ಟ್ರಾಫಿಕ್ ಸಮಸ್ಯೆ ಇದ್ದರೂ ಜಾಗತಿಕ ಸಮುದಾಯಕ್ಕೆ ಬೆಂಗಳೂರು ಇಷ್ಟ; ಯಾಕೆ?
ಕರ್ನಾಟಕ ರಾಜಧಾನಿನಗರಿ ಬೆಂಗಳೂರು ಜಾಗತಿಕ ನಕ್ಷೆಯಲ್ಲಿರುವ ಒಂದು ಪ್ರಮುಖ ನಗರಿ. ಇಲ್ಲಿನ ಹವಾಮಾನದ ಕಾರಣದಿಂದ ಭಾರತದ ವಿವಿಧೆಡೆಯಿಂದ ಜನರು ಇಲ್ಲಿಗೆ ಬಂದು ನೆಲಸಲು ಬಯಸುತ್ತಾರೆ. ನಮ್ಮ ನಗರಕ್ಕೆ ಐಟಿ ಕಾಲಿಟ್ಟಾಗಿನಿಂದಲೂ ಹೊರಗಿನಿಂದ ಇಲ್ಲಿ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಬೆಂಗಳೂರಿನ ಸ್ಟಾರ್ಟಪ್ ರಾಜಧಾನಿಯೂ ಆಗಿದೆ. ಇದೀಗ ಬ್ಲೂಮ್‌ವರ್ಗ್ ಸಮೀಕ್ಷೆಯೊಂದೂ ಕೂಡ ಬೆಂಗಳೂರಿನ ವಿಶೇಷತೆಯನ್ನು ಖಚಿತಪಡಿಸಿದೆ.
ಈ ಮಾಧ್ಯಮ ಸಂಸ್ಥೆಯ ಸಮೀಕ್ಷೆ ಪ್ರಕಾರ ವಿಶ್ವದ ಆರು ಅತ್ಯುತ್ತಮ ನಗರಗಳಲ್ಲಿ ಬೆಂಗಳೂರೂ ಒಂದು. ಉದ್ಯಮಶೀಲ ವ್ಯಕ್ತಿಗಳಿಗೆ ಮತ್ತು ಹೊರಗಿನ ಜನರಿಗೆ ಬೆಂಗಳೂರು ನೆಚ್ಚಿನ ಸ್ಥಳವೆನ್ನಲಾಗಿದೆ.
ಭಾರತದ ಸಿಲಿಕಾನ್ ಸಿಟಿಯಲ್ಲಿ ಅಧಿಕ ಸಂಬಳದ ಕೆಲಸ ಸಿಗುವುದು ಮತ್ತು ಅಷ್ಟೇನೂ ದುಬಾರಿ ಅಲ್ಲದ ಐಷಾರಾಮಿ ಜೀವನ ಇರುವುದು ಜಾಗತಿಕ ಸಮುದಾಯದ ಗಮನವನ್ನು ಬೆಂಗಳೂರು ಸೆಳೆದಿದೆ ಎಂದು ಬ್ಲೂಮ್‌ಬರ್ಗ್‌ನ ಸಮೀಕ್ಷೆ ಹೇಳುತ್ತದೆ.
ಬೆಂಗಳೂರಿನ ಜೊತೆಗೆ ಮಲೇಷ್ಯಾದ ಕೌಲಾಲಂಪುರ್, ಸ್ಪೇನ್‌ನ ಲಿಸ್ಬನ್, ಯುಎಇಯ ದುಬೈ, ಮೆಕ್ಸಿಕೋ ಸಿಟಿ, ಬ್ರೆಜಿಲ್‌ನ ರಯೋ ಡೀ ಜನೇರೋ ನಗರಗಳೂ ಕೂಡ ಜಾಗತಿಕ ಸಮುದಾಯಗಳ ನೆಚ್ಚಿನ ತಾಣಗಳಾಗಿ ಬೆಳೆಯುತ್ತಿರುವುದು ತಿಳಿದುಬಂದಿದೆ.

ಸ್ಯಾನ್ ಫ್ರಾನ್ಸಿಸ್ಕೋ ಮೀರಿಸುವ ಬೆಂಗಳೂರು
ಬೆಂಗಳೂರು ಭಾರತದ ಸ್ಟಾರ್ಟಪ್ ಕ್ಯಾಪಿಟಲ್ ಎಂದೇ ಖ್ಯಾತವಾಗಿದೆ. ಅನೇಕ ಸ್ಟಾರ್ಟಪ್ ಕಂಪನಿಗಳು ಬೆಂಗಳೂರಿನಲ್ಲಿ ಆರಂಭಗೊಂಡಿವೆ. ಲಂಡನ್, ಸ್ಯಾನ್ ಫ್ರಾನ್ಸಿಸ್ಕೋದಂಥ ಪ್ರಮುಖ ನಗರಗಳಿಗಿಂತ ಬೆಂಗಳೂರಿಗೆ ಬಂಡವಾಳ ವೇಗವಾಗಿ ಹರಿದುಬರುತ್ತಿದೆ. ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ.
ಬೆಂಗಳೂರಿಗೆ 2016ರಲ್ಲಿ 1.3 ಬಿಲಿಯನ್ ಡಾಲರ್ (ಸುಮಾರು 10 ಸಾವಿರ ಕೋಟಿ ರೂಪಾಯಿ) ಬಂಡವಾಳ ಬಂದಿತ್ತು. 2020ರಲ್ಲಿ ಆ ಪ್ರಮಾಣ 7.2 ಬಿಲಿಯನ್ ಡಾಲರ್ (57 ಸಾವಿರ ಕೋಟಿ ರೂಪಾಯಿ) ಗೆ ಏರಿಕೆ ಆಗಿದೆ ಎಂದು ಬ್ಲೂಮ್‌ಬರ್ಗ್‌ನ ವರದಿ ಮಾಹಿತಿ ನೀಡಿದೆ. ಅಂದರೆ ಕೇವಲ ನಾಲ್ಕೈದು ವರ್ಷದಲ್ಲಿ ಜಾಗತಿಕ ಹೂಡಿಕೆ ಸಂಸ್ಥೆಗಳಿಂದ ಬೆಂಗಳೂರಿನಗೆ ಹರಿದುಬಂದ ಬಂಡವಾಳದಲ್ಲಿ ಐದು ಪಟ್ಟು ಹೆಚ್ಚಳವಾಗಿದೆ. ಈ ಕಾರಣದಲ್ಲಿ ಬೆಂಗಳೂರಿನ ಐಟಿ ಮತ್ತು ಸ್ಟಾರ್ಟಪ್ ಕಂಪನಿಗಳು ಹುಲುಸಾಗಿ ಬೆಳೆಯುತ್ತಿವೆ.

