ಮೇ 12ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ
ಬೆಂಗಳೂರು, ಮೇ 9 : ಸೋಮವಾರ ಮೇ 12ರಂದು 2013-14ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಇಂಟರ್ನೆಟ್ಟಿನಲ್ಲಿ ಪ್ರಕಟವಾಗುವುದು ಖಚಿತವಾಗಿದೆ. ಎಂದಿನಂತೆ ಒನ್ಇಂಡಿಯಾ ಕನ್ನಡ ಮತ್ತು ಕರಿಯರ್ ಇಂಡಿಯಾ ವೆಬ್ ತಾಣಗಳಲ್ಲಿ ಫಲಿತಾಂಶ ಅಂಕಪಟ್ಟಿಗಳ ಸಮೇತ ಪ್ರಕಟವಾಗಲಿದೆ.
ಎಸ್ಸೆಸ್ಸೆಲ್ಸಿ ಫಲಿತಾಂಶ Now Online
ಮೇ 12ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸುವ ವಿಷಯವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಿರಿಯ ಸಹಾಯಕ ನಿರ್ದೇಶಕರಾದ ಬಿ.ಎಚ್. ಗಿರಿಜಾ ಅವರು ಒನ್ಇಂಡಿಯಾ ಕನ್ನಡಕ್ಕೆ ಶನಿವಾರ ತಿಳಿಸಿದರು. ಫಲಿತಾಂಶ ಅಂತರ್ಜಾಲದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಕಟವಾಗಲಿದೆ. ಮೇ 13ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಸಿಗಲಿದೆ.

2014ನೇ ಸಾಲಿನಲ್ಲಿ 8,26,269 ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ 4,11,007 ಬಾಲಕರು ಮತ್ತು 3,73,292 ಬಾಲಕಿಯರಿದ್ದು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಇವರಲ್ಲಿ 7.63 ಲಕ್ಷ ವಿದ್ಯಾರ್ಥಿಗಳು ಹೊಸಬರು, 21,670 ಖಾಸಗಿ ವಿದ್ಯಾರ್ಥಿಗಳು ಮತ್ತು 41,629 ವಿದ್ಯಾರ್ಥಿಗಳು ಮರುಪರೀಕ್ಷೆ ಬರೆದಿದ್ದರು. ಈ ಬಾರಿ ಮಾರ್ಚ್ 28ರಿಂದ ಏಪ್ರಿಲ್ 9ರವರೆಗೆ ಪರೀಕ್ಷೆಗಳು ಜರುಗಿದ್ದವು. ಏಪ್ರಿಲ್ 30ರಂದು ಮೌಲ್ಯ ಮಾಪನ ಪ್ರಕ್ರಿಯೆ ಮುಕ್ತಾಯವಾಗಿತ್ತು.
ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ಪ್ರಥಮ ಸ್ಥಾನ ಗಳಿಸಿತ್ತು, ಬೀದರ್ ಕೊನೆಯ ಸ್ಥಾನ ಪಡೆದಿತ್ತು. ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮೇ 8ರಂದು ಪ್ರಕಟವಾಗಿದೆ. ಪಿಯುಸಿಯಲ್ಲಿ ಎಂದಿನಂತೆ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದ್ದರೆ ಬೀದರ್ ಕಡೆಯಲ್ಲಿದೆ.












Click it and Unblock the Notifications