೆಂಡಂದಿರು ಮಕ್ಕಳ, ಚೇಲಾಗಳ, ಅಧಿಕಾರಿಗಳ ಸೂಟ್ ಕೇಸುಗಳು ರೆಡಿಯಾಗಿಬಿಡುತ್ತವೆ. ಸ್ಟಡಿನೂ ಇಲ್ಲ ಮಣ್ಣೂ ಇಲ್ಲ ತಮ್ಮ ದುಡ್ಡನ್ನು ಮಜಾ ಉಡಾಯಿಸಲು ಹೋಗುತ್ತಿದ್ದಾರೆ ಅಂತ ಟ್ಯಾಕ್ಸ್ ಕಟ್ಟಿದ ಜನರು ಬೊಂಬಡಾ ಬಜಾಯಿಸಿದರೂ ಅವರದು ಹಿತ್ತಾಳೆ ಕಿವಿಯಾಗಿರುತ್ತದೆ.

ಇಂಥವರನ್ನು, ಸ್ಟಡಿ ಟೂರ್ ಅಂದಾದರೂ ಕರೆಯಿರಿ, ಪಿಕ್ನಿಕ್ ಅಂದಾದರೂ ಕರೆಯಿರಿ ಮತ್ತೊಂದು ಪ್ರವಾಸಕ್ಕೆ ಸೂಟ್ ಕೇಸ್ ಸಮೇತ ದಬ್ಬುವ ಕಾಲ ಬಂದಿದೆ. ಅವರನ್ನು ಕಳಿಸಬೇಕಾಗಿರುವುದು ಬ್ರಜಿಲ್ಲಿಗೂ ಅಲ್ಲ, ಅಮೆರಿಕಕ್ಕೂ ಅಲ್ಲ, ಚೀನಾಕ್ಕೂ ಅಲ್ಲ, ಜಪಾನಿಗೂ ಅಲ್ಲ, ಆಸ್ಟ್ರೇಲಿಯಾಗೂ ಅಲ್ಲ... ಬೆಂಗಳೂರು ನಗರ ಜಿಲ್ಲೆಯಲ್ಲಿರುವ ದುರ್ವಾಸನಾಪುರ ಮಂಡೂರಿಗೆ!

ಬೆಂಗಳೂರನ್ನು ಆಳುತ್ತಿರುವ ಮೇಯರ್ ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಕಮಿಷನರ್ ಲಕ್ಷ್ಮೀನಾರಾಯಣ, ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ, ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮುಂತಾದವರು ಒಂದು ತಿಂಗಳ ಕಾಲ ಮಂಡೂರು ಊರಿನಲ್ಲಿ ಗ್ರಾಮವಾಸ್ತವ್ಯ ಹೂಡಲಿ. [ಪ್ರಾಣ ಕೊಟ್ಟೇವು, ಕಸ ಹಾಕಲು ಬಿಡೆವು]

Ministers get ready for Mandur village stay

ಅಲ್ಲಿಗೆ ಒಂದು ಬಾರಿ ಹೋಗಿ, ಒಂದು ತಿಂಗಳು ವಾಸ ಮಾಡಿ, ಅಲ್ಲಿನ ಗಾಳಿ, ನೀರು ಸೇವಿಸಿ, ಗುಂಯ್ ಗುಡುವ ಸೊಳ್ಳೆಗಳೊಂದಿಗೆ ಸಂವಾದ ನಡೆಸಿ, ಗ್ರಾಮಸ್ಥರೊಂದಿಗೆ ಸುದೀರ್ಘವಾದ ಪಟ್ಟಾಂಗ ಹೊಡೆದು, ಅಲ್ಲಿನ ಜನರ ನಾಡಿಮಿಡಿತವನ್ನು ಅರಿಯದಿದ್ದರೆ, ಅವರ ಹೊಟ್ಟೆಯಾಳದ ಮಾತುಗಳನ್ನು ಕೇಳದಿದ್ದರೆ ತ್ಯಾಜ್ಯ ವಿಲೇವಾರಿಯಂಥ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಇವರಿಗೆ ಸಾಧ್ಯವೇ ಇಲ್ಲ.

