Adani: ಇಂಟೆಲಿಸ್ಮಾರ್ಟ್ ಸ್ವಾಧೀನಪಡಿಸಿಕೊಳ್ಳಲು ಮುಂದಾದ ಅದಾನಿ ಎನರ್ಜಿ ಸೊಲ್ಯೂಷನ್ಸ್

Adani: ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಭಾರತದ ಅತ್ಯಂತ ದೊಡ್ಡ ಸ್ಮಾರ್ಟ್ ಮೀಟರಿಂಗ್ ಕಂಪನಿಗಳಲ್ಲಿ ಒಂದಾದ 'ಇಂಟೆಲ್ಲಿಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯ ಶೇಕಡಾ 100ರಷ್ಟು ಷೇರುಗಳನ್ನು ಖರೀದಿಸಲು ಬದ್ಧತಾ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಬೃಹತ್ ಒಪ್ಪಂದದ ಒಟ್ಟು ಮೌಲ್ಯ 3,050 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ಸ್ವಾಧೀನದ ಮೂಲಕ ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ ದೇಶದ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ ಮೀಟರಿಂಗ್ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ನಿರೀಕ್ಷೆಯಿದೆ. ಈ ಒಪ್ಪಂದ ಪೂರ್ಣಗೊಂಡ ಬಳಿಕ ಕಂಪನಿಯ ಒಟ್ಟು ಸ್ಮಾರ್ಟ್ ಮೀಟರ್‌ ಪೋರ್ಟ್‌ಫೋಲಿಯೋ 4.7 ಕೋಟಿಗೂ ಹೆಚ್ಚು ಮೀಟರ್‌ಗಳಿಗೆ ಏರಿಕೆಯಾಗಲಿದೆ. ಈ ವಹಿವಾಟು ನಿಯಂತ್ರಣ ಸಂಸ್ಥೆಗಳ ಅನುಮೋದನೆ ಹಾಗೂ ಇತರ ಸಾಮಾನ್ಯ ಷರತ್ತುಗಳ ಪೂರ್ಣಗೊಳ್ಳುವಿಕೆಗೆ ಒಳಪಟ್ಟಿದೆ.

Adani Energy Solutions Acquires IntelliSmart for 3 050 Cr Smart Meter Portfolio Crosses 4 7 Crore

ನ್ಯಾಷನಲ್ ಇನ್ವೆಸ್ಟ್‌ಮೆಂಟ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಫಂಡ್ (NIIF) ಹಾಗೂ ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್ (EESL) ಜಂಟಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಟೆಲಿಸ್ಮಾರ್ಟ್, ಭಾರತದಲ್ಲಿನ ಟಾಪ್ 3 ಸ್ಮಾರ್ಟ್ ಮೀಟರಿಂಗ್ ಕಂಪನಿಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ಕಂಪನಿಯು ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಲ್ಲಿ 2.2 ಕೋಟಿಗೂ ಹೆಚ್ಚು ಸ್ಮಾರ್ಟ್ ಮೀಟರ್‌ಗಳ ಪೋರ್ಟ್‌ಫೋಲಿಯೊವನ್ನು ನಿರ್ವಹಿಸುತ್ತಿದೆ.

ಈ ಒಪ್ಪಂದದ ನಿಯಮಗಳ ಪ್ರಕಾರ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಇಂಟೆಲಿಸ್ಮಾರ್ಟ್ ಕಂಪನಿಯ ಸಂಪೂರ್ಣ ಷೇರು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳಲಿದ್ದು, ಎನ್‌ಐಐಎಫ್ ಹೊಂದಿರುವ ಐಚ್ಛಿಕವಾಗಿ ಪರಿವರ್ತಿಸಬಹುದಾದ ಡಿಬೆಂಚರ್‌ಗಳನ್ನು (Optionally Convertible Debentures) ಮರುಪಾವತಿಸಲಿದೆ. ಈ ಬೆಳವಣಿಗೆ ಕುರಿತು ಅದಾನಿ ಎನರ್ಜಿ ಸೊಲ್ಯೂಷನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕಂದರ್ಪ್ ಪಟೇಲ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಸ್ವಾಧೀನವು ಕಂಪನಿಯ ಕಾರ್ಯವ್ಯಾಪ್ತಿ ಹಾಗೂ ಯೋಜನೆಗಳನ್ನು ಜಾರಿಗೊಳಿಸುವ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲಿದೆ. ಜೊತೆಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳ ಮೂಲಕ ಭಾರತದ ವಿದ್ಯುತ್ ವಿತರಣಾ ವ್ಯವಸ್ಥೆಯ ಆಧುನೀಕರಣಕ್ಕೆ ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದಾರೆ.

ಕಂಪನಿಯು ಈ ಒಪ್ಪಂದವು ತನ್ನ ದೀರ್ಘಕಾಲೀನ ಬೆಳವಣಿಗೆ ತಂತ್ರಕ್ಕೆ ಅನುಗುಣವಾಗಿದೆ ಎಂದು ತಿಳಿಸಿದೆ. ಸಾವಯವ ವಿಸ್ತರಣೆ ಹಾಗೂ ಕಾರ್ಯತಂತ್ರದ ಸ್ವಾಧೀನಗಳ ಮೂಲಕ ಮೌಲ್ಯವರ್ಧಿತ ಪ್ರಗತಿಯನ್ನು ಸಾಧಿಸುವ ಗುರಿಯನ್ನು ಈ ಒಪ್ಪಂದ ಬೆಂಬಲಿಸುತ್ತದೆ ಎಂದು ಕಂಪನಿ ಹೇಳಿದೆ. ಅಲ್ಲದೆ ಈ ಸ್ವಾಧೀನದ ಮೂಲಕ ಪ್ರಮಾಣದ ಆರ್ಥಿಕ ಲಾಭಗಳು, ನಿರ್ವಹಣಾ ವೆಚ್ಚದಲ್ಲಿ ಕಡಿತ ಹಾಗೂ ತನ್ನ ವಿಶಾಲವಾದ ಇಂಧನ ಮತ್ತು ಮೂಲಸೌಕರ್ಯ ಪ್ಲಾಟ್‌ಫಾರ್ಮ್‌ನೊಂದಿಗೆ ಸಮನ್ವಯ ಸಾಧಿಸುವುದರಿಂದ ಕಾರ್ಯಾಚರಣೆಯ ಮಟ್ಟದಲ್ಲಿ ಗಮನಾರ್ಹ ಲಾಭಗಳು ದೊರೆಯುವ ನಿರೀಕ್ಷೆಯಿದೆ ಎಂದು ಅದಾನಿ ಎನರ್ಜಿ ಸೊಲ್ಯೂಷನ್ಸ್ ತಿಳಿಸಿದೆ.

ಇಂಟೆಲಿಸ್ಮಾರ್ಟ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅನಿಲ್ ರಾವಲ್ ಅವರು, ಈ ವಹಿವಾಟನ್ನು ಒಂದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಈ ಒಪ್ಪಂದವು ಕಂಪನಿಯ ಷೇರುದಾರರಿಗೆ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸಿದೆ ಮತ್ತು ಭಾರತದ ವಿದ್ಯುತ್ ವಿತರಣಾ ಕ್ಷೇತ್ರದ ಡಿಜಿಟಲೀಕರಣಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ವೇಗ ನೀಡಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಎನ್‌ಐಐಎಫ್ ವ್ಯವಸ್ಥಾಪಕ ಪಾಲುದಾರರಾದ ವಿನೋದ್ ಗಿರಿ ಅವರು ಮಾತನಾಡಿ, ಇಂಟೆಲಿಸ್ಮಾರ್ಟ್ ಕಂಪನಿಯು ಭಾರತದ ಪ್ರಮುಖ ಸ್ಮಾರ್ಟ್ ಮೀಟರಿಂಗ್ ವೇದಿಕೆಗಳಲ್ಲಿ ಒಂದಾಗಿ ಬೆಳೆದಿದೆ. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಉದಯೋನ್ಮುಖ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಆಧಾರಿತ ವ್ಯವಹಾರಗಳನ್ನು ನಿರ್ಮಿಸಿ ಅವುಗಳನ್ನು ಯಶಸ್ವಿಯಾಗಿ ವಿಸ್ತರಿಸುವ ಎನ್‌ಐಐಎಫ್‌ನ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ಈ ವಹಿವಾಟು ಎನ್‌ಐಐಎಫ್‌ನ ಮೂಲಸೌಕರ್ಯ ಹೂಡಿಕೆ ತಂತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಹೂಡಿಕೆದಾರರಿಗೆ ಮೌಲ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.

ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಸಿಇಒ ಅಖಿಲೇಶ್ ದೀಕ್ಷಿತ್ ಮಾತನಾಡಿ, ಭಾರತದ ವಿದ್ಯುತ್ ಕ್ಷೇತ್ರದಲ್ಲಿ ಇಂಧನ ದಕ್ಷತೆ ಮತ್ತು ಡಿಜಿಟಲ್ ಪರಿವರ್ತನೆಯನ್ನು ಮತ್ತಷ್ಟು ಉತ್ತೇಜಿಸಲು ಸಂಸ್ಥೆ ಬದ್ಧವಾಗಿದೆ. ಈ ವಹಿವಾಟಿನ ಮೂಲಕ ಇಂಟೆಲಿಸ್ಮಾರ್ಟ್ ಸಂಸ್ಥೆಯು ವಿದ್ಯುತ್ ವಿತರಣಾ ಕಂಪನಿಗಳು ಹಾಗೂ ಗ್ರಾಹಕರಿಗೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸೇವೆ ಒದಗಿಸುವ ಸಾಮರ್ಥ್ಯವನ್ನು ಬಲಪಡಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಸ್ವಾಧೀನದೊಂದಿಗೆ ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ ಭಾರತದಲ್ಲಿನ ಅತಿದೊಡ್ಡ ಸ್ಮಾರ್ಟ್ ಮೀಟರಿಂಗ್ ವೇದಿಕೆಗಳಲ್ಲಿ ಒಂದಾಗಿ ಹೊರಹೊಮ್ಮಲು ಸಜ್ಜಾಗಿದೆ. ದೇಶದ ವಿದ್ಯುತ್ ಕ್ಷೇತ್ರದ ಸುಧಾರಣಾ ಯೋಜನೆಗಳ ಭಾಗವಾಗಿ ಸ್ಮಾರ್ಟ್ ಮೀಟರ್‌ಗಳ ರಾಷ್ಟ್ರವ್ಯಾಪಿ ಅಳವಡಿಕೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವ ಸಂದರ್ಭದಲ್ಲೇ ಈ ಮಹತ್ವದ ಒಪ್ಪಂದ ನಡೆದಿದೆ. ಈ ವಹಿವಾಟಿಗೆ ಸಂಬಂಧಿಸಿದಂತೆ ಕಾನೂನು ಸಲಹಾ ಸೇವೆಯನ್ನು ಎಇಎಸ್‌ಎಲ್ ಪರವಾಗಿ ಸಿರಿಲ್ ಅಮರ್‌ಚಂದ್ ಮಂಗಲದಾಸ್ ಸಂಸ್ಥೆ ನೀಡಿದ್ದು, ಮಾರಾಟಗಾರರ ಪರವಾಗಿ ತಲ್ವಾರ್ ಠಾಕೋರ್ & ಅಸೋಸಿಯೇಟ್ಸ್ ಕಾರ್ಯನಿರ್ವಹಿಸಿದೆ. ಇನ್ನು 'ಡೆಲಾಯಿಟ್ ಟಚ್ ತೋಹ್ಮಾತ್ಸು ಇಂಡಿಯಾ' (Deloitte Touche Tohmatsu India) ಈ ವಹಿವಾಟಿನಲ್ಲಿ ಮಾರಾಟಗಾರರ ವಿಶೇಷ ವ್ಯವಹಾರ ಸಲಹೆಗಾರರಾಗಿ ಕಾರ್ಯನಿರ್ವಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+