ಬೆಂಗಳೂರಿಗೆ ಮಾತಾ ಅಮೃತಾನಂದಮಯಿ, ದಿವ್ಯ ದರ್ಶನ, ಸತ್ಸಂಗ
ಬೆಂಗಳೂರು: ಕರುಣೆ, ಪ್ರೀತಿ, ನಿಸ್ವಾರ್ಥ ಸೇವೆ ಹಾಗೂ ಆಧ್ಯಾತ್ಮಿಕ ಜಾಗೃತಿ ಸಂದೇಶವನ್ನು ವಿಶ್ವಾದ್ಯಂತ ಸಾರುತ್ತಿರುವ ಜಗನ್ಮಾತೆ ಮಾತಾ ಅಮೃತಾನಂದಮಯಿ ದೇವಿ (Mata Amritanandamayi) ನವೆಂಬರ್ 6 ಮತ್ತು 7ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಭಕ್ತರಿಗೆ ಅಮ್ಮನ ದಿವ್ಯ ದರ್ಶನ ಪಡೆಯುವ ಸುವರ್ಣಾವಕಾಶ ದೊರೆಯಲಿದ್ದು, ಸತ್ಸಂಗ, ಭಜನೆ ಮತ್ತು ಧ್ಯಾನದ ಮೂಲಕ ಆಧ್ಯಾತ್ಮಿಕ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು.
ಬೆಂಗಳೂರಿನ ಜ್ಞಾನಭಾರತಿ, ಉಳ್ಳಾಲದಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ಎರಡು ದಿನಗಳ ಕಾಲ ಈ ಕಾರ್ಯಕ್ರಮಗಳು ನಡೆಯಲಿವೆ. ಅಮ್ಮನ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಆಧ್ಯಾತ್ಮಿಕ ಚಿಂತನೆ, ಮನಸ್ಸಿನ ನೆಮ್ಮದಿ ಮತ್ತು ಮಾನಸಿಕ ಶಾಂತಿ ಪಡೆಯಬಹುದು.

ನವೆಂಬರ್ 6ರಂದು ಕಾರ್ಯಕ್ರಮದ ಉದ್ಘಾಟನೆ
ನವೆಂಬರ್ 6, 2026ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ (dk shivakumar) ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗೌರವಾನ್ವಿತ ಅತಿಥಿಯಾಗಿ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕಾರ್ಮಿಕ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಹಾಗೂ ವಿಶೇಷ ಆಹ್ವಾನಿತರಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಟಿ. ಸೋಮಶೇಖರ್ ಅವರು ಉಪಸ್ಥಿತರಿರಲಿದ್ದಾರೆ.
ಪ್ರೀತಿ, ಕರುಣೆ ಮತ್ತು ಮಾನವೀಯತೆಯ ಸಂದೇಶ
ಪ್ರೀತಿ ಮತ್ತು ಕರುಣೆಯ ಸಾಕಾರ ರೂಪವಾಗಿ ಜಗತ್ತಿನಾದ್ಯಂತ ಕೋಟ್ಯಂತರ ಜನರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿರುವ ಮಾತಾ ಅಮೃತಾನಂದಮಯಿ ದೇವಿಯವರು ತಮ್ಮ ಆಧ್ಯಾತ್ಮಿಕ ಸಂದೇಶಗಳ ಮೂಲಕ ಮಾನವೀಯತೆ, ಶಾಂತಿ, ಸಾಮರಸ್ಯ ಮತ್ತು ನಿಸ್ವಾರ್ಥ ಸೇವೆಯ ಮಹತ್ವವನ್ನು ಸಾರುತ್ತಿದ್ದಾರೆ. ಜಾತಿ, ಧರ್ಮ, ಭಾಷೆ ಮತ್ತು ದೇಶಗಳ ಗಡಿಗಳನ್ನು ಮೀರಿ ಎಲ್ಲರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳುವ ಅಮ್ಮನ ಸಂದೇಶವು ವಿಶ್ವದಾದ್ಯಂತ ಜನರನ್ನು ಆಕರ್ಷಿಸಿದೆ.
