ಎಂ.ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬೆನ್ನಲ್ಲೆ ಮಹತ್ವದ ನಿರ್ಧಾರಕ್ಕೆ ಮುಂದಾದ ರಾಜ್ಯ ಆರೋಗ್ಯ ಇಲಾಖೆ
Health Department New guidelines: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು 17 ವರ್ಷಗಳ ಬಳಿಕ ಮೊದಲ ಟ್ರೋಫಿ ತನ್ನದಾಗಿಸಿಕೊಂಡಿದೆ. ಜೂನ್ 3ರ ರಾತ್ರಿ ಬರೀ ಕರ್ನಾಟಕ ಅಷ್ಟೇ ಅಲ್ಲದೆ, ಇಡೀ ದೇಶವೇ ಬೆಂಗಳೂರು ತಂಡದ ಗೆಲುವಿನ ಸಂಭ್ರಾಮಾಚರಣೆಯಲ್ಲಿ ಮುಳುಗಿತ್ತು. ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಂಡಿದ್ದು, ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
17 ವರ್ಷಗಳ ಬಳಿಕ ಆರ್‌ಸಿಬಿ ಮೊದಲ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆ ಜೂನ್ 3ರ ರಾತ್ರಿ ಬರೀ ಕರ್ನಾಟಕ ಅಷ್ಟೇ ಅಲ್ಲದೆ ದೇಶ, ವಿದೇಶಗಳಲ್ಲಿ ಜೋರಾಗಿಯೇ ಸಂಭ್ರಮಾಚರಣೆ ನಡೆಯಿತು. ಮಾರನೇ ದಿನ ಜೂನ್ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಆಯೋಜನೆ ಮಾಡಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ವೇಳೆ ಆ್ಯಂಬುಲೆನ್ಸ್ ವ್ಯವಸ್ಥೆಯೂ ಇರಲಿಲ್ಲ ಎನ್ನುವ ಆರೋಪ ಕೇಳಿಬಂದಿದ್ದವು.

ಇನ್ನು 11 ಆರ್‌ಸಿಬಿಯ ಅಭಿಮಾನಿಗಳ ಸಾವು ಪ್ರಕರಣ ಸಂಬಂಧ ವಿಪಕ್ಷಗಳ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರುತ್ತಲಿವೆ. ಈ ನಡುವೆಯೇ ದುರಂತದಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಜಾರಿ ಮಾಡಲು ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ಮುಂದೆ ಸಾವಿರಾರು ಜನ ಸೇರುವ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಶಿಫಾರಸು ಮಾಡಲು ಸಚಿವರು ನಿರ್ಧರಿಸಿದ್ದಾರೆ. ಹೆಚ್ಚಿನ ಜನ ಸೇರುವ ಕಾರ್ಯಕ್ರಮದ ಜನಸಂಖ್ಯೆಗೆ ಅನುಗುಣಕ್ಕ ತಕ್ಕಂತೆ ಕನಿಷ್ಠ ವೈದ್ಯರು, ಸಿಬ್ಬಂದಿ ಹಾಗೂ ಐಸಿಯು ಆ್ಯಂಬುಲೆನ್ಸ್ಗಳ ವ್ಯವಸ್ಥೆ ಇರುವಂತೆ ಮಾರ್ಗಸೂಚಿ ಹೊರಡಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರಿದ್ದರು. ಈ ವೇಳೆ ಸೂಕ್ತ ವೈದ್ಯರು, ಆ್ಯಂಬುಲೆನ್ಸ್ಗಳ ವ್ಯವಸ್ಥೆ ಸಹ ಇರಲಿಲ್ಲ. ಆದ್ದರಿಂದ ದುರಂತದಲ್ಲಿ ಗಾಯಗೊಂಡ ಜನರಿಗೆ ನಡು ರಸ್ತೆಯಲ್ಲೇ ಚಿಕಿತ್ಸೆ ನೀಡಲಾಗಿದೆ. ಇನ್ನೂ ಕೆಲವರು ಉಸಿರಾಟದ ತೊಂದರೆಯಿಂದ ಒದ್ದಾಡಿದ ಘಟನೆಗಳು ನಡೆದವು. ಸ್ಥಳದಲ್ಲಿ ಸಮರ್ಪಕ ವೈದ್ಯರು ಹಾಗೂ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಇದ್ದಿದ್ದರೆ ಸಾವಿನ ಪ್ರಮಾಣವನ್ನು ತಗ್ಗಿಸಬಹುದಾಗಿತ್ತು. ಈ ಹಿನ್ನೆಲೆ ಇದೀಗ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಕಾರ್ಯಕ್ರಮಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲು ಸಿದ್ಧತೆ ನಡೆಸಿದೆ.












Click it and Unblock the Notifications