ಸುದೀರ್ಘ ಹಗಲು ಮಾತ್ರವಲ್ಲ, ಹಲವು ಸೌರ ಕೌತುಕಗಳಿಗೆ ಸಾಕ್ಷಿಯಾಗಲಿದೆ ಜೂನ್, ಮಿಸ್ ಮಾಡ್ಕೋಬೇಡಿ
ಬೆಂಗಳೂರು: ಜೂನ್ 22 ಸಾಮಾನ್ಯವಾಗಿ ಸುದೀರ್ಘ ಹಗಲನ್ನು ಹೊಂದಿರುವ ದಿನ. ಇದರ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ, ಅದರ ಹೊರತುಪಡಿಸಿ, ಈ ವರ್ಷದ ಜೂನ್ ತಿಂಗಳು ಅನೇಕ ಖಗೋಳ ವಿದ್ಯಾಮಾನಗಳಿಗೆ ಸಾಕ್ಷಿಯಾಗುತ್ತಿದ್ದು, ಈ ಸೌರ ಕೌತುಕವನ್ನು ತಪ್ಪದೇ ನೋಡಿ.
ಗ್ರಹಗಳ ಕಾಸ್ಮಿಕ್ ಕಿಸ್
ಈ ದಿನ ರಾತ್ರಿ (ಜೂನ್ 9) ಭೂಮಿಗೆ ಸಮೀಪವಾಗಲಿದೆ ಗುರು, ಶುಕ್ರ ಗ್ರಹಗಳು. ಬರೀಗಣ್ಣಲ್ಲೇ ವೀಕ್ಷಿಸಬಹುದಾದ ಈ ಸೌರ ಕೌತುಕವನ್ನು ಖಗೋಳ ವಿಜ್ಞಾನಿಗಳು ಕಾಸ್ಮಿಕ್ ಕಿಸ್ ಎಂದೇ ಬಣ್ಣಿಸುತ್ತಾರೆ. ಸೂರ್ಯಾಸ್ತದ ನಂತರ ನೋಡಬಹುದಾದ ಈ ಕೌತುಕವನ್ನು ಮಿಸ್ ಮಾಡಿಕೊಳ್ಳಬೇಡಿ.

ಸೂಪರ್ ನ್ಯೂ ಮೂನ್
ಜೂನ್ 15 ಹಾಗೂ ಇದೇ ವರ್ಷದ ಡಿಸೆಂಬರ್ 24ಕ್ಕೆ ಚಂದಿರ ತನ್ನ ಕಕ್ಷೆಯಲ್ಲಿ 'ಅವನಿ'ಯ ಹತ್ತರವೇ ಬರಲಿದ್ದಾನೆ. ಇದಕ್ಕೆ ನವ ಚಂದಿರವೆಂದೂ ಕರೆಯುತ್ತಾರೆ. ಹೊಸ ಚಕ್ರವನ್ನು ಶಶಿ ಪ್ರವೇಶಿಸುತ್ತಾನೆ. ಪೃಥ್ವಿ ಮತ್ತು ಸೂರ್ಯನ ನಡುವೆ ಇರುವುದರಿಂದ ಚಂದ್ರನ ಬೆಳಕು ಭೂಮಿಗೆ ಪ್ರತಿಫಲಿಸುವುದಿಲ್ಲ. ಈ ದಿನ ತಾರಾಲೋಕದ ಸೌಂದರ್ಯ ವೀಕ್ಷಿಸಲು ಪ್ರಶಸ್ತ ರಾತ್ರಿ.
ಪ್ಲಾನೆಟ್ ಪರೇಡ್
ಜೂನ್ 18ರಂದು ಅತ್ಯಂತ ಪ್ರಕಾಶಮಾನವಾದ ನಕ್ಷತ್ರ ರೆಗ್ಯುಲಸ್ ಹಾಗೂ ಶುಕ್ರ ಹಾಗೂ ಅರ್ಧ ಚಂದ್ರ ಒಂದೇ ಸಾಲಲ್ಲಿ ನಿಲ್ಲಲ್ಲಿವೆ. ಆ ಸಾಲಿನ ಕೆಳಗೆ ಬುಧ ಮತ್ತು ಗುರು ಗ್ರಹಗಳು ಪ್ರಕಾಶಿಸಲಿವೆ. ಸೂರ್ಯಾಸ್ತದ ನಂತರ ಈ ಸೌರ ಕೌತುಕವನ್ನು ಕಣ್ತುಂಬಿಕೊಳ್ಳಬಹುದು.
