ಸನ್ನಿ ಲಿಯೋನ್ ಬಂದ್ರೆ ಸುಮ್ನಿರಲ್ಲ ಅಂತಿದಾರೆ ರಕ್ಷಣಾ ವೇದಿಕೆ ಹುಡುಗರು!
ಬೆಂಗಳೂರು, ಸೆ29: ಬೆಂಗಳೂರಿನಲ್ಲಿ ನವೆಂಬರ್ 3ರಂದು ಬಾಲಿವುಡ್ ತಾರೆ ಸನ್ನಿ ಲಿಯೋನ್ ನೃತ್ಯ ಕಾರ್ಯಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ವಿರೋಧ ವ್ಯಕ್ತಪಡಿಸಿದೆ.
ಸತತ ಎರಡನೇ ಬಾರಿಯೂ ಸಲ್ಲಿ ಲಿಯೋನ್ ಕಾರ್ಯಕ್ರಮಕ್ಕೆ ವಿಘ್ನ ಎದುರಾಗುವ ಸಾಧ್ಯತೆ ಇದೆ. ನವೆಂಬರ್ 3ರಂದು ಬೆಂಗಳೂರಿನ ಔಟರ್ ರಿಂಗ್ ರಸ್ತೆಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ಬಳಿಯ ವೈಟ್ ಆರ್ಕಿಡ್ ಹೋಟೆಲ್ ನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ನಡೆಯಲಿದ್ದು, ಆ ಕಾರ್ಯಕ್ರಮಕ್ಕೂ ತನ್ನ ವಿರೋಧ ವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಹೇಳಿದೆ.
ಕಳೆದ 2017ರ ಡಿಸೆಂಬರ್ ನಲ್ಲಿ ಇದೇ ಹೋಟೆಲ್ ನಲ್ಲಿ ಇದೇ ಹೋಟೆಲ್ ನಲ್ಲಿ ಸನ್ನಿ ಲಿಯೋನ್ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತಾದರೂ, ಕನ್ನಡ ಪರ ಸಂಘಟನೆಗಳು ನಗರಾದ್ಯಂತ ಭಾರಿ ಹೋರಾಟ ನಡೆದಿದ್ದರಿಂದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು.

ಅಲ್ಲದೆ ವರ್ಷಾಂತ್ಯದ ಕಾರ್ಯಕ್ರಮದ ಅಂಗವಾಗಿ ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜಿಸಿದ್ದರಿಂದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಗುಪ್ತದಳದ ವರದಿ ಹಿನ್ನೆಲೆಯಲ್ಲಿ ಪೊಲೀಸರು ಆಗ ಅನುಮತಿ ನಿರಾಕರಿಸಿದ್ದರು. ಇದೀಗ ಈ ವರ್ಷದ ಕಾರ್ಯಕ್ರಮಕ್ಕೆ ಹಲವು ಷರತ್ತುಗಳನ್ನು ವಿಧಿಸಿ ಪೊಲೀಸರು ಅನುಮತಿ ನೀಡಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ವಿರೋಧ ವ್ಯಕ್ತಪಡಿಸುತ್ತಿದೆ.
ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ ಹೇಳಿಕೆ ನೀಡಿದ್ದು, ಸನ್ನಿ ಲಿಯೋನ್ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ, ಕನ್ನಡ ಹಾಡುಗಳನ್ನು ಬಳಸುವುದಾದರೆ ನಮ್ಮ ಅಭ್ಯಂತರವಿಲ್ಲ ಕನ್ನಡವನ್ನು ನಿರ್ಲಕ್ಷ್ಯ ಮಾಡಿದರೆ ಮಾತ್ರ ಅದನ್ನು ವಿರೋಧಿಸುತ್ತೇವೆ ಎಂದಿದ್ದಾರೆ.
ಅಲ್ಲದೆ ಸನ್ನಿ ಲಿಯೋನ್ ಕಾರ್ಯಕ್ರಮದಲ್ಲಿ ಗಾಯಕ ರಘು ಧೀಕ್ಷಿತ್ ಅವರು ಕನ್ನಡ ಹಾಡುಗಳನ್ನು ಹಾಡುತ್ತಾರೆ ಎಂಬ ಮಾಹಿತಿ ಇದೆ, ಈ ಬಾರಿ ವಿರೋಧ ವ್ಯಕ್ತಪಡಿಸಲ್ಲ ಬದಲಾಗಿ ಕನ್ನಡಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದ್ದೇವೆ ಎಂದು ಸ್ಪಷ್ಟ ಪಡಿಸಿದ್ದಾರೆ.












Click it and Unblock the Notifications