ಬೆಂಗಳೂರು-ಹಾಸನ ಡೆಮು ರೈಲು ಸಂಚಾರ; ವೇಳಾಪಟ್ಟಿ
ಬೆಂಗಳೂರು, ಏಪ್ರಿಲ್ 06; ಬೆಂಗಳೂರು-ಹಾಸನ ನಡುವೆ ನೈಋತ್ಯ ರೈಲ್ವೆ ಮತ್ತೆ ಡೆಮು ರೈಲು ಸಂಚಾರ ಆರಂಭಿಸಲಿದೆ. ಕೋವಿಡ್ ಸಂದರ್ಭದಲ್ಲಿ ಈ ರೈಲಿನ ಸಂಚಾರ ಸ್ಥಗಿತವಾಗಿತ್ತು. ಏಪ್ರಿಲ್ 8ರಿಂದ ಈ ರೈಲು ಸಂಚಾರ ಪುನಃ ಆರಂಭವಾಗಲಿದೆ.
ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಹಾಸನದ ತನಕ ಡೆಮು ರೈಲು ಕೋವಿಡ್ ಮೊದಲ ಅಲೆಗೆ ಮೊದಲು ಸಂಚಾರ ನಡೆಸುತ್ತಿತ್ತು. ಬಳಿಕ ಸೋಂಕು ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ನಂತರ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಈಗ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮತ್ತೆ ರೈಲು ಸಂಚಾರ ಆರಂಭಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ. ಆದರೆ ಯಶವಂತಪುರ ಬದಲು ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್) ನಿಲ್ದಾಣದಿಂದ ಹಾಸನಕ್ಕೆ ರೈಲು ಸಂಚಾರ ನಡೆಸಲಿದೆ.
ಹಾಸನ-ಬೆಂಗಳೂರು ರೈಲು ಮಾರ್ಗದ ವಿದ್ಯುದೀಕರಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಆರಂಭವಾಗಬೇಕಿದೆ. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ ಉಭಯ ನಗರಗಳ ನಡುವೆ ಇನ್ನೂ ಹೆಚ್ಚಿನ ರೈಲುಗಳ ಸಂಚಾರ ಆರಂಭಿಸಲು ರೈಲು ಇಲಾಖೆ ತೀರ್ಮಾನಿಸಿದೆ.

ಹಾಸನ-ಬೆಂಗಳೂರು ಡೆಮು ರೈಲು ಸಂಚಾರ
ಬೆಂಗಳೂರು-ಹಾಸನ ನಡುವೆ ಡೆಮು ರೈಲು ಸಂಚಾರ ಏಪ್ರಿಲ್ 8ರಿಂದ ಆರಂಭವಾಗಲಿದೆ. ಭಾನುವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ನಿತ್ಯವೂ ಕೆಎಸ್‌ಆರ್ ಬೆಂಗಳೂರು (ಮಜೆಸ್ಟಿಕ್)- ಹಾಸನ ನಡುವೆ ಡೆಮು ರೈಲು ಸಂಚಾರ ನಡೆಸಲಿವೆ. ಕೋವಿಡ್ ಮೊದಲ ಅಲೆಗೂ ಮೊದಲು ಈ ರೈಲು ಯಶವಂತಪುರ-ಹಾಸನ ನಡುವೆ ಸಂಚಾರ ನಡೆಸುತ್ತಿತ್ತು. ಈಗ ಅದನ್ನು ಮೆಜೆಸ್ಟಿಕ್ ತನಕ ವಿಸ್ತರಣೆ ಮಾಡಲಾಗಿದೆ.

ಡೆಮು ರೈಲಿನ ವೇಳಾಪಟ್ಟಿ
ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 9.45 (ಭಾನುವಾರ ಸಂಚಾವಿಲ್ಲ) ಕ್ಕೆ ಹೊರಡುವ ರೈಲು ಯಶವಂತಪುರಕ್ಕೆ 9.57ಕ್ಕೆ ತಲುಪಲಿದೆ. ಅಲ್ಲಿಂದ 9.59ಕ್ಕೆ ಹೊರಟು 1.45ಕ್ಕೆ ಹಾಸನ ತಲುಪಲಿದೆ.
ಹಾಸನ ರೈಲು ನಿಲ್ದಾಣದಲ್ಲಿ ಅರ್ಧ ಗಂಟೆ ನಿಲುಗಡೆ. ಮಧ್ಯಾಹ್ನ 2.15ಕ್ಕೆ ಹಾಸನದಿಂದ ಹೊರಡುವ ರೈಲು ಸಂಜೆ 6 ಗಂಟೆಗೆ ಕೆಎಸ್ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.

8 ಬೋಗಿಗಳ ಡೆಮು ರೈಲು
8 ಬೋಗಿಗಳನ್ನು ಹೊಂದಿರುವ ಡೆಮು ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ ಮಾರ್ಗವಾಗಿ ಹಾಸನ ತಲುಪಲಿದೆ. ಈ ಮಾರ್ಗದ ಎಲ್ಲಾ 15 ನಿಲ್ದಾಣಗಳಲ್ಲಿಯೂ ರೈಲಿಗೆ ನಿಲುಗಡೆ ಇದೆ.
ಹಾಸನ-ಚಿಕ್ಕಬಣಾವರ ನಡುವಿನ ರೈಲು ಮಾರ್ಗ ವಿದ್ಯುದೀಕರಣಗೊಂಡರೆ ಈ ಡೆಮು ರೈಲಿಗೆ 16 ಬೋಗಿಗಳನ್ನು ಸಹ ಸೇರಿಸಲು ಅವಕಾಶವಿದೆ. ಆಗ ಇನ್ನೂ ಹೆಚ್ಚಿನ ಜನರು ಪ್ರಯಾಣ ನಡೆಸಲು ಅನುಕೂಲವಾಗಲಿದೆ.
Recommended Video


ಬಸ್ ಪ್ರಯಾಣ ದರ ದುಬಾರಿ
ಬೆಂಗಳೂರು ನಗರದಿಂದ ಹಾಸನಕ್ಕೆ ಸರ್ಕಾರಿ, ಖಾಸಗಿ ಬಸ್‌ಗಳು ಸಂಚಾರ ನಡೆಸುತ್ತವೆ. ಕೆಎಸ್ಆರ್‌ಟಿಸಿಯ ಐಷಾರಾಮಿ ಬಸ್‌ಗಳು ಸಹ ಇವೆ. ಆದರೆ ಪ್ರಯಾಣ ದರ ದುಬಾರಿಯಾದ ಕಾರಣ ಜನರು ರೈಲು ಮೊರೆ ಹೋಗಿದ್ದರು. ಆದರೆ ಕೋವಿಡ್ ಪರಿಸ್ಥಿತಿ ಬಳಿಕ ರೈಲು ಸಂಚಾರ ಸ್ಥಗಿತಗೊಂಡಿತ್ತು. ಈಗ ಡೆಮು ರೈಲು ಸಂಚಾರ ಪುನಃ ಆರಂಭಗೊಂಡಿದ್ದು, ನೂರಾರು ಪ್ರಯಾಣಿಕರಿಗೆ ಸಹಾಯಕವಾಗಲಿದೆ.












Click it and Unblock the Notifications