ರಾಜ್ಯ ಅಬಕಾರಿ ಹಗರಣದ ಆಡಿಯೋ ಬಿಡುಗಡೆ, 50% ರಿಯಾಯಿತಿ ಭ್ರಷ್ಟಾಚಾರ: ಆರ್.ಅಶೋಕ್ ಹೇಳಿದ್ದೇನು?
ಬೆಂಗಳೂರು, ನವೆಂಬರ್ 28: ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯು ಅಧಿಕಾರಿಗಳೇ ಸಚಿವರಿಗೆ ಹಣ ನೀಡಬೇಕೆಂದು ಲಂಚ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಶೇಕಡಾ 50ರಷ್ಟು ರಿಯಾಯಿತಿ ವಿಚಾರವಾಗಿ ಲಂಚ ಕೇಳಿದ್ದ ಧ್ವನಿ ಮುದ್ರಣ ಬಿಡುಗಡೆ ಆಗಿದೆ. ಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಅವರು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಆರ್.ಅಶೋಕ್ ಅವರು, ರಾಜ್ಯ ಅಬಕಾರಿ ಇಲಾಖೆಯಲ್ಲಿ ಪರವಾನಗಿಗೆ ಅರ್ಜಿ ಸಲ್ಲಿಸಿದಾಗ ಲಂಚ ಕೇಳಿದ ಧ್ವನಿಮುದ್ರಣ ಈಗ ಬಿಡುಗಡೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತ ಆಗಿರುವುದರಿಂದ 50% ರಿಯಾಯಿತಿ ಎಂದು ಅಧಿಕಾರಿ ಹೇಳಿದ್ದಾರೆ. ಇದು ಈಗ ಜಗಜ್ಜಾಹೀರಾಗಿದ್ದು, ಈ ಭ್ರಷ್ಟಾಚಾರದ ವಿರುದ್ಧವೂ ಬಿಜೆಪಿ ಹೋರಾಟ ಮಾಡಲಿದೆ.

ಇಲಾಖೆ ವ್ಯಾಪ್ತಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಇಷ್ಟು ಸಾಕ್ಷಿ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ಪುಸ್ತಕ ಎಂದು ಹೇಳುತ್ತಿದ್ದಾರೆ. ದಾಖಲೆ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಇತ್ತೀಚೆಗೆ ಅಬಕಾರಿ ಇಲಾಖೆ ಅಧಿಕಾರಿಗಳೇ ಸಚಿವರಿಗೆ ಹಣ ನೀಡಬೇಕೆಂದು ಲಂಚ ಕೇಳುತ್ತಿದ್ದಾರೆ. ಈ ಕಿರುಕುಳದಿಂದ ಬೇಸತ್ತಿದ್ದೇವೆ. ಈ ಸಂಬಂಧ ರಾಜ್ಯಾದ್ಯಂತ ಮದ್ಯ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘಟ ಹೇಳಿತ್ತು. ಕೊನೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದ ಬಳಿಕ ಸಂಘವು ನಾವು ಯಾರ ವಿರುದ್ಧ ದೂರು ಕೊಟ್ಟಿಲ್ಲ ಎಂದು ಹೇಳಿ, ಪ್ರತಿಭಟನೆ ವಾಪಾಸ್ ಪಡೆದಿತ್ತು. ಇದೀಗ ಆರ್.ಅಶೋಕ್ ಅವರು ಇದೇ ವಿಚಾರ ಪ್ರಸ್ತಾಪಿಸಿ ಧ್ವನಿ ಮುದ್ರಣ ಕುರಿತು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ನಾನೂ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಶಾಸಕರು ಮಾತನಾಡಲಿದ್ದೇವೆ ಎಂದರು.

ಸದನದಲ್ಲಿ ಅಭಿವೃದ್ಧಿ ಬಗ್ಗೆ ಶಾಸಕರೇ ಪ್ರಸ್ತಾಪಿಸುತ್ತಾರೆ
ಕಾಂಗ್ರೆಸ್ ಸರ್ಕಾರ ಹಣ ಇದೆ ಎಂದು ಹೇಳುತ್ತಲೇ ಇದೆ. ಆದರೂ ಉತ್ತರ ಕರ್ನಾಟಕಕ್ಕೆ ಯಾವುದೇ ಅನುದಾನ ನೀಡಿಲ್ಲ. ಎಷ್ಟು ಹೂಡಿಕೆ ಬಂದಿದೆ, ಎಷ್ಟು ಬೆಳೆಹಾನಿ ಪರಿಹಾರ ಸಿಕ್ಕಿದೆ, ನೀರಾವರಿ ಯೋಜನೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಬಗ್ಗೆ ಉತ್ತರ ಕರ್ನಾಟಕದ ಬಿಜೆಪಿ ಶಾಸಕರು ಚರ್ಚೆ ಮಾಡಿದ್ದಾರೆ.
ನಂಜುಂಡಪ್ಪ ವರದಿಗೆ ಚಾಲನೆ ನೀಡುತ್ತೇವೆ ಎಂದು ಸರ್ಕಾರ ಹೇಳಿ ವರ್ಷವಾಗುತ್ತಾ ಬಂದಿದೆ ಎಂಬುದು ಕೂಡ ಚರ್ಚೆಯಾಗಿದೆ. ಇದನ್ನು ಸದನದಲ್ಲಿ ಪ್ರಶ್ನಿಸುವ, ಮಾತನಾಡುವ ಬಗ್ಗೆ ಶಾಸಕರು ಹೇಳಿದ್ದಾರೆ. ಕಾಂಗ್ರೆಸ್ ಹೇಳಿದ್ದು ಏನು, ಉತ್ತರ ಕರ್ನಾಟಕಕ್ಕೆ ನೀಡಿದ್ದೇನು? ಎಂಬ ಬಗ್ಗೆ ಶಾಸಕರೇ ಮಾತನಾಡಲಿದ್ದಾರೆ ಎಂದು ವಿವರಿಸಿದರು.
ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಆರ್.ಅಶೋಕ್
ಸಾರಿಗೆ ಇಲಾಖೆ ನೌಕರರು ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಬಕಾರಿ ಇಲಾಖೆ ಗುತ್ತಿಗೆದಾರರು ಕೂಡ ಬಂದ್ ಮಾಡಲು ಮುಂದಾಗಿದ್ದರು. ಈ ನಡುವೆ ರಸ್ತೆ ಅಭಿವೃದ್ಧಿ, ಆಸ್ಪತ್ರೆ ನಿರ್ಮಾಣ, ಬೆಳೆಹಾನಿ ಪರಿಹಾರ ಯಾವುದಕ್ಕೂ ಹಣ ಇಲ್ಲ. ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡಲು ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿತ್ತು. ಆದರೆ ಈವರೆಗೆ ಯಾವುದೇ ಯೋಜನೆಯ ಕಾರ್ಯಾದೇಶವಾಗಿಲ್ಲ ಎಂದು ದೂರಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಏರಿಕೆಯಾಗಿದೆ. ಆಸ್ಪತ್ರೆಗಳೇ ವಸೂಲಿ ಕೇಂದ್ರಗಳಾಗಿವೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಳಂತಿಯರ ಸಾವಿನ ಕುರಿತು ವರದಿ ತರಿಸಿಕೊಳ್ಳುತ್ತೇನೆ ಎಂದು ಹೇಳಿದರು.












Click it and Unblock the Notifications