• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರದ ಯೋಜನೆಗಳ ನೀಲನಕ್ಷೆ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ

By Manjunatha
|

ಬೆಂಗಳೂರು, ಜುಲೈ 02: ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಅಧಿವೇಶನವು ಜುಲೈ 02 ರಿಂದ 09ರ ವರೆಗೆ ನಡೆಯಲಿದೆ.

ಹದಿನೈದನೇ ವಿಧಾನಸಭೆಯಲ್ಲಿ ನೂರಕ್ಕೂ ಹೆಚ್ಚು ಹೊಸ ಶಾಸಕರು ಆಯ್ಕೆಯಾಗಿದ್ದಾರೆ. ಅನುಭವಿಗಳ ಹಾಗೂ ಹೊಸ ಮುಖಗಳ ಈ ವೇದಿಕೆಯಲ್ಲಿ ರಾಜ್ಯದ ಹಾಗೂ ರಾಜ್ಯದ ಜನತೆಯ ಶ್ರೇಯೋಭಿವೃದ್ಧಿಗೆ ಹೊಸ ಚಿಂತನೆ ಹಾಗೂ ಹೊಸ ಯೋಜನೆಗಳು ಹೊರ ಹೊಮ್ಮಲಿವೆ ಎಂಬ ವಿಶ್ವಾಸ ನನಗಿದೆ. ಅನುಭವಿಗಳ ಜ್ಞಾನ ಹೊಸ ಸದಸ್ಯರಿಗೆ ಮಾರ್ಗಸೂಚಿಯಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದರು.

ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನ : ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು

ಅನ್ನದಾತನ ಬದುಕನ್ನು ಹಸನುಗೊಳಿಸಲು ನಮ್ಮ ಸರ್ಕಾರವು ಮಾನವೀಯತೆಯ ಚೌಕಟ್ಟಿನಲ್ಲಿ ನಿಲುವು ನಿರ್ಧಾರಗಳನ್ನು ಕೈಗೊಳ್ಳಲಿದೆ. ನನ್ನ ಹೊಸ ಸರ್ಕಾರವು ಈ ಹಿಂದಿನ ಪರಿಣಾಮಕಾರಿ ಯೋಜನೆಗಳ ಜೊತೆಗೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕನ ಹಿತ ಕಾಪಾಡುವಂತಹ ಹೊಸ ದೃಷ್ಟಿ-ಹೊಸ ದಾರಿಯಲ್ಲಿ ಹೆಜ್ಜೆ ಇಡಲಿದೆ. ಸಮಾಜದ ಎಲ್ಲಾ ವರ್ಗ ಅದರಲ್ಲೂ ಅವಕಾಶ ವಂಚಿತರು, ಹಿಂದುಳಿದವರು, ಮಹಿಳೆಯರು, ಯುವಜನಾಂಗ ಹಾಗೂ ರೈತರ ಕಲ್ಯಾಣಕ್ಕೆ ಕಂಕಣಬದ್ಧವಾಗಿದೆ. ಹಳ್ಳಿ ಮತ್ತು ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಸರಿಸಮಾನವಾದ ಯೋಜನೆಗಳನ್ನು ರೂಪಿಸಲಾಗುವುದು ಎಂದರು.