ಬೆಂಗಳೂರಿನ ಆಕರ್ಷಣೆಗಳು
ಐಟಿ ಕಂಪನಿಗಳ ಪ್ರವಾಹ ಒಂದೆಡೆಯಾದರೆ ಬೆಂಗಳೂರಿನ ಹವಾಮಾನ, ಇಲ್ಲಿನ ಸುರಕ್ಷಿತ ವಾತಾವರಣ ಗಮನ ಸೆಳೆದಿದೆ. ಬೆಂಗಳೂರು ಬಹಳ ಸುರಕ್ಷಿತ ಸ್ಥಳ ಎಂಬುದು ಜಾಗತಿಕ ಸಮುದಾಯದ ಭಾವನೆ. ಹಾಗೆಯೇ, ಇಲ್ಲಿನ ಉತ್ತಮ ಗುಣಮಟ್ಟದ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಮನರಂಜನಾ ಸ್ಥಳಗಳು ಯಥೇಚ್ಛವಾಗಿರುವುದೂ ಕೂಡ ಪ್ರಮುಖ ಆಕರ್ಷಣೆ ಎನಿಸಿದೆ.

ಸಿಲಿಕಾನ್ ವ್ಯಾಲಿ ವರ್ಸಸ್ ಸಿಲಿಕಾನ್ ಸಿಟಿ
ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಸಿಲಿಕಾನ್ ವ್ಯಾಲಿಯಿಂದ ಬಹಳ ಕಂಪನಿಗಳು ಬೆಂಗಳೂರಿಗೆ ಬರಲು ಉತ್ಸುಕವಾಗಿವೆ. ಇದಕ್ಕೆ ಕಾರಣ ಸಿಲಿಕಾನ್ ವ್ಯಾಲಿಯಲ್ಲಿ ಮನೆಮಾಡಿರುವ ಅಪರಾಧ ವಾತಾವರಣ. ಹಾಗೆಯೇ, ಅಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆಯೂ ಅಸಮಾಧಾನಗಳಿವೆ. ಹೀಗಾಗಿ, ಬೆಂಗಳೂರಿಗೆ ಬರಲು ಜನರು ಮನಸು ಮಾಡುತ್ತಿದ್ದಾರೆನ್ನಲಾಗಿದೆ.

ಟ್ರಾಫಿಕ್ ಸಮಸ್ಯೆ ಇದ್ದರೂ ಪರವಾಗಿಲ್ಲ
ಬೆಂಗಳೂರು ನಗರ ಟ್ರಾಫಿಕ್ ಸಮಸ್ಯೆಗಳಿಗೆ ಬಹಳ ಕುಖ್ಯಾತವಾಗಿರುವುದು ಹೌದು. ಈಗಂತೂ ಇಡೀ ನಗರದಲ್ಲಿ ಬಹುತೇಕ ಕಡೆ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದ್ದು, ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಅದರಲ್ಲೂ ಐಟಿ ಕಂಪನಿಗಳಿರುವ ವೈಟ್ ಫೀಲ್ಡ್ ಇತ್ಯಾದಿ ಕಡೆಯಂತೂ ವಾಹನ ಓಡಿಸುವುದೇ ಹರಸಾಹಸದ ಕೆಲಸ. ಈ ವಿಚಾರ ಗೊತ್ತಿದ್ದೂ ಜಾಗತಿಕ ಸಮುದಾಯಕ್ಕೆ ಬೆಂಗಳೂರು ನೆಚ್ಚಿನ ಸ್ಥಳ ಎನಿಸಿರುವುದು ಮಾತ್ರ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ ಬೆಂಗಳೂರಿನಲ್ಲಿ ಸುರಕ್ಷಿತ ಜೀವನ ನಡೆಸಲು ಇರುವ ವಾತಾವರಣ ಎನ್ನಲಾಗಿದೆ.
"ಬೆಂಗಳೂರಿನ ಹಲವು ರಸ್ತೆಗಳಲ್ಲಿ ಏನಾದರೂ ಕಾಮಗಾರಿ ನಡೆಯುತ್ತಿದೆ. ಅದರೆ, ಹೊರಗಿನ ಜನರಿಗೆ ಭದ್ರತೆಯ ಕಾರಣಕ್ಕೆ ಬೆಂಗಳೂರು ಇಷ್ಟವಾಗುತ್ತದೆ" ಎಂದು ಬ್ಲೂಂಬರ್ಗ್‌ನ ಸಮೀಕ್ಷೆ ತಿಳಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications