ಬೆಂಗಳೂರು-ಉತ್ತರ ಕರ್ನಾಟಕ ರೈಲು ಮಾರ್ಗ: 162 ಕೋಟಿ ವೆಚ್ಚದ ಮಹತ್ವದ ಯೋಜನೆಗೆ ಒಪ್ಪಿಗೆ, ಪ್ರಯೋಜನಗಳೇನು?
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಮಾತ್ರವಲ್ಲದೇ, ಉತ್ತರ ಭಾರತದವರೆಗೂ ಸಂಪರ್ಕ ಕಲ್ಪಿಸುವ ಪ್ರಮುಖ ರೈಲ್ವೆ ಮಾರ್ಗ ಬೆಂಗಳೂರು-ತುಮಕೂರು-ಹುಬ್ಬಳ್ಳಿ ಟ್ರ್ಯಾಕ್‌ನಲ್ಲಿ ಮಹತ್ವದ ಬಹುಕೋಟಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ರೈಲ್ವೆ ಇಲಾಖೆ ಮಂಗಳವಾರ ಅನುಮೋದನೆ ನೀಡಿದೆ. ಹೆಚ್ಚು ಸಂಚಾರ ದಟ್ಟಣೆ, ಪ್ರಯಾಣಿಕರ ಒತ್ತಡ ಇರುವ ಸದರಿ ರೈಲು ಮಾರ್ಗದಲ್ಲಿ ಟ್ರಾಕ್ಷನ್ ಸಿಸ್ಟಮ್ ಮೇಲ್ದರ್ಜೆಗೆ ಏರಲಿದೆ.
ನೈಋತ್ಯ ರೈಲ್ವೆ ವ್ಯಾಪ್ತಿಯ ಪ್ರಯಾಣಿಕರ ದಟ್ಟಣೆಯ ಮಾರ್ಗದ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಒಟ್ಟು 162 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಿಂದ ರೈಲುಗಳ ಓಡಾಟಕ್ಕೆ ಚುರುಕು ನೀಡಿದಂತಾಗುತ್ತದೆ. ಬೆಂಗಳೂರಿನಿಂದ ತುಮಕೂರು, ಚಿಕ್ಕಜಾಜೂರು, ಚಿತ್ರದುರ್ಗ ಒಳಗೊಂಡಂತೆ 120 ಕಿಲೋ ಮೀಟರ್ ದೂರದವರೆಗೆ ಈ ಟ್ರಾಕ್ಷನ್ ಸಿಸ್ಟಮ್ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದ್ದು, ಇದರಿಂದ ಆಗೋಮ್ಮೆ ಈಗೊಮ್ಮೆ ರೈಲುಗಳ ಸಂಚಾರ, ನಿಲುಗಡೆ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

ಬೆಂಗಳೂರಿನಿಂದ ಹುಬ್ಬಳ್ಳಿ, ಪುಣೆ, ಉತ್ತರ ಭಾರತಕ್ಕೆ ಹಾಗೂ ಇತ್ತರ ಕನ್ಯಾಕುಮಾರಿವರೆಗೆ ತೆರಳಲು ಇದೇ ರೈಲು ಮಾರ್ಗದ ರೈಲುಗಳನ್ನು ಅನುಸರಿಸಲಾಗುತ್ತೆ. ಯಶವಂತಪುರ ನಿಲ್ದಾಣ ಮತ್ತು ಕೆಎಸ್‌ಆರ್ ನಿಲ್ದಾಣಗಳು ಒಂದೇ ಕೋನದಲ್ಲಿ ಬರುವ ಕಾರಣಕ್ಕೆ ಹೆಚ್ಚು ರೈಲುಗಳ ಓಡಾಟ, ಜನಟ್ಟಣೆ ಇರುತ್ತದೆ. ಇದರಿಂದ ಸಂಚಾರ ನಿಧಾನಗತಿಯಲ್ಲಿದೆ. ಅದಕ್ಕೆ ವೇಗ ನೀಡಲು, ತ್ವರಿತ ರೈಲು ಕಾರ್ಯಾಚರಣೆಗೆ ಅನುಕೂಲವಾಗುವಂತೆ ರೈಲುಗಳಿಗೆ ವಿದ್ಯುತ್ ಪೂರೈಕೆಯನ್ನು ಮತ್ತಷ್ಟು ಬಲಪಡಿಸಲು ಯೋಜನೆ ರೂಪಿಸಲಾಗಿದೆ. ಇದೇ ಮಾರ್ಗದಲ್ಲಿ ಹೆಚ್ಚು ರೈಲುಗಳನ್ನು ನಿರ್ವಹಿಸಲು ಇದು ಪೂರಕ ವ್ಯವಸ್ಥೆ ಒದಗಿಸುತ್ತದೆ.
