ಮರದ ಬುಡದಲ್ಲಿ ಡ್ರಗ್ ಬಚ್ಚಿಟ್ಟು ವಾಟ್ಸಪ್ ಲೊಕೇಷನ್ ಕಳುಹಿಸಿ ಡೀಲಿಂಗ್!
ಬೆಂಗಳೂರು, ಡಿ. 10: ರಾಜಧಾನಿಯಲ್ಲಿ ಡ್ರಗ್ ಪೆಡ್ಲರ್‌ಗಳು ಪೊಲೀಸರಿಗಿಂತಲೂ ಬುದ್ಧಿವಂತರಾಗಿದ್ದಾರೆ. ಪೊಲೀಸರ ಡ್ರಗ್ ವಿರುದ್ಧದ ಕಾರ್ಯಾಚರಣೆಯಿಂದ ಬೇಸತ್ತಿರುವ ಡ್ರಗ್ ಪೆಡ್ಲರ್‌ಗಳು ಇದೀಗ ಡ್ರಗ್ ಸಾಗಣೆಗೆ ಹೊಸ ಮಾರ್ಗ ಕಂಡು ಕೊಂಡಿದ್ದಾರೆ. ಈ ಮೊದಲು ಡುಂಜೋ, ಸ್ವಿಗ್ಗಿ ಮೂಲಕ ಮನೆ ಬಾಗಿಲಿಗೆ ಡ್ರಗ್ ತಲುಪಿಸುತ್ತಿದ್ದ ಖತರ್‌ನಾಕ್ ಡ್ರಗ್ ಪೆಡ್ಲರ್‌ಗಳು ಇದೀಗ ಹೊಸ ತಂತ್ರಜ್ಞಾನ ಆಧರಿಸಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಾರೆ. ಈ ಹೊಸ ರೀತಿಯ ಡ್ರಗ್ ಪೆಡ್ಲಿಂಗ್ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಹೌದು, ರಾಜಧಾನಿಯಲ್ಲಿ ಮಾದಕ ನಶೆಯ ಅಸಲಿ ಚಿತ್ರಣವನ್ನು ಲಾಕ್‌ಡೌನ್ ಸಮಯದಲ್ಲಿ ಸಿಸಿಬಿ ಪೊಲೀಸರು ಅನಾವರಣಗೊಳಿಸಿದ್ದರು. ಅಂಕಿತಾ ಎಂಬ ಡ್ರಗ್ ಪೆಡ್ಲರ್ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆ ನಡೆಸಿದಾಗ ಸ್ಯಾಂಡಲ್‌ವುಡ್ ತಾರೆಯರೇ ಮಾದಕ ಜಾಲದ ಬಲೆಗೆ ಸಿಕ್ಕಿಬಿದ್ದಿದ್ದರು. ಉದ್ಯಮಿಗಳು, ರಾಜಕಾರಣಿಗಳ ಪುತ್ರರು ಜೈಲಿಗೆ ಹೋದರು. ಅಂದು ಆರಂಭಗೊಂಡ ಡ್ರಗ್ ವಿರುದ್ಧ ಬೆಂಗಳೂರು ಪೊಲೀಸರ ಸಮರ ಇನ್ನೂ ತಣ್ಣಗೆ ಆಗಿಲ್ಲ. ಪೊಲೀಸರ ಸತತ ಕಾರ್ಯಾಚರಣೆಯಿಂದ ತಲೆ ಕೆಡಿಸಿಕೊಂಡಿರುವ ಡ್ರಗ್ ಪೆಡ್ಲರ್‌ಗಳು ಇದೀಗ ಪೊಲೀಸರ ಕೈಗೆ ಸಿಗದಂತೆ ಡ್ರಗ್ ಪೆಡ್ಲಿಂಗ್ ಮಾಡುವ ಹೊಸ ಹಾದಿ "ವಾಟ್ಸಪ್ ಲೊಕೇಷನ್' ಸ್ಕೀಮ್ ಕಂಡುಕೊಂಡಿದ್ದಾರೆ.
