Namma Metro: 2031ರ ವರೆಗಿನ ನಮ್ಮ ಮೆಟ್ರೋ ಯೋಜನೆಗಳ ವಿವರ ಇಲ್ಲಿದೆ
Namma Metro: ಬೆಂಗಳೂರಿನ ಜೀನನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಈಗಾಗಲೇ ನಗರ ಅಭಿವೃದ್ಧಿ ಆದಂತೆ ಮೆಟ್ರೋ ಕೂಡ ವಿಸ್ತರಣೆ ಆಗುತ್ತಿದೆ. ಹಾಗಾದರೆ 2031ರ ವರೆಗೆ ಮೆಟ್ರೋಗೆ ಸಂಬಂಧಿಸಿದಂತೆ ಯಾವೆಲ್ಲ ಯೋಜನೆಗಳು ಇವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರಿನಲ್ಲಿ ಐಟಿ ಕಂಪನಿ ಉದ್ಯೋಗಿಗಳು ಸೇರಿದಂತೆ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋವನ್ನೇ ಅವಲಂಬನೆ ಮಾಡಿದ್ದಾರೆ. ಈ ಹಿನ್ನೆಲೆ ಹಲವೆಡೆ ಮೆಟ್ರೋ ವಿಸ್ತರಣೆ ಕಾಮಗಾರಿಗಳು ನಡೆಯುತ್ತಿವೆ. ಹಾಗಾದರೆ 2031ರ ವರೆಗಿನ ಯಾವೆಲ್ಲ ಯೋಜನೆಗಳು ಆಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕಳೆದ ಮಂಗಳವಾರ ಅಂದರೆ 2024 ನಮ್ಮ ಮೆಟ್ರೋದಲ್ಲಿ 8.26 ಲಕ್ಷ ಪ್ರಯಾಣಿಕರು ಪ್ರಯಾಣಿಸುವ ಮೂಲ ಹೊಸ ದಾಖಲೆ ನಿರ್ಮಾಣ ಆಗಿತ್ತು. 2022ರ ಆಗಸ್ಟ್ 15ರಂದು 8.25 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು, ಇದುವರೆಗಿನ ದಾಖಲೆ ಆಗಿತ್ತು. ಇನ್ನು ಇದೇ ಆಗಸ್ಟ್ 6ರಂದು ಪಕ್ಷದ ಸಮಾವೇಶಕ್ಕೆ ಕಾಂಗ್ರೆಸ್ ನಮ್ಮ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಿತ್ತು. ಆದ್ದರಿಂದ ಅಂದು ಮೆಟ್ರೋ ಟಿಕೆಟ್ ಸಂಗ್ರಹದಲ್ಲಿ ದಾಖಲೆ ನಿರ್ಮಿಸಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳ ಆಗುತ್ತಲಿದ್ದು, ಈ ಹಿನ್ನೆಲೆ ಮೆಟ್ರೋ ಮಾರ್ಗ ವಿಸ್ತರಣೆ ಆಗುತ್ತಲೇ ಇದೆ. ಈ ವರ್ಷದ ಜೂನ್ 19ರಂದು 8 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದರು. ಇನ್ನು ಜನವರಿಯಲ್ಲಿ 7.01 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದರೆ, ಜೂನ್‌ನಲ್ಲಿ 7.45 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು.
2023ರ ಅಕ್ಟೋಬರ್‌ನಲ್ಲಿ ನೇರಳೆ ಮಾರ್ಗ ಸಂಪೂರ್ಣವಾಗಿ ಆರಂಭವಾದ ಬಳಿಕ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಾ ಬಂದಿತ್ತು. ಇದೀಗ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮಾರ್ಗ 73.81 ಕಿಲೋ ಮೀಟರ್‌ಗಳಷ್ಟು ಇದ್ದು, ದೇಶದಲ್ಲೇ ಎರಡನೇ ಅತೀ ಉದ್ದದ ಮಾರ್ಗ ಆಗಿದೆ. ಜೊತೆಗೆ ಮೆಟ್ರೋದ 101.74 ಕಿಲೋ ಮೀಟರ್ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, 2024ರ ಡಿಸೆಂಬರ್ ವೇಳೆಗೆ 22.29 ಕಿ.ಮೀ. ಪ್ರಯಾಣಕ್ಕೆ ಸಿದ್ದವಾಗುವ ಸಾಧ್ಯತೆಗಳಿವೆ.
2025ರ ಡಿಸೆಂಬರ್ ಅಂತ್ಯಕ್ಕೆ 21.26 ಕಿಮೀ. ಮತ್ತು ಜೂನ್ 2026ರ ವೇಳೆಗೆ 58.19 ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಹೆಚ್ಚುವರಿಯಾಗಿ 81.24 ಕಿ.ಮೀ. ಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ ಸಿದ್ದವಾಗುತ್ತಿದೆ. ಈ ಮಾರ್ಗವೂ ಸೇರ್ಪಡೆಯಾದರೆ 2031ರ ವೇಳೆಗೆ ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗ 256.79 ಕಿ.ಮೀ. ಮಾರ್ಗ ರಚನೆಯಾಗಲಿದೆ. ಅಲ್ಲದೆ, 170.41 ಕಿ.ಮೀ. ಮಾರ್ಗಕ್ಕೆ ಸಾಧ್ಯಾಸಾಧ್ಯತೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಇದೀಹ ಬಿಎಂಆರ್‌ಸಿಎಲ್ 6 ಕೋಚ್‌ಗಳ 57 ರೈಲುಗಳನ್ನು ಓಡಿಸುತ್ತಿದೆ. ನೇರಳೆ ಮಾರ್ಗದಲ್ಲಿ 34 ಮತ್ತು ಹಸಿರು ಮಾರ್ಗದಲ್ಲಿ 23 ರೈಲುಗಳು ಸಂಚಾರ ನಡೆಸುತ್ತಿವೆ. ನೇರಳೆ ಮಾರ್ಗದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಹಸಿರು ಮಾರ್ಗದ ಕೆಲವು ರೈಲುಗಳನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪೀಕ್ ಅವರ್‌ನಲ್ಲಿ ನಿರ್ವಹಣೆ ಮಾಡಲು ಪರಿಶೀಲನೆ ಮಾಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ತಿಳಿಸಿದ್ದಾರೆ. ಬೆಂಗಳೂರಿನ ಅತೀ ಹೆಚ್ಚು ಜನದಟ್ಟಣೆ ಇರುವ ನಿಲ್ದಾಣ ಎಂದರೆ ಮೆಜೆಸ್ಟಿಕ್ ನಿಲ್ದಾಣ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಮಾರ್ಗಗಳನ್ನು ಬದಲಾಯಿಸಬಹುದಾಗಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಿದಂತೆ ಹೆಚ್ಚುವರಿಯಾಗಿ ಲಿಫ್ಟ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಇಲ್ಲಿ ಅವಘಡಗಳನ್ನು ತಪ್ಪಿಸಲು ಸ್ಕ್ರೀನ್ ಡೋರ್‌ಗಳನ್ನು ಅಳವಡಿಸುವ ಚಿಂತನೆ ನಡೆಸಲಾಗಿದೆ. ಬೇಡಿಕೆ ಹೆಚ್ಚಿದ್ದರೂ ಈ ವರ್ಷ ಹೊಸದಾಗಿ ಹೊಸ ರೈಲುಗಳನ್ನು ಸೇರ್ಪಡೆ ಮಾಡಲು ಸಾಧ್ಯವಾಗುತ್ತಿಲ್ಲ. ಮೆಟ್ರೋ ಕೋಚ್‌ಗಳನ್ನು ಒದಗಿಸಲು ಗುತ್ತಿಗೆ ಪಡೆದಿರುವ ಚೀನಾದ ಸಿಆರ್‌ಆರ್‌ಸಿ ನಂಜಾಗ್ ಪುಹೆನ್ ಕೋ. ಲಿ ಮತ್ತು ಭಾರತದ ತಿತಾಗಡ್ ರೈಲ್ ಸಿಸ್ಟಂ 2025ರ ವೇಳೆಗೆ ನೇರಳೆ ಮತ್ತು ಹಸಿರು ಮಾರ್ಗಗಳೆರಡಕ್ಕೂ 21 ರೈಲುಗಳನ್ನು ಒದಗಿಸಲಿದೆ.
ಈ ವರ್ಷದಲ್ಲಿ ಅತಿ ಹೆಚ್ಚು ಮಂದಿ ಪ್ರಯಾಣಿಸಿದ ದಿನಗಳನ್ನು ನೋಡುವುದಾದರೆ, ಆಗಸ್ಟ್ 6ರಂದು 8.26 ಲಕ್ಷ ಪ್ರಯಾಣಿಕರು, ಜೂನ್ 19ರಂದು 8,08,071 ಪ್ರಯಾಣಿಕರು, ಫೆಬ್ರವರಿ 24ರಂದು 7,59,725 ಪ್ರಯಾಣಿಕರು ಹಾಗೂ ಜನವರಿ 25ರಂದು 7,82,435 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಸರಾಸರಿ ನೋಡುವುದಾದರೆ, ಜೂನ್‌ನಲ್ಲಿ 7,45,659 ಪ್ರಯಾಣಿಕರು, ಮೇ ನಲ್ಲಿ 7,18,170 ಪ್ರಯಾಣಿಕರು, ಫೆಬ್ರವರಿಯಲ್ಲಿ 7.05 ಲಕ್ಷ ಮತ್ತು ಜನವರಿಯಲ್ಲಿ 7.01 ಲಕ್ಷ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ ಅಂತಾ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.












Click it and Unblock the Notifications