New Year celebration: ಹೊಸ ವರ್ಷಾಚರಣೆ ಬಗ್ಗೆ ಗುಡ್‌ನ್ಯೂಸ್ ಕೊಟ್ಟ ಗೃಹ ಸಚಿವ ಪರಮೇಶ್ವರ್
ಹೊಸ ವರ್ಷದ ಆಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಗೃಹ ಸಚಿವ ಜಿ.ಪರಮೇಶ್ವರ್ ಅವರು ಇಂದು ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಇನ್ನು ಈ ಬಾರಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂಬಂಧ ಪೊಲೀಸರಿಗೆ ವಿಶೇಷ ಸೂಚನೆ ನೀಡಿದ್ದು, ತಮ್ಮ ವ್ಯಾಪ್ತಿಯಲ್ಲಿ ಏನೇ ಅಹಿತಕರ ಘಟನೆಗಳು ನಡೆದರೂ ಅದಕ್ಕೆ ಆಯಾ ಡಿಸಿಪಿಗಳೇ ಹೊಣೆ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಬಾರಿ ಹೊಸ ವರ್ಷಾಚರಣೆ ವೇಳೆ ಡ್ರಗ್ಸ್ ಸೇವನೆ ಮೇಲೆ ಪೊಲೀಸರು ಹದ್ದಿನಕಣ್ಣಿಡಬೇಕು. ಸಂಭ್ರಮಾಚರಣೆಗೂ ಮುನ್ನವೇ ಡ್ರಗ್ ಪೆಡ್ಲರ್‌ಗಳ ಮೇಲೆ ನಿಗಾ ಇರಿಸಬೇಕು. ಹೊಸ ವರ್ಷಕ್ಕೆ ಡ್ರಗ್ಸ್ ಸೇವನೆಗೆ ಬ್ರೇಕ್ ಹಾಕಬೇಕು ಎಂದು ಪೊಲೀಸರಿಗೆ ಗೃಹ ಸಚಿವ ಜಿ.ಪರಮೇಶ್ವರ್ ಖಡಕ್ ಸೂಚನೆಗಳನ್ನು ನೀಡಿದ್ದಾರೆ.

ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹೊಸವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ ಪೊಲೀಸರು ಎಲ್ಲ ಕಡೆ ನಿಗಾ ಇಡಬೇಕು ಎಂದು ಸೂಚನೆ ನೀಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಆಯಾ ವಲಯದ ಡಿಸಿಪಿಗಳನ್ನೇ ಹೊಣೆ ಮಾಡಲಾಗುತ್ತೆ. ಅವರ ವ್ಯಾಪ್ತಿಯಲ್ಲಿ ಏನೇನು ಮಾಡಬೇಕು ಎಂಬುದನ್ನು ಪೊಲೀಸರೇ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
ಕ್ರಿಸ್‌ಮಸ್ ಆಚರಣೆ ಹಿನ್ನೆಲೆ ಪೊಲೀಸರು ಗುಪ್ತದಳ ಇಲಾಖೆ ಜೊತೆಗೆ ನಿರಂತರ ಸಂಪರ್ಕದಲ್ಲಿರಿ. ಈ ಸಂಭ್ರಮಾಚರಣೆ ವೇಳೆ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಹೊಸ ವರ್ಷ ಆಚರಿಸುವವರಿಗೆ ಯಾವುದೇ ತೊಂದರೆ ಮಾಡಬೇಡಿ, ಬದಲಾಗಿ ಅವರಿಗೆ ಸೂಕ್ತ ರಕ್ಷಣೆ ಒದಗಿಸಿ. ಒಂದು ವೇಳೆ ಯಾರಾದರೂ ಕಿರಿಕಿರಿ ಮಾಡಿದರೆ ಅವರ ಮೇಲೆ ಅಲ್ಲಿಯೇ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಇರುವ ಹಿನ್ನೆಲೆ ಹೆಚ್ಚಿನ ಪೊಲೀಸರು ಅಲರ್ಟ್ ಆಗಿರಬೇಕು. ಬಂದೋಬಸ್ತ್‌ಗೆ ಎಲ್ಲೆಡೆ ಪೊಲೀಸರನ್ನ ನಿಯೋಜಿಸಬೇಕು. ಹಾಗಾಗಿ ಈ ಅವಧಿಯಲ್ಲಿ ಪೊಲೀಸರಿಗೆ ರಜೆ ನೀಡುವುದು ಬೇಡ. ಆದರೆ ಅನಿವಾರ್ಯ ಹಾಗೂ ತುರ್ತು ಸಂದರ್ಭಗಳಿದ್ದರೆ ಮಾತ್ರವೇ ರಜೆಗೆ ಅನುಮತಿ ಕೊಡಿ. ಒಂದು ವೇಳೆ ನಗರದಲ್ಲಿ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ವರದಿಯಾದರೆ ಅದಕ್ಕೆ ಸಂಬಂಧಪಟ್ಟ ಡಿಸಿಪಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಾರಿ ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಸುಮಾರು 7 ಲಕ್ಷ ಮಂದಿ ಸೇರುವ ಸಾಧ್ಯತೆ ಇದೆ. ಹಾಗಾಗಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿ.ಪರಮೇಶ್ವರ್ ಅವರು ಪೊಲೀಸರಿಗೆ ಸೂಚಿಸಿದ್ದಾರೆ. ಈ ಬಾರಿ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಭದ್ರತಾ ಕಾರ್ಯಕ್ರಮಗಳನ್ನು ಹೆಚ್ಚಿಸಲಾಗುವುದು. ಹೊಸ ವರ್ಷದಂದು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ. ಈ ಬಾರಿ ಯಾವುದೇ ನಿರ್ಬಂಧವಿಲ್ಲದೆ ಹೊಸ ವರ್ಷಾಚರಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.












Click it and Unblock the Notifications