ಬೆಂಗಳೂರು ನಗರ ಜಿಲ್ಲೆಯ, ಬೆಂಗಳೂರು ಪೂರ್ವ ತಾಲೂಕ್ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಂಡೂರು ತಲುಪುವುದು ಇವರಿಗೆ ಗೊತ್ತಿಲ್ಲವಾದರೆ ದಾರಿ ಇಲ್ಲಿದೆ. ಬೆಂಗಳೂರು ತಿರುಪತಿ ರಸ್ತೆಯ ಬೂದಿಗೆರೆ ಕ್ರಾಸ್‌‌ನಲ್ಲಿ ಎಡಕ್ಕೆ ತಿರುಗಿ ಮೂರು ಕಿ.ಮೀ ಸಾಗಿದರೆ ಮಂಡೂರು ತ್ಯಾಜ್ಯ ವಿಲೇವಾರಿ ಘಟಕ ಕಾಣ ಸಿಗುತ್ತದೆ. ಹೋಗುವ ಮುನ್ನ ಸೊಳ್ಳೆ ಪರದೆ, ಮಾಸ್ಕಿಟೋ ಕಾಯ್ಲ್ ತಗೊಂಡು ಹೋಗುವುದು ಉತ್ತಮ.

ಮಂಡೂರಿನಲ್ಲಿ ಒಂದು ತಿಂಗಳು ಕಳೆಯುವುದು ಬೇಡ, ಇಪ್ಪತ್ನಾಲ್ಕು ಗಂಟ ವಾಸ್ತವ್ಯ ಹೂಡುವುದೂ ಬೇಡ, ಮಂಡೂರು ಗ್ರಾಮದಲ್ಲಿ, ತ್ಯಾಜ್ಯ ವಿಲೇವಾರಿ ಘಟಕದ ಬಳಿ ಒಂದೇ ಒಂದು ರಾತ್ರಿ ಮೇಲೆ ತಿಳಿಸಿರುವ ಎಲ್ಲರೂ ಒಟ್ಟಾಗಿ ಕಳೆದು ಬರಲಿ ಎಂದು, ಬೆಂಗಳೂರಿನ ನಾಗರಿಕರೊಬ್ಬರು ಇವರಿಗೆಲ್ಲ ಚಾಲೇಂಜ್ ಮಾಡಿದ್ದಾರೆ. ತಾಕತ್ ಇದ್ದರೆ ಇವರೆಲ್ಲರೂ ಈ ಸವಾಲನ್ನು ಸ್ವೀಕರಿಸಲಿ. ಇಲ್ಲದಿದ್ದರೆ, ರಾಜೀನಾಮೆ ಕೊಟ್ಟು ಮನೆ ದಾರಿ ಹಿಡಿಯಲಿ.

ಬೃಹದಾಕಾರವಾಗಿ ಬೆಳೆದು ನಿಂತಿರುವ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಇವರಿಗೆ ಕಿಂಚಿತ್ತಾದರೂ ಕಾಳಜಿ ಇದೆಯಾ? ಮನೆಯಲ್ಲಿಯೇ ತ್ಯಾಜ್ಯ ವಿಂಗಡನೆ ಸರಿಯಾಗುತ್ತಿಲ್ಲ ಎಂದು ಜನರನ್ನೇ ದೂರುವ ಬದಲು ವೈಜ್ಞಾನಿಕವಾಗಿ ಪರಿಹಾರವನ್ನು ಕಂಡುಹಿಡಿಯಲು ಇವರಿಗೇಕೆ ಸಾಧ್ಯವಾಗುತ್ತಿಲ್ಲ? [ಮಂಡೂರು ಕ್ಷೇತ್ರದ ಡಂಪಿಂಗ್ ಸ್ವಾಮಿ ಮಹಾತ್ಮೆ]

