Pallakki: ಅಕ್ಟೋಬರ್ 7ರಂದು ರಸ್ತೆಗಿಳಿಯಲಿವೆ ಕೆಎಸ್ಆರ್ಟಿಸಿಯ 40 ನಾನ್ ಎಸಿ ಸ್ಲೀಪರ್ ಬಸ್
ದೇಶದಲ್ಲೇ ಅತ್ಯುತ್ತಮ ಸಾರಿಗೆ ಸೇವೆ ನೀಡುತ್ತಿರುವ ಕೆಎಸ್ಆರ್ಟಿಸಿ ಇದೀಗ 40 ಹೊಸ ಬಸ್‌ಗಳನ್ನು ರಸ್ತೆಗಿಳಿಸಲು ಸಜ್ಜಾಗಿದೆ. 'ಪಲ್ಲಕ್ಕಿ' ಹೆಸರಿನ 40 ನಾನ್ ಎಸಿ ಸ್ಲೀಪರ್ ಬಸ್‌ಗಳು ಅಕ್ಟೋಬರ್ 7 ರಿಂದ ಸೇವೆ ಒದಗಿಸಲಿವೆ.
'ಸಂತೋಷವು ಪ್ರಯಾಣಿಸುತ್ತಿದೆ' ಎನ್ನುವ ಟ್ಯಾಗ್ ಲೈನ್ನೊಂದಿಗೆ ಸಾರಿಗೆ ನಿಗಮದ ಪಲ್ಲಕ್ಕಿ ರಸ್ತೆಗಿಳಿಯಲು ಸಜ್ಜಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಈ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಸ್ಲೀಪರ್ ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಈಗಾಗಲೇ ಅಂಬಾರಿ ಹೆಸರಿನಲ್ಲಿ ರಾಜ್ಯದಲ್ಲಿ ನಾನ್ ಎಸಿ ಸ್ಲೀಪರ್ ಬಸ್‌ಗಳು ಸೇವೆ ಒದಗಿಸುತ್ತಿದ್ದು ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಕಾರಣ, ಪಲ್ಲಕ್ಕಿ ಹೆಸರಿನಲ್ಲಿ ಹೊಸದಾಗಿ 40 ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಸೇರಿಸಲಾಗುತ್ತಿದೆ.
ಈಗಾಗಲೇ ಕೆಎಸ್ಆರ್ಟಿಸಿ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪಲ್ಲಕ್ಕಿ ಬಸ್‌ಗಳ ವಿಡಿಯೋ ಹಂಚಿಕೊಂಡಿದ್ದು, ವೈರಲ್ ಆಗಿದೆ. ಯಾವುದೇ ಐಷಾರಾಮಿ ಬಸ್‌ಗಳಿಗೆ ಕಡಿಮೆ ಇಲ್ಲದಂತೆ ಪಲ್ಲಕ್ಕಿ ಬಸ್‌ಗಳನ್ನು ವಿನ್ಯಾಸ ಮಾಡಲಾಗಿದೆ.
ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಐಷಾರಾಮಿ ಸೇವೆ ಒದಗಿಸುವ ಬಸ್‌ಗಳಿಗೆ ರಾಜಹಂಸ, ಅಂಬಾರಿ, ಐರಾವತ ಎನ್ನುವ ಸಾಂಸ್ಕೃತಿಕ ಹೆಸರುಗಳನ್ನು ಇಡುವ ಪರಿಪಾಠ ಹೊಂದಿದ್ದು ಈಗ ಕೂಡ ಅದನ್ನೇ ಮುಂದುವರೆಸಿದ್ದು, ಪಲ್ಲಕ್ಕಿ ಎನ್ನುವ ಹೆಸರಿನಲ್ಲಿ ಬಸ್ ಸೇವೆ ಆರಂಭಿಸುತ್ತದೆ.
ಸಿದ್ದರಾಮಯ್ಯ ಅವರಿಂದ ಚಾಲನೆ
ಅಕ್ಟೋಬರ್ 7ರಂದು ಶನಿವಾರ ವಿಧಾನಸೌಧದ ಪೂರ್ವ ದ್ವಾರದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಪಲ್ಲಕ್ಕಿ ಬಸ್‌ಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಲ್ಲಕ್ಕಿ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಪಲ್ಲಕ್ಕಿ ಹೆಸರಿನ 40 ಬಸ್‌ಗಳ ಜೊತೆಗೆ ಒಟ್ಟು 100 ನೂತನ್ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಆಗಸ್ಟ್ 28 ರಂದು ಕಲ್ಯಾಣ ರಥ ಎನ್ನುವ ಬಸ್‌ಗಳನ್ನು ಉದ್ಘಾಟನೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸದಾಗಿ ಹೈಟೆಕ್ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ನ ಬಿಡುಗಡೆ ಮಾಡಿತ್ತು. 40 ಆಸನಗಳನ್ನು ಹೊಂದಿದ್ದು, ಮಲ್ಟಿ ಎಕ್ಸಲ್ ಸ್ಲೀಪರ್ ಕ್ಲಾಸ್ ಬಸ್ ಆಗಿದೆ.
ಪಲ್ಲಕ್ಕಿಗೆ ಮನಸೋತ ಜನತೆ
ಪಲ್ಲಕ್ಕಿ ಬಸ್‌ಗಳ ವಿಡಿಯೋಗಳನ್ನು ನೋಡಿದ ರಾಜ್ಯದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಸೇವೆ ನೀಡುವುದರಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಗೆ ಸಾಟಿಯಿಲ್ಲ ಎಂದು ಹೊಗಳಿದ್ದಾರೆ.












Click it and Unblock the Notifications