ಫ್ರೀಯಾಗಿ ನೋಡ್ ಬನ್ನಿ.. ಬೆಂಗಳೂರಿನ 'ಮಾನ್ಯತಾ ಟೆಕ್ ಫಾಲ್ಸ್'
ವರುಣನ ಆರ್ಭಟದಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಸ್ವರೂಪವೇ ಬದಲಾಗಿದೆ. ರಸ್ತೆಗಳಲ್ಲಿ ನದಿಗಳಂತೆ ನೀರು ಹರಿದಿದೆ. ಮಳೆಯ ಸಿಂಚನದಿಂದ ಇಡೀ ಐಟಿ ಸಿಟಿ ತಣ್ಣಗಾಗಿದೆ. ಇದೇ ವೇಳೆ ಮಳೆಯಿಂದ ಬೆಂಗಳೂರಿಗೆ ಜಲಪಾತದ ಭಾಗ್ಯವೂ ಸಿಕ್ಕಿದೆ.
ದೇಶದ ಪ್ರಮುಖ ಐಟಿ ಕಂಪನಿಗಳಿಗೆ ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್ ಸದ್ಯ ಮಾನ್ಯತಾ ವಾಟರ್ ಫಾಲ್ಸ್ ಹೆಸರಿನಲ್ಲಿ ಫೇಮಸ್ ಆಗುತ್ತಿದೆ. ಅರೇ...ಟೆಕ್‌ಪಾರ್ಕ್ ಅಲ್ಲಿ ಜಲಪಾತನಾ ಎಂದು ಗಾಬರಿ ಆಗೋದು ಪಕ್ಕಾ. ಏಕೆಂದರೆ, ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ದೊಡ್ಡ ಜಲಪಾತವೊಂದು ನಿಜವಾಗಿಯೂ ಹುಟ್ಟಿಕೊಂಡಿದೆ.

ಭಾರಿ ಮಳೆಯಿಂದ ರಸ್ತೆಗಳಲ್ಲಿ ಮಾತ್ರ ನೀರು ಹರಿಯುತ್ತಿಲ್ಲ. ಈ ಟೆಕ್‌ಪಾರ್ಕ್ ಬಳಿಯ ದೊಡ್ಡ ಜಲಪಾತದ ಮಾದರಿಯಲ್ಲಿ ನೀರು ಧುಮ್ಮಿಕ್ಕಿ ಹರಿದಿದೆ. ಇದನ್ನು ಅಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲ ಟೆಕ್ಕಿಗಳು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
New Destination Sight Seeing - Manyata Tech Falls. pic.twitter.com/bJNPaooe63
— Living Temples Of Bharat (@Saigeet36566874) October 15, 2024
ಇಷ್ಟೇ ಆಗಿದ್ದು ನೋಡಿ...ನೆಟ್ಟಿಗರೆಲ್ಲರೂ ಬೆಂಗಳೂರಿನಲ್ಲಿ ಯಾವುದಪ್ಪಾ ಜಲಪಾತ? ಎಂದು ತಲೆಕೆಡಿಸಿಕೊಂಡು ಗೂಗಲ್ ಸರ್ಚ್ ಕೂಡ ಮಾಡಿದ್ದಾರೆ. ಕೊನೆಗೆ ಇದು ಮಾನ್ಯತಾ ಟೆಕ್‌ಪಾರ್ಕ್ ಬಳಿ ಸೃಷ್ಟಿಯಾಗಿರುವ ಜಲಪಾತ ಎಂದು ತಿಳಿದ ಮೇಲೆ, ಇದಕ್ಕೆ ಯಾಕೆ ಒಂದೊಳ್ಳೆ ಹೆಸರು ಕೊಡಬಾರದು? ಎಂದು ಯೋಚನೆಯೂ ಮಾಡಿದ್ದಾರೆ.
ಕೊನೆಗೆ ಮಾನ್ಯತಾ ಟೆಕ್‌ಪಾರ್ಕ್ ಬಳಿಯೇ ಇರುವುದರಿಂದ ಇದನ್ನು 'ಮಾನ್ಯತಾ ವಾಟರ್ ಫಾಲ್ಸ್' ಎಂದು ಕರೆಯುವುದೇ ಸೂಕ್ತ ಎಂದು ಹ್ಯಾಶ್‌ಟ್ಯಾಗ್ ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ. ಈ ವಿಡಿಯೋ ಮಾನ್ಯತಾ ವಾಟರ್ ಫಾಲ್ಸ್ ಹೆಸರಿನಲ್ಲೇ ಈಗಲೂ ವೈರಲ್ ಆಗುತ್ತಿದೆ.