ಅಮ್ಮನ ಜೀವನ ಮತ್ತು ಸೇವಾ ಕಾರ್ಯಗಳು ಕೇವಲ ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಸೀಮಿತವಾಗಿಲ್ಲ. ಸಮಾಜದಲ್ಲಿ ಪ್ರೀತಿ, ಸಹಾನುಭೂತಿ ಮತ್ತು ಪರಸ್ಪರ ಸಹಕಾರದ ಮನೋಭಾವ ಬೆಳೆಸುವಲ್ಲಿಯೂ ಅವರ ಸಂದೇಶಗಳು ಮಹತ್ವದ ಪಾತ್ರ ವಹಿಸುತ್ತಿವೆ. ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವುದು, ಇತರರ ನೋವನ್ನು ಅರ್ಥಮಾಡಿಕೊಳ್ಳುವುದು ಮತ್ತು ನಿಸ್ವಾರ್ಥವಾಗಿ ಸೇವೆ ಸಲ್ಲಿಸುವುದು ಜೀವನದ ಪ್ರಮುಖ ಮೌಲ್ಯಗಳೆಂದು ಅಮ್ಮ ತಮ್ಮ ಉಪದೇಶಗಳ ಮೂಲಕ ತಿಳಿಸುತ್ತಿದ್ದಾರೆ.
ಸತ್ಸಂಗ, ಭಜನೆ ಮತ್ತು ಧ್ಯಾನದ ಮೂಲಕ ಆಂತರಿಕ ಶಾಂತಿ
ಅಮ್ಮನ ಸತ್ಸಂಗ ಮತ್ತು ಅಮೃತವಾಣಿಗಳು ಜೀವನದಲ್ಲಿ ಸಕಾರಾತ್ಮಕ ಚಿಂತನೆ, ಶಾಂತಿ ( peace) ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಬೆಳೆಸಲು ಪ್ರೇರೇಪಿಸಲಿದೆ. ದೈನಂದಿನ ಜೀವನದ ಒತ್ತಡ, ಆತಂಕ ಮತ್ತು ಗೊಂದಲಗಳ ನಡುವೆ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಅಮ್ಮನ ಆಧ್ಯಾತ್ಮಿಕ ಚಿಂತನೆಗಳು ಸಹಕಾರಿಯಾಗುತ್ತವೆ. ಭಜನೆ ಮತ್ತು ಧ್ಯಾನದ ಮೂಲಕ ಆಂತರಿಕ ಶಾಂತಿಯನ್ನು ಅನುಭವಿಸುವ ಅವಕಾಶವೂ ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಅಮ್ಮನ ದಿವ್ಯ ದರ್ಶನದ ಜೊತೆಗೆ ಸತ್ಸಂಗದಲ್ಲಿ ಭಾಗವಹಿಸುವ ಮೂಲಕ ಭಕ್ತರು ಜೀವನದ ಮೌಲ್ಯಗಳನ್ನು ಅರಿತುಕೊಳ್ಳಲು ಮತ್ತು ಆಧ್ಯಾತ್ಮಿಕ ಚಿಂತನೆ ನೆರವು ನೀಡಲಿದೆ.
Mata Amritanandamayi : ಕಾರ್ಯಕ್ರಮದ ವಿವರಗಳು:
ದಿನಾಂಕ: ನವೆಂಬರ್ 6 ಮತ್ತು 7, 2026
ಸ್ಥಳ: ಮಾತಾ ಅಮೃತಾನಂದಮಯಿ ಮಠ, ಜ್ಞಾನಭಾರತಿ, ಉಳ್ಳಾಲ, ಬೆಂಗಳೂರು
ಕಾರ್ಯಕ್ರಮಗಳು: ದಿವ್ಯ ದರ್ಶನ, ಸತ್ಸಂಗ, ಭಜನೆ ಮತ್ತು ಧ್ಯಾನ
ಉದ್ಘಾಟನೆ: ನವೆಂಬರ್ 6ರಂದು ಬೆಳಿಗ್ಗೆ 11 ಗಂಟೆಗೆ
ಅಮ್ಮನ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಲಿದ್ದು, ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮ್ಮನ ದಿವ್ಯ ಸಾನ್ನಿಧ್ಯವನ್ನು ಅನುಭವಿಸಬಹುದು. ಪ್ರೀತಿ, ಕರುಣೆ ಮತ್ತು ನಿಸ್ವಾರ್ಥ ಸೇವೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಎರಡು ದಿನಗಳ ಆಧ್ಯಾತ್ಮಿಕ ಕಾರ್ಯಕ್ರಮವು ಪ್ರೇರೇಪಿಸಲಿದೆ.


Click it and Unblock the Notifications
