Bengaluru Bandh : ಬೆಂಗಳೂರು ಮತ್ತು ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ ಎಂದ ಕರ್ನಾಟಕ ರಕ್ಷಣಾ ವೇದಿಕೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್ ಮತ್ತು ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಎರಡೂ ಬಂದ್‌ಗಳಿಗೆ ನಾವು ಬೆಂಬಲ ಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ಪಷ್ಟಪಡಿಸಿದೆ.
ಈ ಬಗ್ಗೆ ಅಧಿಕೃತ ಪತ್ರ ಬರೆದಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಕಾವೇರಿ ನೀರು ವಿಚಾರದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ, ಆದರೆ ಯಾವುದೇ ಬಂದ್‌ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಕಾವೇರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ಮತ್ತು ಸೆಪ್ಟೆಂಬರ್ 29 ರಂದು ಹಲವು ಸಂಘಟನೆಗಳು ಪ್ರತ್ಯೇಕವಾಗಿ ಕರೆ ನೀಡಿರುವ ಬಂದ್ ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇರುವುದಿಲ್ಲ. ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ರಾಜ್ಯಾದ್ಯಂತ ಮುಂದುವರೆಯುತ್ತದೆ ಎಂದು ಹೇಳಿದೆ.
ಸೋಮವಾರ ಬೆಳಗ್ಗೆ ಸಭೆ ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ಉನ್ನತಾಧಿಕಾರ ಸಮಿತಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದು ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲದೆ ಬಂದ್‌ಗೆ ಬೆಂಬಲ ನೀಡದೇ ಇರಲು ಕಾರಣಗಳನ್ನು ಕೂಡ ಕರವೇ ನೀಡಿದೆ.
ರಕ್ಷಣಾ ವೇದಿಕೆ ಹೇಳಿದ್ದೇನು?
ಕಾವೇರಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ಮತ್ತು 29ರಂದು ಹಲವು ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್, ಕರ್ನಾಟಕ ಬಂದ್ ಇತ್ಯಾದಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುವುದಿಲ್ಲ. ಆದರೆ ಈಗಾಗಲೇ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟ ಪ್ರತಿದಿನವೂ ನಡೆಯಲಿದ್ದು, ಸೆಪ್ಟೆಂಬರ್ 26ರಂದು ಮಂಗಳವಾರ ವೇದಿಕೆಯ ಗಾಂಧಿನಗರ ಕಚೇರಿ ಆವರಣದಿಂದ ವೇದಿಕೆ ಕಾರ್ಯಕರ್ತರು ಮೆರವಣಿಗೆ ಹೊರಟು ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಯಾವುದೇ ಚಳವಳಿ ಕೈಗೆತ್ತಿಕೊಂಡರೂ ಜನಜಾಗೃತಿ ಮೂಡಿಸುವುದನ್ನು ಮೊದಲನೇ ಆದ್ಯತೆಯಾಗಿ ತೆಗೆದುಕೊಳ್ಳುತ್ತದೆ. ದಿಢೀರನೆ ಬಂದ್ ಗೆ ಕರೆ ನೀಡಿ ಜನಸಾಮಾನ್ಯರಿಗೆ ತೊಂದರೆ ನೀಡುವುದನ್ನು ಒಪ್ಪಲ್ಲ, ಬಂದ್ ಹೋರಾಟದ ಕೊನೆಯ ಅಸ್ತ್ರವಾಗಿರಬೇಕು ಎಂದು ಹೇಳಿದೆ.
ಎರಡೂ ದಿನಗಳ ಬಂದ್ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯಾವುದೇ ಪದಾಧಿಕಾರಿ, ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲ್ಲ. ಬಂದ್‌ಗೆ ಸಂಬಂಧಪಟ್ಟಂತೆ ಯಾವುದೇ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಕಾವೇರಿಗಾಗಿ ನಮ್ಮ ಪ್ರಜಾಸತ್ತಾತ್ಮಕ ಮಾದರಿಯ ಹೋರಾಟಗಳು ಮುಂದುವರೆಯುತ್ತವೆ ಎಂದು ಕರವೇ ಹೇಳಿದೆ.
ಸುಮಾರು ಏಳು ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶ ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.












Click it and Unblock the Notifications