ಸಂಪಿಗೆ ರಸ್ತೆ-ಪೀಣ್ಯ ಸಂಚಾರ ಕೇವಲ 18 ನಿಮಿಷದಲ್ಲಿ!
ಬೆಂಗಳೂರು, ಫೆ.25 : ಸಂಪಿಗೆ ರಸ್ತೆಯಿಂದ ಪೀಣ್ಯದವರೆಗಿನ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಮಾರ್ಚ್ 1ರಿಂದ ಸಂಚರಿಸಲಿದೆ. ಫೆ.28ರಂದು ಸಿಎಂ ಸಿದ್ದರಾಮಯ್ಯ ಮಾರ್ಗವನ್ನು ಉದ್ಘಾಟಿಸಲಿದ್ದು, ಮಾರ್ಚ್ 1ರಿಂದ ಸಂಚಾರ ಆರಂಭವಾಗಲಿದೆ. ಪೀಣ್ಯ-ಸಂಪಿಗೆ ರಸ್ತೆ ನಡುವಿನ ಪ್ರಯಾಣದರ 23ರೂ. ಎಂದು ನಿಗದಿಪಡಿಸಲಾಗಿದ್ದು, ಕೇವಲ 18 ನಿಮಿಷಗಳಲ್ಲಿ ಪೀಣ್ಯಕ್ಕೆ ತಲುಪಬಹುದಾಗಿದೆ.
ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಂಪಿಗೆ ರಸ್ತೆ-ಪೀಣ್ಯ ನಡುವಿನ ಮಾರ್ಗವನ್ನು ಸಿಎಂ ಸಿದ್ದರಾಮಯ್ಯ ಫೆ.28ರಂದು ಸಂಜೆ 6 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಉದ್ಘಾಟಿಸಲಿದ್ದು, ಮಾರ್ಚ್ 1ರಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಮಾಹಿತಿ ನೀಡಿದರು.
ಅಂದಿನ ಸಮಾರಂಭದಲ್ಲಿಯೇ 26,405 ಕೋಟಿ ರೂ. ವೆಚ್ಚದ ಮೆಟ್ರೋ 2ನೇ ಹಂತದ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಾಗುತ್ತಿದ್ದು, 2ನೇ ಹಂತದ ಯೋಜನೆ ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು. [ಮಾರ್ಚ್ 1ರಿಂದ ಸಂಪಿಗೆ ರಸ್ತೆ-ಪೀಣ್ಯ ನಡುವೆ ಮೆಟ್ರೋದಲ್ಲಿ ಸಂಚರಿಸಿ]
ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ಸಚಿವರಾದ ಎಂ ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡೀಸ್, ಕೆ ರೆಹಮಾನ್ ಖಾನ್, ಕೆಎಚ್ ಮುನಿಯಪ್ಪ, ರಾಜ್ಯದ ಸಚಿವರು, ಶಾಸಕರು, ಮೇಯರ್ ಹಾಗೂ ಪಾಲಿಕೆ ಸದಸ್ಯರು ಆಗಮಿಸಲಿದ್ದಾರೆ. ಕೇಂದ್ರ ಸಚಿವರಿಗೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