'ಈ ವೀಕೆಂಡ್‌ಗೆ ಜೋಗ್ ಫಾಲ್ಸ್ ಅಥವಾ ಮಲೆನಾಡಿನ ಭಾಗದಲ್ಲಿ ಹರಿಯೋ ಫಾಲ್ಸ್‌ಗೆ ಹೋಗಬೇಕು ಅಂತ ಪ್ಲಾನ್ ಮಾಡಿದ್ದೆ. ಪುಣ್ಯಕ್ಕೆ ಬೆಂಗಳೂರಲ್ಲೇ ಒಂದು ರೂಪಾಯಿ ಖರ್ಚಿಲ್ಲದೆ, ಒಂದೇ ಒಂದು ಮಳೆ ಜಲಪಾತವನ್ನು ಕಣ್ಣಮುಂದೆ ತಂದಿದೆ' ಎಂದು ಹಲವರು ಹಾಸ್ಯವಾಗಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
'ಹೌದು ಫಾಲ್ಸ್ ನೋಡಬೇಕು ಅಂದ್ರೆ ಬೆಂಗಳೂರನ್ನೇ ಬಿಟ್ಟು ದೂರ ಹೋಗಬೇಕಿತ್ತು. ಈಗ ಬೆಂಗಳೂರಿನಲ್ಲೇ ಒಂದು ಫಾಲ್ಸ್ ಹುಟ್ಟಿಕೊಂಡಿರುವುದು ಸಖತ್ ಕ್ರೇಜಿ' ಎಂದು ಖುಷ್ ಆಗಿದ್ದಾರೆ. ಇನ್ನು ಕೆಲವರು 'ಈ ಫಾಲ್ಸ್ ನೋಡ್ಕೊಂಡು ಬರೋಣ ಬನ್ರೋ..' ಎಂದು ತಮ್ಮ ಗ್ಯಾಂಗ್‌ಗಳನ್ನು ಟ್ಯಾಗ್ ಮಾಡಿದ್ದಾರೆ.
ಕೆಲವರು 'ಯಾರ್ ಬರ್ತೀರಿ ಬೆಂಗಳೂರಿನ ಫಾಲ್ಸ್ ನೋಡೋಕೆ? ಎಂದು ಕೇಳಿದ್ದಾರೆ. ಬರೋದಾದ್ರೆ ಮ್ಯಾಪ್ ಶೇರ್ ಮಾಡ್ತೀನಿ, ಸೀದಾ ಮಾನ್ಯತಾ ಟೆಕ್‌ಪಾರ್ಕ್ ಬಳಿ ಬಂದು ಇಳ್ಕೊಳಿ ಸಿಗೋಣ..' ಎಂದೆಲ್ಲ ಫನ್ನಿಯಾಗಿ ಎಂಜಾಯ್ ಮಾಡಿದ್ದಾರೆ. ಮಳೆಯಿಂದ ಮನೆಗಳಲ್ಲೇ ಕುಳಿತಿರುವ ಪ್ರೇಮಿಗಳು ಕೂಡ, 'ಬಾ...ಚಿನ್ನ ನಿನಗೊಂದು ವಾಟರ್‌ಫಾಲ್ ತೋರಿಸ್ತೀನಿ. ಹೀಗೋಗಿ ಹಾಗೆ ಬರೋಣ' ಎಂದೆಲ್ಲ ತಮ್ಮ ಗರ್ಲ್‌ಫ್ರೆಂಡ್‌ಗಳಿಗೆ ಆಹ್ವಾನ ಕೂಡ ಕೊಡುತ್ತಿದ್ದಾರೆ.

ಮಳೆಯಿಂದ ಅಯ್ಯೋ ಆ ಅವಾಂತರ ಆಯ್ತು, ಇಲ್ಲಿ ಹೀಗಾಯ್ತು ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿತ್ತು. ಇದರ ನಡುವೆ ಮಾನ್ಯತಾ ಟೆಕ್‌ಪಾರ್ಕ್ ಬಳಿ ಜಲಪಾತದಂತೆ ಹರಿದಿರುವ ನೀರು ಹಲವು ಜನರ ಮನಸ್ಸಿಗೆ ಒಳ್ಳೆಯ ಫೀಲ್ ಕೊಟ್ಟಿರೋದಂತೂ ನಿಜ.












Click it and Unblock the Notifications