ಸುದೀರ್ಘ ದಿನ
ಪ್ರತೀ ವರ್ಷದಂದೆ ಈ ಸಲವೂ ಜೂನ್ 21ರಂದು ಭೂಮಿಯ ಉತ್ತರ ಗೋಳಾರ್ಧದಲ್ಲಿ ವರ್ಷದ ಅತ್ಯಂತ ಸುದೀರ್ಘ ದಿನವೆಂದು ಪರಿಗಣಿಸಲಾಗುತ್ತದೆ. ಭೂಮಿಯ ಅಕ್ಷವು ಸೂರ್ಯನಿಗೆ ಹತ್ತಿರವಾಗಿ ಓರೆಯಾದಾಗ ಹಗಲು ಹೊತ್ತು ಹೆಚ್ಚಾಗಿ, ಕತ್ತಲು ಅಂದ್ರೆ ರಾತ್ರಿ ಕಡಿಮೆಯಾಗುತ್ತದೆ.
ಜೂನ್ 29
ಹೆಣ್ಣಿನ ಹೆಸರು ಮಾತ್ರವಲ್ಲ, ಹಣ್ಣಿನ ಹೆಸರೂ ಚಂದ್ರನಿಗಿದೆ ಶಶಿ ಎಂದು ಕರೆಯಲ್ಪಡುವ ಚಂದ್ರನ ಕಂಡರೆ ಕವಿಗಳಿಗಂತೂ ಸಿಕ್ಕಾಪಟ್ಟೆ ಮೋಹ. ಮನಸ್ಸಿನ ಮೇಲೆ ಪ್ರಭಾವ ಬೀರುವ ಈ ಚಂದ್ರನನ್ನು ಬಗೆ ಬಗೆಯಾಗಿ ವರ್ಣಿಸುತ್ತಾರೆ. ಅಷ್ಟೇ ಅಲ್ಲ ಆಯಾ ತಿಂಗಳ ವಿಶೇಷತೆಗೆ ಅನುಗುಣವಾಗಿ ಅಮೆರಿಕನ್ನರು ನಿಸರ್ಗದಲ್ಲಾಗುವ ಬದಲಾವಣೆಗಳಿಗೆ ತಕ್ಕಂತೆ ಪ್ರತಿ ತಿಂಗಳ ಹುಣ್ಣಿಮೆಗೂ ಒಂದೊಂದು ಹೆಸರು ಇಟ್ಟಿದ್ದಾರೆ. ಈ ಜೂನ್‌ನಲ್ಲಿ ಸ್ಟ್ರಾಬೆರಿ ಕಟಾವಿನ ಸಮಯವಾದ್ದರಿಂದ ಚಂದ್ರನಿಗೆ 'ಸ್ಟ್ರಾಬೆರಿ ಮೂನ್' ಎಂದೂ ಕರೆಯುತ್ತಾರೆ. ಈ ಸಲ ಜೂನ್ 29ರಂದು ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯಿಂದ ದೂರ ಸಾಗಿ ಸಾಮಾನ್ಯ ಹುಣ್ಣಿಮೆಗಿಂತ ಕೊಂಚ ಸಣ್ಣದಾಗಿ ಗೋಚರಿಸುತ್ತಾನೆ. ಈ ಸೌರ ವಿದ್ಯಮಾನಕ್ಕೆ 'ಮೈಕ್ರೋ ಸ್ಟ್ರಾಬೆರಿ ಮೂನ್' ಎಂದು ಹೆಸರಿಸಲಾಗಿದೆ. ಹಾಲು ಬಣ್ಣ ಅಂತ ಕರೀಬಹುದು, ಕೆಲವೊಮ್ಮೆ ಕೆಂಪಗೆ ಕಂಡರೂ ಸ್ಟ್ರಾಬರಿಯಷ್ಟು ಕೆಂಪೇನೂ ಚಂದ್ರ ಕಾಣೋಲ್ಲ ಬಿಡಿ.
ಈ ಎಲ್ಲಾ ಖಗೋಳ ಘಟನೆಗಳು ಕೇವಲ ದೃಶ್ಯ ವೈಭವವಲ್ಲ, ವಿಜ್ಞಾನ ಆಸಕ್ತರಿಗೆ ಆಕಾಶದ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ಅವಕಾಶವೂ ಆಗಿವೆ. ಬೆಳಕು ಮಾಲಿನ್ಯ ಕಡಿಮೆ ಇರುವ ಪ್ರದೇಶಗಳಲ್ಲಿ ಇವುಗಳನ್ನು ಸ್ಪಷ್ಟವಾಗಿ ವೀಕ್ಷಿಸಬಹುದು ಎಂದು ಖಗೋಳ ವಿಜ್ಞಾನಿಗಳು ಸಲಹೆ ನೀಡುತ್ತಾರೆ. ವಿಶೇಷವಾಗಿ ಸಂಜೆ ಸೂರ್ಯಾಸ್ತದ ನಂತರ ಅಥವಾ ಮುಂಜಾನೆ ಸಮಯದಲ್ಲಿ ಆಕಾಶವನ್ನು ಗಮನಿಸುವುದರಿಂದ ಈ ಅಪರೂಪದ ದೃಶ್ಯಗಳನ್ನು ಹೆಚ್ಚು ಸ್ಪಷ್ಟವಾಗಿ ಕಾಣಬಹುದು.














Click it and Unblock the Notifications