ರೈತನ ರಕ್ಷಣೆ ಸರ್ಕಾರದ ಹೊಣೆ

ರೈತನ ರಕ್ಷಣೆ ಸರ್ಕಾರದ ಹೊಣೆ

ರೈತ, ನಮ್ಮ ನಾಡಿನ ಬೆನ್ನೆಲುಬು. ರೈತನ ರಕ್ಷಣೆಗೆ ನನ್ನ ಸರ್ಕಾರ ಸದಾ ಚಿಂತಿಸುತ್ತದೆ. ರೈತನನ್ನು ಆಧುನಿಕ ಕೃಷಿ ತಂತ್ರಜ್ಞಾನ ಬಳಕೆಗೆ ಸಜ್ಜುಗೊಳಿಸುವುದು ನನ್ನ ಸರ್ಕಾರದ ಆದ್ಯತೆಗಳಲ್ಲಿ ಪ್ರಮುಖವಾದದ್ದು. ಯುವ ಜನಾಂಗ ಉದ್ಯೋಗಕ್ಕಾಗಿ ಪರಿತಪಿಸುತ್ತಿರುವುದನ್ನು ನನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಿಕ್ಷಣದಲ್ಲಿ ವೃತ್ತಿ ಕೌಶಲ್ಯವನ್ನು ಅಳವಡಿಸಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲು ನನ್ನ ಸರ್ಕಾರ ಬದ್ಧವಾಗಿದೆ. ಶಿಕ್ಷಣವೇ ಶಕ್ತಿ ಎಂಬುದರ ಅರಿವು ನನ್ನ ಸರ್ಕಾರಕ್ಕಿದೆ. ಶಿಕ್ಷಣದಲ್ಲಿ ಕೌಶಲ್ಯ ಸಹಿತ ವೃತ್ತಿ ತರಬೇತಿಯನ್ನು ಕಡ್ಡಾಯಗೊಳಿಸಲು ನನ್ನ ಸರ್ಕಾರ ಚಿಂತಿಸುತ್ತಿದೆ. ಸರ್ವರಿಗೂ ಶಿಕ್ಷಣ, ಸರ್ವರಿಗೂ ಆರೋಗ್ಯ, ಸರ್ವರಿಗೂ ವಸತಿ ನನ್ನ ಸರ್ಕಾರದ ಆದ್ಯತಾ ವಲಯಗಳು ಎಂದು ಅವರು ಸರ್ಕಾರದ ಗುರಿಗಳನ್ನು ಹೇಳಿದರು.

ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ

ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ

ರಾಜ್ಯದ ರೈತರು ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂಬುದು ನನ್ನ ಸರ್ಕಾರದ ಬಯಕೆ. ನೀರು ಲಭ್ಯತೆಯನ್ನು ಆಧರಿಸಿ ಯಾವ ಋತುಮಾನಕ್ಕೆ ಯಾವ ಬೆಳೆ ಬೆಳೆಯಬಹುದು ಎಂಬುದರ ಕುರಿತು ಸರ್ಕಾರದ ಅಧಿಕಾರಿಗಳು ರೈತರ ಜಮೀನಿಗೆ ಬಂದು ಸಲಹೆ ನೀಡುತ್ತಾರೆ. ನಾವು ನಮ್ಮ ಕೃಷಿ ಪದ್ಧತಿ ಹಾಗೂ ಕೃಷಿ ನೀತಿಯಲ್ಲಿ ಬದಲಾವಣೆಗಳನ್ನು ತರಬೇಕಾಗಿದೆ. ಅನ್ನದಾತನಿಗೆ ಅಧಿಕ ಆದಾಯ ಹಾಗೂ ಹೆಚ್ಚು ಲಾಭ ದೊರಕಿಸಿಕೊಡಬೇಕಾದರೆ ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ರಫ್ತು ಆಧಾರಿತ ದೃಷ್ಟಿ ಹೊತ್ತು ಮಾರುಕಟ್ಟೆ, ಪೊಟ್ಟಣೀಕರಣ ಹಾಗೂ ಸಂಗ್ರಹಣಾ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ರೈತರಿಗೆ ನ್ಯಾಯಯುತ ಬೆಲೆ ಖಚಿತಪಡಿಸುವ ಮಾದರಿ ಹಾಗೂ ಪ್ರಾಯೋಗಿಕ ಯೋಜನೆಯನ್ನು ಇಡೀ ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಜಾರಿಗೆ ತರಲು ನನ್ನ ಸರ್ಕಾರ ಉತ್ಸುಕವಾಗಿದೆ. ಆತಂಕದ ದಿನಗಳು ಇನ್ನಿಲ್ಲ. ಧ್ವನಿ ಇಲ್ಲದ ರೈತರಿಗೆ ಧ್ವನಿಯಾಗಬೇಕು ಎಂಬುದು ನನ್ನ ಸರ್ಕಾರದ ಆಶಯ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದು ಈ ಸದನದ ಮೂಲಕ ರೈತ ಸಮುದಾಯಕ್ಕೆ ಮನವಿ ಮಾಡುತ್ತೇನೆ.

ಸರಹದ್ದಿಗೆ ಮುಖ್ಯಪೇದೆಯೇ ಹೊಣೆ

ಸರಹದ್ದಿಗೆ ಮುಖ್ಯಪೇದೆಯೇ ಹೊಣೆ

ನನ್ನ ಸರ್ಕಾರವು ರಾಜ್ಯದಲ್ಲಿ ತೃಪ್ತಿಕರವಾದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಂಡಿದೆ. ಎಲ್ಲಾ ಮುಖ್ಯಪೇದೆ ಮತ್ತು ಪೊಲೀಸ್ ಪೇದೆಗಳಿಗೆ ಅವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೊಂದು ಭೌಗೊಳಿಕ ಸರಹದ್ದು ನಿಗದಿಪಡಿಸಲಾಗಿದೆ. ಅವರು ತಮ್ಮ ಸರಹದ್ದುಗಳಿಗೆ ಸಂಪೂರ್ಣವಾಗಿ ಹೊಣೆಗಾರರಾಗಿರುತ್ತಾರೆ. ಮುಂದಿನ ವರ್ಷಗಳಲ್ಲಿ ಪೊಲೀಸ್ ತರಬೇತಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಿರುವುದು, ಮಾಹಿತಿ ತಂತ್ರಜ್ಞಾನ ಜಾಲವನ್ನು ಬಲಪಡಿಸಿರುವುದು ಮತ್ತು ಬ್ರಾಡ್‌ಬ್ಯಾಂಡ್ ಸಂಪರ್ಕಜಾಲದ ದಕ್ಷತೆಯನ್ನು ವೃದ್ಧಿಸಿರುವುದು ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ನೆರವಾಗಲಿದೆ. ನನ್ನ ಸರ್ಕಾರವು, ಮುಂದಿನ ಐದು ವರ್ಷಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲಿದೆ. ಎಲ್ಲಾ ಪೊಲೀಸ್ ಆಯುಕ್ತರ ಕಛೇರಿಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಯುದ್ಧದಲ್ಲಿ ಮಡಿದ ಸೈನಿಕರ ಅವಲಂಬಿತರಿಗೆ ಹಾಗೂ ಗಾಯಾಳು ಸೈನಿಕರಿಗೆ ಮನೆ ಮತ್ತು ಎಕ್ಸ್-ಗ್ರೇಷಿಯ ಪರಿಹಾರಕ್ಕೆ ಬದಲಾಗಿ ಆರ್ಥಿಕ ನೆರವನ್ನು ಹಂಚಿಕೆ ಮಾಡಲಾಗಿದೆ. ನಿವೃತ್ತಿಯ ನಂತರ ಪುನರ್ವಸತಿ ಒದಗಿಸುವುದಕ್ಕಾಗಿ, ರಾಜ್ಯದಲ್ಲಿನ ಎಲ್ಲಾ ಮಾಜಿ-ಸೈನಿಕರ ದತ್ತಾಂಶವನ್ನು ಕೌಶಲ್ಯಾಭಿವೃದ್ಧಿ ಇಲಾಖೆಯೊಂದಿಗೆ ಜೋಡಣೆ ಮಾಡಲಾಗುವುದು ಎಂದು ರಾಜ್ಯಪಾಲರು ಭರವಸೆ ನೀಡಿದರು.

ಹೈದರಾಬಾದ್-ಕರ್ನಾಟಕದಲ್ಲಿ ಉದ್ಯೋಗಾವಕಾಶ

ಹೈದರಾಬಾದ್-ಕರ್ನಾಟಕದಲ್ಲಿ ಉದ್ಯೋಗಾವಕಾಶ

ಭಾರತ ಸಂವಿಧಾನದ 371(ಜೆ) ಅನುಚ್ಛೇದದ ಅನುಸಾರ ಹೈದರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಸಾರ್ವಜನಿಕ ಉದ್ಯೋಗದಲ್ಲಿ ವಿವಿಧ ಪ್ರವರ್ಗದ ಹುದ್ದೆಗಳಿಗೆ ಮೀಸಲಾತಿಯನ್ನು ಒದಗಿಸಿದೆ. ನೇಮಕಾತಿ ಪ್ರಾಧಿಕಾರಗಳು ಹುದ್ದೆಗಳನ್ನು ಗುರುತಿಸಿ, ಅನ್ವಯವಾಗಬಹುದಾದ ಮೀಸಲಾತಿಯನ್ನು ಒದಗಿಸಿವೆ ಮತ್ತು ಪ್ರತ್ಯೇಕ ವೃಂದವನ್ನು ರಚಿಸಿವೆ. ನನ್ನ ಸರ್ಕಾರವು, ಹೈದರಾಬಾದ್-ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ. ನನ್ನ ಸರ್ಕಾರವು, ಮಾಹಿತಿ ಅಗತ್ಯತೆಗಳನ್ನು ಪೂರೈಸುವುದಕ್ಕೆ ವಿಶ್ವಾಸಾರ್ಹವಾದ ವ್ಯವಸ್ಥೆಯನ್ನು ಒದಗಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ವಿಸ್ತೃತ ಪ್ರದೇಶ ಸಂಪರ್ಕ (ಕೆಸ್ವಾನ್) ಜಾಲವನ್ನು ಅಭಿವೃದ್ಧಿಪಡಿಸಿದೆ. ಕೆಸ್ವಾನ್ ಮೂಲಕ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕುಗಳ ಮೂರು ಹಂತಗಳನ್ನು ಸಂಪರ್ಕಿಸಲಾಗಿದೆ ಮತ್ತು ಸಮಾನಾಂತರವಾಗಿ ಸರ್ಕಾರಿ ಇಲಾಖೆಗಳು ಮತ್ತು ಕಛೇರಿಗಳಿಗೆ ಜೋಡಿಸಲಾಗಿದೆ. ಜಿಲ್ಲೆ ಮತ್ತು ತಾಲ್ಲೂಕು ಹಂತಗಳಲ್ಲಿ ವಿಡಿಯೋ ಸಮಾವೇಶ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಮತ್ತು ಎರಡನೇ ವಿಡಿಯೋ ಸಮಾವೇಶ ಸೌಕರ್ಯವನ್ನು ಕಲ್ಪಿಸುವ ವ್ಯವಸ್ಥೆಯು ಪ್ರಗತಿಯಲ್ಲಿದೆ. ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ಇಲಾಖಾ ಸೇವೆಗಳನ್ನು ಒದಗಿಸುವಂಥ ಏಕೀಕೃತವಾದ ಒಂದೇ ಮೊಬೈಲ್ ವೇದಿಕೆಯ ಅಡಿಯಲ್ಲಿ ಲಭ್ಯವಾಗಿಸಲಾಗಿದೆ. ನಾಡಕಚೇರಿ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ಸೇವೆಗಳಿಗೆ ಡಿಜಿ ಲಾಕರ್ ಅನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

ಹಾಲಿನ ಸಂಗ್ರಹಣೆಯಲ್ಲಿ ದೇಶಕ್ಕೆ ಮಾದರಿ

ಹಾಲಿನ ಸಂಗ್ರಹಣೆಯಲ್ಲಿ ದೇಶಕ್ಕೆ ಮಾದರಿ

ಕರ್ನಾಟಕವು, ಹಾಲಿನ ಸಂಗ್ರಹಣೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನವನ್ನು, ಮೊಟ್ಟೆಗಳ ಉತ್ಪಾದನೆಯಲ್ಲಿ ಏಳನೇ ಸ್ಥಾನವನ್ನು ಮತ್ತು ಮಾಂಸದ ಉತ್ಪಾದನೆಯಲ್ಲಿ ಹನ್ನೊಂದನೇ ಸ್ಥಾನವನ್ನು ಹೊಂದಿದೆ. ನನ್ನ ಸರ್ಕಾರವು, ರಾಜ್ಯ ಮೇವು ಭದ್ರತಾ ನೀತಿ ಯನ್ನು ರೂಪಿಸಲಿದೆ ಮತ್ತು ಚರ್ಮ ಸಂಸ್ಕರಣೆ ಮತ್ತು ಹದ ಮಾಡುವ ಕೇಂದ್ರವನ್ನು ಸ್ಥಾಪಿಸಲಿದೆ. ನನ್ನ ಸರ್ಕಾರವು ಹೆಚ್ಚುವರಿ ನೀರಾವರಿ ಸಾಮರ್ಥ್ಯವನ್ನು ಕಲ್ಪಿಸಲು ನಿರ್ದಿಷ್ಟ ಯೋಜನೆಯನ್ನು ರೂಪಿಸಲಿದೆ. ಕಿರು ನೀರಾವರಿ ವ್ಯವಸ್ಥೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಕೆರೆಗಳನ್ನು ತುಂಬಿಸುವ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು. ಕಾಲುವೆಗಳಲ್ಲಿ ನೀರಿನ ಹರಿವನ್ನು ಮಾಪನ ಮಾಡಲು ಮೇಲ್ವಿಚಾರಣಾ ನಿಯಂತ್ರಣ ಮತ್ತು ದತ್ತಾಂಶ ಆರ್ಜನೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು. ನನ್ನ ಸರ್ಕಾರವು, ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. 2015 ರ ಭಾರತ ಅರಣ್ಯ ಸಮೀಕ್ಷಾ ವರದಿಯ ಪ್ರಕಾರ ರಾಜ್ಯದಲ್ಲಿ ಅರಣ್ಯ ವ್ಯಾಪ್ತಿಯು 36,449 ಚದರ ಕಿಲೋಮೀಟರ್‌ಗಳಿದ್ದು, 2017 ರ ವರದಿಯ ಪ್ರಕಾರ 27,550 ಚದರ ಕಿಲೋಮೀಟರ್‌ಗಳಷ್ಟಾಗಿದೆ. ಹಾಗಾಗಿ, 1,101 ಚದರ ಕಿಲೋಮೀಟರ್‌ಗಳಷ್ಟು ಅರಣ್ಯ ವ್ಯಾಪ್ತಿಯು ದಾಖಲೆಯ ಮಟ್ಟದಲ್ಲಿ ವಿಸ್ತರಣೆಯಾಗಿದೆ.

ವನ್ಯ ಜೀವಿ ರಕ್ಷಣೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ

ವನ್ಯ ಜೀವಿ ರಕ್ಷಣೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ

ಕರ್ನಾಟಕವು ಸಂರಕ್ಷಿತ ಪ್ರದೇಶದ ನಿರ್ವಹಣೆಯಲ್ಲಿ ದೇಶದಲ್ಲಿಯೇ ಅತ್ಯಂತ ಯಶಸ್ವಿ ರಾಜ್ಯವಾಗಿರುವುದು ತಿಳಿದಿರುವ ಸಂಗತಿಯಾಗಿದ್ದು, ಹಾಗಾಗಿ ಹುಲಿ, ಆನೆ, ಚಿರತೆ ಮತ್ತು ಸಿಂಗಲೀಕಗಳ ಸಂಖ್ಯೆಯ ವಿಷಯದಲ್ಲಿ ಎಲ್ಲಾ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಮಾನವ-ವನ್ಯ ಜೀವಿಗಳ ನಡುವಿನ ಸಂಘರ್ಷವನ್ನು ತಗ್ಗಿಸುವ ಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಗಿದೆ ಮತ್ತು ಬೆಳೆ ಹಾನಿಗಾಗಿ ರೈತರುಗಳಿಗೆ ಪಾವತಿಸಲಾಗುವ ಎಕ್ಸ್‌ಗ್ರೇಷಿಯಾ ಪರಿಹಾರವನ್ನು ದುಪ್ಪಟ್ಟುಗೊಳಿಸಲಾಗಿದೆ. ನನ್ನ ಸರ್ಕಾರವು, ನದಿಗಳ ಜಲಾನಯನದ ಅಚ್ಚುಕಟ್ಟು ಪ್ರದೇಶಗಳನ್ನು ಶುದ್ದೀಕರಿಸಿ, ನದಿಯ ದಡಗಳ ಮೇಲೆ ದಟ್ಟವಾದ ಮರಗಳ ತೋಪುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ರಾಷ್ಟ್ರೀಯ ಭೂ ಆವೃತ ವಾಯು ಗುಣಮಟ್ಟ ಮೇಲ್ವಿಚಾರಣೆ ಯೋಜನೆಯ ಅಡಿಯಲ್ಲಿ ನನ್ನ ಸರ್ಕಾರವು ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಪರಿಶೀಲನಾ ಕೇಂದ್ರಗಳನ್ನು ಸ್ಥಾಪಿಸಿದೆ. ವಿವಿಧ ನಗರಗಳಲ್ಲಿ ನಿರಂತರ ವಾಯು ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಭೂ ಆವೃತ ವಾಯು ಗುಣಮಟ್ಟಕ್ಕೆ ಸಂಬಂಧಿಸಿದಂತೆ ವಾಹನಗಳ ವಾಯು ಮಾಲಿನ್ಯವನ್ನು ಮೇಲ್ವಿಚಾರಣೆ ಮಾಡಲು ಸಂಚಾರಿ ವಾಹನಗಳನ್ನು ಖರೀದಿಸಿದೆ. ಮಾಲಿನ್ಯಗೊಂಡ ನದಿ ತೀರಗಳಲ್ಲಿ ಹಂತ ಹಂತವಾಗಿ ನೀರಿನ ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸರಬರಾಜು, ಮಾರಾಟ ಮತ್ತು ಬಳಕೆಯನ್ನು ನನ್ನ ಸರ್ಕಾರವು ನಿಷೇಧಿಸಿದೆ. ಇದನ್ನು ರಾಜ್ಯದಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದರು.

ಪರಿಶಿಷ್ಟ ಜಾತಿ, ಪಂಗಡದ ಏಳಿಗೆಗೆ ಕ್ರಮ

ಪರಿಶಿಷ್ಟ ಜಾತಿ, ಪಂಗಡದ ಏಳಿಗೆಗೆ ಕ್ರಮ

ನನ್ನ ಸರ್ಕಾರವು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಗಳ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ವಸತಿ ಶಾಲೆಗಳು ಮತ್ತು ವಸತಿ ನಿಲಯಗಳ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸಲು ಉದ್ದೇಶಿಸಿದೆ. ನನ್ನ ಸರ್ಕಾರವು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ, ಭೂ ಖರೀದಿ ಮತ್ತು ಸ್ವ-ಉದ್ಯೋಗಕ್ಕಾಗಿ ನೆರವು ನೀಡುವಂತಹ ಹಲವಾರು ಆರ್ಥಿಕಾಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಕ್ಕೆ ಮತ್ತು ನಿರುದ್ಯೋಗಿ ಯುವ ಜನತೆಗೆ ತರಬೇತಿ ನೀಡುವುದಕ್ಕೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅಲ್ಲದೇ, ಬಂಜಾರ ಸಮುದಾಯಕ್ಕೆ ಆರ್ಥಿಕ ಕಾರ್ಯಕ್ರಮಗಳನ್ನು ಸಹ ಅನುಷ್ಠಾನಗೊಳಿಸುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನನ್ನ ಸರ್ಕಾರವು ವಸತಿನಿಲಯಗಳನ್ನು ನಿರ್ಮಾಣ ಮಾಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪೂರ್ವಭಾವಿ ತರಬೇತಿ ನೀಡಲಾಗುವುದು.

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕ್ರಮ

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕ್ರಮ

ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲಸೌಕರ್ಯವನ್ನು ಕಲ್ಪಿಸುವುದಕ್ಕಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯ ಹಜ್ ಸಮಿತಿಯ ಸಹಾಯ ಮತ್ತು ತರಬೇತಿಯೊಂದಿಗೆ ಪ್ರತಿ ವರ್ಷ ಹಜ್ ಯಾತ್ರೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತು ಮತ್ತು ಮಹಿಳಾ ಪ್ರತಿಷ್ಠಾನವು ಮುಸಲ್ಮಾನ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ. ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳ ಸಮಗ್ರ ಬೆಳವಣಿಗೆ ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕತೆಯನ್ನು ಹೆಚ್ಚಿಸುವ ಯೋಜನೆಯನ್ನು ನನ್ನ ಸರ್ಕಾರವು ಖಾತರಿಪಡಿಸುತ್ತದೆ. ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳನ್ನು ರಚಿಸಿ ನೋಂದಣಿ ಮಾಡಲಾಗಿದೆ. ವಿಶೇಷ ಪಾಲನಾ ಯೋಜನೆಯ ಅಡಿಯಲ್ಲಿ ಹ್ಯೂಮನ್ ಇಮ್ಯುನೋಡಿಫಿಷಿಯೆನ್ಸಿ ವೈರಾಣು ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ರಾಜ್ಯದ ಪ್ರಮುಖ ಆಸ್ಪತ್ರೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದೆ.

ಶಿಕ್ಷಣ ಕ್ಷೇತ್ರ ಸುಧಾರಣೆಗೆ ಕ್ರಮ

ಶಿಕ್ಷಣ ಕ್ಷೇತ್ರ ಸುಧಾರಣೆಗೆ ಕ್ರಮ

ವಿದ್ಯಾರ್ಥಿಗಳ ಕಲಿಕಾ ಮಟ್ಟ ಹಾಗೂ ಕಲಿಕಾ ದೋಷಗಳನ್ನು ಪತ್ತೆ ಹಚ್ಚಲು ರಾಜ್ಯ ಸಾಧನಾ ಸಮೀಕ್ಷೆಯನ್ನು ನಡೆಸಲಾಗಿದೆ; ಹಾಗೂ ಸೂಕ್ತ ಸುಧಾರಣಾ ಬೋಧನೆಯ ತರಗತಿಗಳನ್ನು ಪ್ರಾರಂಭಿಸಲಾಗಿದೆ. ನನ್ನ ಸರ್ಕಾರವು, ಶಾಲಾ ಶಿಕ್ಷಣದ ಗುಣಮಟ್ಟದ ಅಭಿವೃದ್ಧಿಗಾಗಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಪಠ್ಯೇತರ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ವಿಜ್ಞಾನ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಹತ್ತನೇ ತರಗತಿ ಮತ್ತು ಪದವಿ ಪೂರ್ವ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಲ್ಯಾಪ್‌ಟಾಪ್ ವಿತರಣೆ ಮಾಡಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಹಾಲನ್ನು ನೀಡಲಾಗುತ್ತಿದೆ. ನನ್ನ ಸರ್ಕಾರವು, ರಾಜ್ಯವನ್ನು 2020ರ ಒಳಗಾಗಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಮುಕ್ತ ರಾಜ್ಯ ಎಂದು ಘೋಷಿಸುವುದಕ್ಕಾಗಿ ಪರಿಷ್ಕೃತ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಂಡಿದೆ. ನಿರ್ದಿಷ್ಟ ವರ್ಗದ ಅಸಂಘಟಿತ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ಭವಿಷ್ಯನಿಧಿ ಸೌಲಭ್ಯ ಒದಗಿಸಲು ಯೋಜಿಸಿದೆ.

ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ

ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ

ನನ್ನ ಸರ್ಕಾರವು, 2018 ನೇ ಸಾಲಿನಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಿದೆ. ಉತ್ತಮ ಗುಣಮಟ್ಟದ ಸಮಗ್ರ ಪ್ರಾಥಮಿಕ ಆರೋಗ್ಯ ಸೇವಾ ಕೇಂದ್ರಗಳ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಪ್ರಸ್ತುತ ಇರುವ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಆರೋಗ್ಯ ಮತ್ತು ಕಲ್ಯಾಣ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮುಖ್ಯವಾಗಿ ಸಂತಾನೋತ್ಪತ್ತಿ, ಮಕ್ಕಳ ಆರೋಗ್ಯ ಮತ್ತು ರೋಗಗಳ ನಿಯಂತ್ರಣ ಹಾಗೂ ಸಮುದಾಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಾಗುವುದು. ಮುಂದಿನ ಏಳು ವರ್ಷಗಳಲ್ಲಿ ತಾಯಿ ಮರಣ ಪ್ರಮಾಣ ಮತ್ತು ಶಿಶು ಮರಣ ಪ್ರಮಾಣವನ್ನು ದೇಶದಲ್ಲಿಯೇ ಅತ್ಯಂತ ಕನಿಷ್ಟ ಮಟ್ಟಕ್ಕೆ ತಗ್ಗಿಸುವ ಗುರಿಯನ್ನು ಹೊಂದಲಾಗಿದೆ. ನನ್ನ ಸರ್ಕಾರವು, ಎಲ್ಲಾ ಪ್ರಮುಖ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳನ್ನು ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಗಳ ರಾಷ್ಟ್ರೀಯ ಮಾನ್ಯತಾ ಮಂಡಳಿ ಅಥವಾ ರಾಷ್ಟ್ರೀಯ ಗುಣಮಟ್ಟ ಭರವಸೆ ಸಮೀಕ್ಷಾ ಪ್ರಮಾಣೀಕರಣದ ಅಡಿಯಲ್ಲಿ ತರಲು ಯೋಜಿಸಿದೆ. ಮಾನಸಿಕ ರೋಗಿಗಳ ಹಕ್ಕು ರಕ್ಷಣೆ ಮತ್ತು ಚಿಕಿತ್ಸೆಗಾಗಿ ಮಾನಸಿಕ ಆರೋಗ್ಯ ಮತ್ತು ಸೇವಾ ಕಾರ್ಯಕ್ರಮಗಳನ್ನು ಪುನಶ್ಚೇತನಗೊಳಿಸಲಾಗುವುದು.

ಬೆಂಗಳೂರು ಅಭಿವೃದ್ಧಿಗೆ ಒತ್ತು

ಬೆಂಗಳೂರು ಅಭಿವೃದ್ಧಿಗೆ ಒತ್ತು

ಬೆಂಗಳೂರು ಇಂದು ವಿಶ್ವ ಮಾನ್ಯತೆ ಪಡೆದಿರುವ ನಗರ. ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿಯಾಗಿರುವ ಬೆಂಗಳೂರು ಜ್ಞಾನ ನಗರಿಯೂ ಹೌದು. ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಬೆಂಗಳೂರಿನ ಹತ್ತಾರು ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿವೆ. ಕರ್ನಾಟಕ, ಅದರಲ್ಲಿಯೂ ಬೆಂಗಳೂರಿನ ವಿಜ್ಞಾನಿಗಳು ಹಾಗೂ ತಂತ್ರಜ್ಞಾನಿಗಳು ವಿಶ್ವದೆಲ್ಲೆಡೆ ಪಸರಿಸಿದ್ದಾರೆ. ಈ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲು ನನ್ನ ಸರ್ಕಾರ ಬದ್ಧವಾಗಿದೆ. ಬೆಂಗಳೂರಿನಲ್ಲಿ ಮೂಲ ಸೌಲಭ್ಯಗಳ ಕೊರತೆಯ ಅರಿವು ನನ್ನ ಸರ್ಕಾರಕ್ಕೆ ಇದೆ. ಸಂಚಾರ ದಟ್ಟಣೆ ನಿಯಂತ್ರಣ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಯೋಜನೆಗಳನ್ನು ಬೆಂಗಳೂರಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ನನ್ನ ಸರ್ಕಾರ ಸಮಗ್ರ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು 2021ರ ಮಾರ್ಚ್ ಹೊತ್ತಿಗೆ 118 ಕಿಲೋಮೀಟರ್ ಉದ್ದದ ಮಾರ್ಗವನ್ನು ಪೂರ್ಣಗೊಳಿಸಲಿದೆ. ಪ್ರಸ್ತುತ ಒಂದು ದಿನಕ್ಕೆ ಸರಾಸರಿ 3.6 ಲಕ್ಷ ಪ್ರಯಾಣಿಕರು ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಭವಿಷ್ಯದಲ್ಲಿ ಈ ಸಂಖ್ಯೆಯು ಸುಮಾರು 20 ಲಕ್ಷಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ

ಕರ್ನಾಟಕವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ವಿಶ್ವದ ನಾಯಕತ್ವವನ್ನು ವಹಿಸಿಕೊಂಡಿದೆ. ವಿಶ್ವದ ಡಿಜಿಟಲ್ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ರಾಜ್ಯವು ಮಾಹಿತಿ ತಂತ್ರಜ್ಞಾನ ರಫ್ತಿನ ಮೂಲಕ ಸುಮಾರು 3 ಲಕ್ಷ ಕೋಟಿ ರೂಪಾಯಿ ಹಾಗೂ ಭಾರತದ ಜೈವಿಕ ಉದ್ಯಮ ಆದಾಯದ ಶೇಕಡ ೩೫ ಕ್ಕಿಂತ ಹೆಚ್ಚಿನ ಕೊಡುಗೆಯನ್ನು ನೀಡಿದೆ. 7,000 ನವೋದ್ಯಮಗಳ ಸ್ಥಾಪನೆಯ ಮೂಲಕ ಬೆಂಗಳೂರು ನವೋದ್ಯಮದ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉದ್ದೇಶಿತ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವು ಮೊದಲನೇ ಸ್ಥಾನದಲ್ಲಿದೆ. ನನ್ನ ಸರ್ಕಾರವು ಬಂಡವಾಳವನ್ನು ಆಕರ್ಷಿಸುವ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಕರ್ನಾಟಕ ಕೈಗಾರಿಕಾ ನೀತಿಯನ್ನು ಅನುಷ್ಠಾನಗೊಳಿಸುತ್ತಿದೆ. ಕರ್ನಾಟಕವು ದೇಶೀಯ ಪ್ರವಾಸಿಗರ ಆಗಮನದಲ್ಲಿ ದೇಶದಲ್ಲಿಯೇ ಐದನೇ ಸ್ಥಾನ ಹಾಗೂ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಹನ್ನೊಂದನೇ ಸ್ಥಾನವನ್ನು ಹೊಂದಿದೆ. ನನ್ನ ಸರ್ಕಾರದ ಪ್ರವಾಸೋದ್ಯಮ ನೀತಿಯನ್ವಯ ಭಾರತದ ಪ್ರವಾಸಿತಾಣಗಳ ಪೈಕಿ ಕರ್ನಾಟಕವನ್ನು ಮೊದಲೆರಡರ ಸ್ಥಾನಕ್ಕೆ ತರಲು ಹಾಗೂ ವಿಶ್ವದ ಪ್ರವಾಸಿ ತಾಣಗಳ ಪೈಕಿ ಐವತ್ತನೇ ಸ್ಥಾನದೊಳಗೆ ತರುವ ಗುರಿ ಹೊಂದಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka governor Vajubhai Vala address joint session today. He says Government planing to develop Karnataka in all sectors. He also request farmers to be patient government ready to help them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more