ತ್ಯಾಜ್ಯ ಡಂಪ್ ಮಾಡುತ್ತಿರುವುದನ್ನು ಮಂಡೂರು ಗ್ರಾಮಸ್ಥರು ಪ್ರತಿಭಟಿಸುತ್ತಿರುವುದು ಸಮಸ್ಯೆಯ ಒಂದು ಮುಖವಾದರೆ, ಬೆಂಗಳೂರಿನಲ್ಲಿ ಕಸ ಎತ್ತಿ ಹಾಕುವ ಕಾರ್ಮಿಕರಿಗೆ ಸಂಬಳ ಸರಿಯಾಗಿ ನೀಡುತ್ತಿಲ್ಲ ಎನ್ನುವುದು ಮತ್ತೊಂದು ಮುಖ. ಹೀಗಾಗಿ ಕಸ ವಿಂಗಡನೆಯಾಗಲಿ, ತ್ಯಾಜ್ಯವನ್ನು ಸರಿಯಾಗಿ ಸಾಗಿಸುವುದಾಗಲಿ ಸಾಧ್ಯವಾಗುತ್ತಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿಯೇ ಕಸ ವಿಂಗಡನೆ ಮಾಡುವುದೇ ಹೇಗೆ ಎಂದು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಬಿಬಿಎಂಪಿ ಮುಂದಾಗಲಿ. ಪ್ರತಿ ವಾರ್ಡುಗಳಲ್ಲಿಯೂ ತಜ್ಞರ ಸಲಹೆಯ ಪ್ರಕಾರ ಜಾಥಾ ನಡೆಸಲಿ. ನಮ್ಮ ಜನರೂ ಅಷ್ಟೇ. ತಲೆಯ ಮೇಲೆ ಕುಳಿತುಕೊಳ್ಳದಿದ್ದರೆ, ಒಣ ಮತ್ತು ಹಸಿ ತ್ಯಾಜ್ಯಗಳನ್ನು ಒಟ್ಟಿಗೆ ಪ್ಲಾಸ್ಟಿಕ್ ಕವರಿನಲ್ಲಿ ಸೇರಿಸಿ, ಫುಟ್ ಪಾತ್ ಮೇಲೆ ಬಿಸಾಡಿ ಬರುವುದನ್ನು ಬಿಡುವುದಿಲ್ಲ.

ಮಂಡೂರಿನಲ್ಲಿ ತ್ಯಾಜ್ಯ ಹಾಕಲು ಬಿಡುತ್ತಿಲ್ಲವೆಂದು ಕಂಡಕಂಡಲ್ಲಿ ತ್ಯಾಜ್ಯವನ್ನು ಬಿಸಾಕುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇನ್ನು ಮಳೆಗಾಲ ಕೂಡ ಆರಂಭವಾಗಿರುವುದರಿಂದ ಕಸ ಸರಿಯಾಗಿ ವಿಲೇವಾರಿಯಾಗದಿದ್ದರೆ ರೋಗರುಜಿನಗಳ ಕಾಟ ತಪ್ಪಿದ್ದಲ್ಲ. ಮಂಡೂರು ಬಿಟ್ಟು ಬೇರೆ ಕಡೆ ಕಸ ವಿಲೇವಾರಿ ಘಟಕ ಸ್ಥಾಪಿಸಿದರೂ ಈ ಸಮಸ್ಯೆ ತಪ್ಪಿದ್ದಲ್ಲ.

ಬೆಂಗಳೂರಿನ ನಾಲ್ವರು ಸಂಸದರಾದ ಅನಂತ್ ಕುಮಾರ್ (ಬೆಂಗಳೂರು ದಕ್ಷಿಣ), ಸದಾನಂದ ಗೌಡ (ಬೆಂಗಳೂರು ಉತ್ತರ), ಡಿಕೆ ಸುರೇಶ್ (ಬೆಂಗಳೂರು ಗ್ರಾಮಾಂತರ) ಮತ್ತು ಪಿಸಿ ಮೋಹನ್ (ಬೆಂಗಳೂರು ಕೇಂದ್ರ) ಈ ಸಮಸ್ಯೆಯ ವಾಸನೆಯನ್ನು ಕೇಂದ್ರಕ್ಕೂ ತಲುಪಿಸಲಿ. ಪ್ರಧಾನಿ ನರೇಂದ್ರ ಮೋದಿಯವರ ಕಿವಿಗೂ ಮಂಡೂರು ಗ್ರಾಮಸ್ಥರ ಆರ್ತನಾದ ಬೀಳಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+