18 ನಿಮಿಷಗಳಲ್ಲಿ ಪೀಣ್ಯಕ್ಕೆ
ಸಂಪಿಗೆ ರಸ್ತೆ-ಪೀಣ್ಯ (ರೀಚ್ 3 ಮತ್ತು 3ಎ) ನಡುವಿನ 9.9 ಕಿ.ಮೀ ಉದ್ದದ 'ಹಸಿರು' ಮಾರ್ಗದಲ್ಲಿ ನಮ್ಮ ಮೆಟ್ರೊ ರೈಲು ಮಾ.1ರಿಂದ ಸಂಚರಿಸಲಿದ್ದು, ಸಂಪಿಗೆ ರಸ್ತೆಯಿಂದ ಪೀಣ್ಯಕ್ಕೆ ಕೇವಲ 18 ನಿಮಿಷಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ಈ ಮಾರ್ಗ ನಾಗಸಂದ್ರದವರೆಗೆ ವಿಸ್ತರಣೆಯಾಗಲಿದ್ದು, ಮೂರು ಕಿ.ಮೀ. ಉದ್ದದ ವಿಸ್ತರಣಾ ಮಾರ್ಗವು 3-4 ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ನಮ್ಮ ಮೆಟ್ರೋ ದರವೆಷ್ಟು?
ಸಂಪಿಗೆ ರಸ್ತೆ-ಪೀಣ್ಯ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ವೋಲ್ವೊ ದರ 45 ರೂ ಮತ್ತು ಮಾರ್ಕೋ ಪೋಲೊ ದರ 25 ರೂ. ಮತ್ತು ಸಾಮಾನ್ಯ ಬಸ್ ಟಿಕೆಟ್ ದರ 16 ರೂ. ಇದೆ. ಈ ಮಾರ್ಗದಲ್ಲಿ ಸಂಚರಿಸುವ ಮೆಟ್ರೊ ಪ್ರಯಾಣದರವನ್ನು 23 ರೂ ಎಂದು ನಿಗದಿಪಡಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಪಡೆಯುವವರಿಗೆ ಪ್ರಯಾಣ ದರದಲ್ಲಿ ಶೇ.15ರಷ್ಟು ರಿಯಾಯಿತಿ ದೊರೆಯಲಿದ್ದು, 19.50 ರೂ.ದರ ನಿಗದಿಗೊಳಿಸಲಾಗಿದೆ. ಟೋಕನ್ ಪಡೆದು ಪ್ರಯಾಣಿಸುವವರು, 23 ರೂ. ದರ ಪಾವತಿ ಮಾಡಬೇಕಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ.

10 ನಿಮಿಷಕ್ಕೊಂದು ರೈಲು
ಸಂಪಿಗೆ ರಸ್ತೆ-ಪೀಣ್ಯ ಸದ್ಯ 75 ಮೀಟರ್ ಉದ್ದದ ಮೂರು ಕೋಚ್‌ಗಳ ರೈಲು ಸಂಚರಿಸಲಿದೆ. ಈ ರೈಲಿನಲ್ಲಿ ಒಟ್ಟು 975 ಒಟ್ಟಿಗೆ ಪ್ರಯಾಣಿಸಬಹುದಾಗಿದೆ. ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಸಂಚರಿಸಲಿದ್ದು, ಪ್ರತಿ ನಿಲ್ದಾಣದಲ್ಲಿ 30 ಸೆಕೆಂಡ್ ನಿಲುಗಡೆ ಮಾಡಲಾಗುತ್ತದೆ. ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಸಂಚಾರ ಸೇವೆ ಲಭ್ಯವಿದ್ದು, ರಾತ್ರಿ 10ರ ನಂತರವೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿದ್ದಲ್ಲಿ 10-30ರಿಂದ 11ರವರೆಗೆ ಸಂಚಾರ ಸೇವೆ ವಿಸ್ತರಿಸಲು ಚಿಂತಿಸಲಾಗಿದೆ.

10 ನಿಲ್ದಾಣಗಳು
ಪೀಣ್ಯ-ಸಂಪಿಗೆ ರಸ್ತೆ ಮಾರ್ಗದಲ್ಲಿ 10 ನಿಲ್ದಾಣಗಳು ಇವೆ. ಸಂಪಿಗೆ ರಸ್ತೆ, ಮಲ್ಲೇಶ್ವರಂ, ಕುವೆಂಪು ರಸ್ತೆ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಸಾಬೂನು ಕಾರ್ಖಾನೆ, ಯಶವಂತಪುರ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ ನಿಲ್ದಾಣಗಳು ಬರಲಿವೆ. ಇವುಗಳಲ್ಲಿ 6 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದವುಗಳ ಕಾಮಗಾರಿ ಶೇ 95ರಷ್ಟಾಗಿದೆ.

ಬಸ್ ಸೌಲಭ್ಯ
ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮೆಜೆಸ್ಟಿಕ್ (ಕೆಂಪೇಗೌಡ ಬಸ್ ನಿಲ್ದಾಣ)ದಿಂದ ಸಂಪಿಗೆ ರಸ್ತೆಗೆ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಅದೇ ರೀತಿ ಮೆಟ್ರೊ ನಿಲ್ದಾಣಗಳಿಗೆ ಫೀಡರ್ ಬಸ್ ಸೇವೆ ಆರಂಭಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಬಿಬಿಎಂಪಿ ಸಹಯೋಗದಲ್ಲಿ ನಿಲ್ದಾಣಗಳ ಸಮೀಪ ದ್ವಿಚಕ್ರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.












Click it and Unblock the Notifications