ಎಲ್ಲ ವಿಧದ ರೈಲುಗಳಿಗೂ ವರದಾನ
ಕೈಗಾರಿಕೆ ಕೇಂದ್ರಗಳು, ಪ್ರಮುಖ ನಗರಗಳನ್ನು ಸಂಪರ್ಕಿಸುವ ಪ್ರಮುಖ ರೈಲುಗಳು, ಸರಕು-ಸೇವಾ ರೈಲುಗಳು, ವೇಗದ ಎಕ್ಸ್‌ಪ್ರೆಸ್ ರೈಲುಗಳೊಂದಿಗೆ ಪ್ಯಾಸೆಂಜರ್, ವಂದೇ ಭಾರತ್ ನಂತಹ ಹೈಸ್ಪೀಡ್ ರೈಲುಗಳಿಗೂ ಈ ಯೋಜನೆ ವರದಾನವಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ತಲುಪುವ ಸಮಯದಲ್ಲೂ ಇಳಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದೀನ್ನು ಖಚಿತವಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಭಾರತದ ರೈಲ್ವೆ ಜಾಲದಲ್ಲಿ ಪ್ರಮುಖ ಸುಧಾರಣೆ
ಯೋಜನೆಯಿಂದ ದಕ್ಷಿಣಾ ಬಾರತದ ರೈಲ್ವೆ ಜಾಲ ಅದರಲ್ಲೂ ಕರ್ನಾಟಕದ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಬಲಿಷ್ಟವಾಗಲಿದ್ದು, ವಿಶ್ವಾಸಾರ್ಹತೆ ಹೆಚ್ಚಾಗಲಿದೆ. ರೈಲುಗಳ ಸಂಚಾರ ನಿರಂತರವಾಗಿ ಏರಿಕೆ ಕಾಣಲಿದೆ ಎಂಬ ವಿಶ್ವಾಸವನ್ನು ರೈಲ್ವೆ ಅಧಿಕಾರಿಗಳು ಹೊರ ಹಾಕಿದ್ದಾರೆ.
ಒಟ್ಟಾರೆ ರಾಜ್ಯ ರೈಲ್ವೆ ಜಾಲಕ್ಕೆ ಉತ್ತೇಜನ ದೊರೆಯಲಿದೆ. ಪ್ರಯಾಣಿಕರಿಗೆ ವೇಗದ ರೈಲ್ವೆ ಸೇವೆ ಲಭ್ಯವಾಗಲಿದೆ. ಸದ್ಯ ಈ ಅಭಿವೃದ್ಧಿ ಕಾರ್ಯ ಆರಂಭಿಕ ಹಂತದಲ್ಲಿದ್ದು, ಶೀಘ್ರವೇ ಕಾಮಗಾರಿ ಆರಂಭವಾಲಿದೆ. ಯಾವಾಗ ಮುಗಿಯುತ್ತೆ ಎಂಬ ಡೆಡ್‌ಲೈನ್, ಇನ್ನಿತರ ಮಾಹಿತಿ ತಿಳಿಯಬೇಕಿದೆ.













Click it and Unblock the Notifications