ವಾಟ್ಸಪ್ ಲೊಕೇಷನ್‌ನಿಂದ ಡ್ರಗ್ ಡೀಲ್: ಈ ಮೊದಲು ಡ್ರಗ್‌ನ್ನು ಕೋಡ್ ವರ್ಡ್‌ನಿಂದ ವ್ಯಾಪಾರ ಕುದುರಿಸುತ್ತಿದ್ದರು. ಹಣ ಪಾವತಿಸಿದ ಬಳಿಕ ಗ್ರಾಹಕರಿಗೆ ಡ್ರಗ್ ಪೆಡ್ಲರ್‌ಗಳು ಬೈಕ್ ಮೂಲಕವೇ ಹೋಗಿ ಭೇಟಿ ಮಾಡಿ ತಲುಪಿಸುತ್ತಿದ್ದರು. ಇನ್ನೂ ಕೆಲವು ಪ್ರಕರಣದಲ್ಲಿ ಪೋಸ್ಟ್ ಮೂಲಕ, ಕೊರಿಯರ್ ಮೂಲಕ ರವಾನೆ ಮಾಡುತ್ತಿದ್ದರು. ಯಾವಾಗ ಸ್ವಿಗ್ಗಿ, ಜೊಮಾಟೋ ಬಂತೋ ಫುಡ್ ಡೆಲಿವರಿ ಹೆಸರಿನಲ್ಲಿ ಡ್ರಗ್ ಸಪ್ಲೇ ಮಾಡುತ್ತಿದ್ದರು. ಮಾದಕ ವಸ್ತು ಸಾಗಣೆಯ ಎಲ್ಲಾ ಕಳ್ಳಾಟಗಳು ಪೊಲೀಸರ ತನಿಖೆಯಲ್ಲಿ ಬಯಲಾಗಿ ಹೋಯಿತು. ಡ್ರಗ್ ಪೆಡ್ಲರ್ ಹಾದಿ ಬಗ್ಗೆ ಪೊಲೀಸರ ನಿಗಾ ಇಡಲು ಶುರು ಮಾಡಿದರು. ಇದರಿಂದ ಬೇಸತ್ತ ಡ್ರಗ್ ಪೆಡ್ಲರ್‌ಗಳು ಇದೀಗ ಹೊಸ ಹಾದಿ ಕಂಡು ಕೊಂಡಿದ್ದಾರೆ. ಅದೇ ವಾಟ್ಸಪ್ ಲೊಕೇಷನ್ ಡ್ರಗ್ ಡೀಲಿಂಗ್ ಮಾಡಲ್.

ಹೊಸ ಡ್ರಗ್ ಪೆಡ್ಲಿಂಗ್ ಮಾಡಲ್: ಡ್ರಗ್ ಪೆಡ್ಲರ್‌ಗಳು ಪೊಲೀಸರ ಕೈಗೆ ಸಿಗದಂತೆ ಡ್ರಗ್ ಮಾರಾಟ ಮಾಡುವ ಹೊಸ ಜಾಲವನ್ನು ಸೃಷ್ಟಿಸಿಕೊಂಡಿದ್ದಾರೆ. ಆದರೆ, ಮಡಿವಾಳ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಿಂದ ಡ್ರಗ್ ಪೆಡ್ಲರ್‌ಗಳ ಹೊಸ ಮಾದರಿಯ ಡ್ರಗ್ ಡೀಲಿಂಗ್ ಐಡಿಯಾ ಕೂಡ ಇದೀಗ ಬಯಲಾಗಿದೆ. ಗ್ರಾಹಕರು ಡ್ರಗ್ ಖರೀದಿ ಮಾಡಿದರೆ, ಅವರ ವಿಳಾಸ ಪಡೆಯುತ್ತಿದ್ದರು. ಆ ಬಳಿಕ ಅವರಿಗೆ ಸಮೀಪದ ನಿರ್ಜನ ಪ್ರದೇಶದಲ್ಲಿ ಗಾಂಜಾ, ಅಫೀಮು, ಹ್ಯಾಷ್ ಆಯಿಲ್ ಮತ್ತಿತರ ಡ್ರಗ್‌ನ್ನು ಬಚ್ಚಿಟ್ಟು, ಅಲ್ಲಿಂದ ಒಂದು ಫೋಟೋ ತೆಗೆದು ಡ್ರಗ್ ಪೆಡ್ಲರ್‌ಗಳು ಖರೀದಿದಾರರಿಗೆ ಕಳುಹಿಸುತ್ತಿದ್ದರು. ಪೋಟೋ ಜತೆಗೆ ಡ್ರಗ್ ಇಟ್ಟಿರುವ ಲೊಕೇಷನ್ ಕೂಡ ವಾಟ್ಸಪ್‌ನಲ್ಲಿ ರವಾನಿಸುತ್ತಿದ್ದರು. ಹೀಗೆ ಪೊಲೀಸರ ಕಣ್ಣಿಗೆ ಕಾಣದಂತೆಯೇ ಡ್ರಗ್ ಡೀಲಿಂಗ್ ಮಾಡುತ್ತಿದ್ದರು. ಗ್ರಾಹಕರ ಮುಖ ಪೆಡ್ಲರ್‌ಗಳು ನೋಡುವಂತಿಲ್ಲ. ಪೆಡ್ಲರ್‌ಗಳ ಮುಖ ಗ್ರಾಹಕರು ನೀಡುವಂತಿಲ್ಲ. ಒಬ್ಬರನ್ನೊಬ್ಬರು ನೋಡುವ ಅಗತ್ಯವೂ ಬೀಳಲ್ಲ. ಇಂತಹ ಖತರ್ ನಾಕ್ ಐಡಿಯಾ ಬಳಿಸಿ ಡ್ರಗ್ ಮಾರಾಟ ಮಾಡುತ್ತಿದ್ದ ಪೆಡ್ಲರ್‌ಗಳ ಜಾಲವನ್ನು ಮಡಿವಾಳ ಪೊಲೀಸರು ಮಣ್ಣು ಪಾಲು ಮಾಡಿದ್ದಾರೆ.

ಆಪರೇಷನ್ ಮಡಿವಾಳ ಪೊಲಿಸರು: ಈ ಹೊಸ ರೀತಿಯ ಡ್ರಗ್ ಜಾಲದ ಬಗ್ಗೆ ಮಾಹಿತಿ ಪಡೆದ ಮಡಿವಾಳ ಪೊಲೀಸರು, ಮಾರುವೇಷದ ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಡ್ರಗ್ ಖರೀದಿ ಸೋಗಿನಲ್ಲಿ ಪೊಲೀಸರು ವಾಟ್ಸಪ್ ಲೊಕೇಷನ್ ಮತ್ತು ಪೋಟೋ ಮೂಲಕ ಡ್ರಗ್ ಡೀಲ್ ಮಾಡ್ತಿದ್ದ ಪೆಡ್ಲರ್‌ಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡಿದ್ದಾರೆ. ಕೇರಳ ಮೂಲದ ಮೊಹಮ್ಮದ್ ಸಕಾರಿಯ, ಶಾಮಿಲ್, ಪ್ರನವ್, ಅನುಭವ್ ರವೀಂದ್ರನ್, ಶ್ಯಾಮ್ ದಾಸ್ ಎಂಬುವರನ್ನು ಬಂಧಿಸಿ ಗಾಂಜಾ, ಎಂಡಿಎಂಎ, ಹ್ಯಾಶಿಷ್ ಆಯಿಲ್ ವಶಪಡಿಸಿಕೊಂಡಿದ್ದಾರೆ.












Click it and Unblock the Notifications