New Factory: ಬೆಂಗಳೂರಿನಲ್ಲಿ ₹390 ಕೋಟಿ ವೆಚ್ಚದಲ್ಲಿ IBC ಗಿಗಾ ಫ್ಯಾಕ್ಟರಿ, ವಿದೇಶಗಳಿಗೆ 20% ರಫ್ತು
ಬೆಂಗಳೂರು, ಜನವರಿ 15: ವಿದ್ಯುತ್ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬೇಕಾಗುವ ಲೀಥಿಯಂ-ಅಯಾನ್ ಬ್ಯಾಟರಿಗಳನ್ನು ತಯಾರಿಸುವ ಇಂಟರ್ನ್ಯಾಷನಲ್ ಬ್ಯಾಟರಿ ಕಂಪನಿಯ (ಐಬಿಸಿ) ಗಿಗಾ ಫ್ಯಾಕ್ಟರಿಯ ಸ್ಥಳೀಯ ಘಟಕವನ್ನು ದೇವನಹಳ್ಳಿಯಲ್ಲಿ ತಲೆ ಎತ್ತಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಉದ್ಯೋಗ ಸೃಷ್ಟಿ ಜೊತೆಗೆ ರಫ್ತಿನಲ್ಲಿ ಬೆಳವಣಿಗೆ ಸಾಧಿಸಲು ಈ ಕೈಗಾರಿಕೆ ಉತ್ತೇಜನ ನೀಡಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ KIADB ಐಟಿಐಆರ್ ಕೈಗಾರಿಕಾ ಪ್ರದೇಶದಲ್ಲಿ ಇಂಟರ್ನ್ಯಾಷನಲ್ ಬ್ಯಾಟರಿ ಕಂಪನಿಯ (ಐಬಿಸಿ) ಗಿಗಾ ಫ್ಯಾಕ್ಟರಿ ನಿರ್ಮಾಣಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. ಕಂಪನಿ ಹೇಗೆ ಬ್ಯಾಟರಿ ತಯಾರಿಸುತ್ತದೆ ಎಂಬುದರ ಪ್ರದರ್ಶನವನ್ನು ಸಚಿವರು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ದೇವನಹಳ್ಳಿ ಭಾಗದಲ್ಲಿ ಮೊದಲ ಹಂತದಲ್ಲಿ 390 ಕೋಟಿ ರೂ. ಹೂಡಿಕೆ ಮಾಡುತ್ತಿದೆ. 300 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಲ್ಲಿ ಉತ್ಪಾದಿಸಲಾಗುವ ಬ್ಯಾಟರಿಗಳ ಪೈಕಿ ಶೇಕಡ 20ರಷ್ಟನ್ನು ಅಮೆರಿಕ ಮತ್ತು ಯೂರೋಪಿನ ದೇಶಗಳಿಗೆ ರಫ್ತು ಮಾಡಲಾಗುವುದು ಎಂದರು.
ಫಾಕ್ಸ್-ಕಾನ್ ಸಮೀಪ ಈ ಕಾರ್ಖಾನೆ
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಐಬಿಸಿ ಘಟಕಕ್ಕೆ 10 ಎಕರೆ ಜಾಗ ಕೊಡಲಾಗಿದೆ. ಫಾಕ್ಸ್-ಕಾನ್ ಸಂಸ್ಥೆಯ ಸಮೀಪದಲ್ಲೇ ಇದು ಅಸ್ತಿತ್ವಕ್ಕೆ ಬರಲಿದೆ. ಮುಂದಿನ ಒಂಬತ್ತು ತಿಂಗಳಲ್ಲಿ ಈ ಘಟಕವು ಕಾರ್ಯಾಚರಣೆ ಆರಂಭಿಸಲಿದೆ. ಇಲ್ಲೇ ಬ್ಯಾಟರಿಗಳನ್ನು ತಯಾರಿಸಿ, ಇಲ್ಲಿಂದಲೇ ದೇಶ-ವಿದೇಶಗಳಿಗೂ ರವಾನಿಸಲಾಗುವುದು.

ಸದ್ಯಕ್ಕೆ ಐಬಿಸಿ ಕಂಪನಿಯು ದಕ್ಷಿಣ ಕೊರಿಯಾದಲ್ಲಿ ಸೆಲ್ಸ್ ಉತ್ಪಾದಿಸಿ, ಅವುಗಳನ್ನು ಇಲ್ಲಿಗೆ ತಂದು ಪೂರ್ಣ ಪ್ರಮಾಣದ ಬ್ಯಾಟರಿಗಳನ್ನು ತಯಾರಿಸುತ್ತಿದೆ. ಈ ಘಟಕ ಕಾರ್ಯಾರಂಭ ಆದ ನಂತರ ಇಲ್ಲೇ ಸೆಲ್ ಗಳ ಉತ್ಪಾದನೆ ಕೂಡ ಆಗಲಿದೆ. ಇದು ದೇಶದಲ್ಲೇ ಮೊದಲ ಸೆಲ್ ಉತ್ಪಾದನಾ ಘಟಕವಾಗಲಿದೆ. ಮುಂಬರುವ ದಿನಗಳಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳ ಜತೆಗೆ ಉಳಿದ ವಾಹನಗಳಿಗೂ ಇದು ಬ್ಯಾಟರಿ ಪೂರೈಸಲಿದೆ ಎಂದು ಅವರು ವಿವರಿಸಿದರು.
ಭಾರತದಲ್ಲಿ ಶಿಕ್ಷಣ ಹಾಗೂ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ತರಬೇತಿ ಪಡೆದ ಯುವ ಉದ್ಯಮಿಗಳು ಐಬಿಸಿ ಕಂಪನಿ ಸ್ಥಾಪಿಸಿ, ಬ್ಯಾಟರಿಗಳ ವಿನ್ಯಾಸ, ಉತ್ಪಾದನೆಗೆ ಆದ್ಯತೆ ಕೊಟ್ಟಿದ್ದಾರೆ. ಹಾಗೆಯೇ ಭಾರತದ ಅಗತ್ಯಕ್ಕೆ ಹೊಂದುವ ಹಾಗೆ ವಿನ್ಯಾಸ ಮಾಡಿರುವುದು ಮೆಚ್ಚುವಂತಹದ್ದು ಎಂದು ಸಚಿವರು ಹೇಳಿದರು.
ರೆಟ್ರೋಫಿಟ್ ಬ್ಯಾಟರಿ ತಯಾರಿಕೆಯಿಂದ ಬಲ
ಇದು ಭಾರತದಲ್ಲಿ ಇಂತಹ ಪ್ರಪ್ರಥಮ ಯೋಜನೆಯಾಗಿದೆ. ಇಲ್ಲಿ ರೆಟ್ರೋಫಿಟ್ ಬ್ಯಾಟರಿಗಳನ್ನು ಕೂಡ ತಯಾರಿಸಲಾಗುವುದು. ಇದರಿಂದ ರಾಜ್ಯದ ಆರ್ಥಿಕತೆಗೆ ಹೊಸ ಬಲ ಬರಲಿದ್ದು, ಚೀನಾದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಅವರು ವಿವರಿಸಿದ್ದಾರೆ.
ನಾವು ಸುಸ್ಥಿರ, ತಂತ್ರಜ್ಞಾನಾಧಾರಿತ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಆರ್ಥಿಕತೆಯನ್ನು ಕಟ್ಟುವ ಗುರಿ ಇಟ್ಟುಕೊಂಡಿದ್ದೇವೆ. ಇನ್ನೊಂದೆಡೆಯಲ್ಲಿ, ಹಸಿರು ಇಂಧನ ಬಳಕೆಗೆ ಉತ್ತೇಜನ ಕೊಡುತ್ತಿದ್ದೇವೆ. ಐಬಿಸಿ ಗಿಗಾ ಫ್ಯಾಕ್ಟರಿಯು ಈ ಪರಿವರ್ತನೆಯ ಮೈಲುಗಲ್ಲಾಗಿದೆ. ಇದರಿಂದಾಗಿ ರಾಜ್ಯವು ಇಂಧನ ಕ್ಷೇತ್ರದ ಸಂಶೋಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು.












Click it and Unblock the Notifications