ಗೆದ್ದು ಸೋತ ಸೌಮ್ಯ ರೆಡ್ಡಿ; ಕಣ್ಣೀರು ಹಾಕಿ ಎಣಿಕಾ ಕೇಂದ್ರದಿಂದ ಹೊರ ಬಂದ ಸೌಮ್ಯ ರೆಡ್ಡಿ
ಬೆಂಗಳೂರು, ಮೇ 14: ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಗೊಂದಲಕ್ಕೆ ಚುನಾವಣಾಧಿಕಾರಿಗಳು ಶನಿವಾರ ಮಧ್ಯರಾತ್ರಿ ತೆರೆ ಎಳೆದಿದ್ದು, ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು ಗೆಲುವು ಸಾಧಿಸಿದ್ದಾರೆ. ಗೆದ್ದು ಸೋತ ಸೌಮ್ಯ ರೆಡ್ಡಿ ಬೇಸರಗೊಂಡ ಮತ ಎಣಿಕಾ ಕೇಂದ್ರದಿಂದ ಕಣ್ಣೀರು ಹಾಕುತ್ತಾ ಹೊರ ಬಂದಿದ್ದಾರೆ.
ಜಯನಗರದ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಗೊಂದಲದ ಹಿನ್ನೆಲೆಯಲ್ಲಿಎಸ್‌ಎಸ್‌ಎಂಆರ್‌ವಿ ಕಾಲೇಜಿನ ಮತ ಎಣಿಕೆ ಕೇಂದ್ರದ ಬಳಿ ಶನಿವಾರ ತಡರಾತ್ರಿಯವರೆಗೂ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಮತ ಎಣಿಕೆ ಕೇಂದ್ರ ಬಳಿ ಜಮಾಯಿಸಿ, ಪರಸ್ಪರ ತಮ್ಮ ತಮ್ಮ ಅಭ್ಯರ್ಥಿಗಳ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಇನ್ನೂ ಮೊದಲ ಸುತ್ತಿನಿಂದಲೂ ಜಯನಗರ ಕ್ಷೇತ್ರದ ಮತ ಎಣಿಕೆ ಹಾವು-ಏಣಿಯಾಟ ನಡೆಯುತ್ತಲೇ ಇತ್ತು. 16 ಸುತ್ತಿನ ಮತ ಎಣಿಕೆ ಕಾರ್ಯ ಮುಗಿದ ಬಳಿಕ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಅವರು 294 ಮತಗಳಿಂದ ಮುನ್ನಡೆ ಸಾಧಿಸಿರುವುದನ್ನು ಚುನಾವಣಾ ಫಲಿತಾಂಶದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು. ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು ಅಂಚೆ ಮತಗಳ ಮರು ಎಣಿಕೆಗೆ ಒತ್ತಾಯಿಸಿದರು. ಹೀಗಾಗಿ ತಡರಾತ್ರಿಯವರೆಗೂ ಒಟ್ಟು ಮೂರು ಬಾರಿ ಮರು ಎಣಿಕೆ ಮಾಡಲಾಯಿತು.
ಇತ್ತ ಮೊದಲ ಹಾಗೂ ಎರಡನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಯವರು ಮುನ್ನಡೆಯನ್ನ ಸಾಧಿಸಿದ್ದರು. ಇನ್ನೂ ಕೊನೆಯದಾಗಿ ಮರು ಎಣಿಕೆಯಲ್ಲಿ ಮೊದಲಿಗೆ ತಿರಸ್ಕೃತಗೊಳಿಸಿದ್ದ 200 ಅಂಚೆ ಮತಗಳನ್ನು ಸಿಂಧುಗೊಳಿಸಿದ್ದರಿಂದ ಬಿಜೆಪಿ ಅಭ್ಯರ್ಥಿ 16 ಮತಗಳ ಮುನ್ನಡೆಯನ್ನ ಸಾಧಿಸಿದರು. ಈ ವೇಳೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಗಳು ಫಲಿತಾಂಶವನ್ನ ಪ್ರಕಟಿಸಲಿಲ್ಲ.
ಇನ್ನೂ ಜಿಲ್ಲಾ ಚುನಾವಣಾಧಿಕಾರಿಯೂ ತುಷಾರ್ ಗಿರಿನಾಥ್ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ಇವಿಎಂ ಮತ್ತು ಅಂಚೆ ಮತಗಳನ್ನು ಪರಿಶೀಲಿಸಿ, ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು 16 ಮತಗಳಿಂದ ಜಯ ಗಳಿಸಿದ್ದಾರೆಂದು ಘೋಷಿಸಿದರು.












Click it and Unblock the Notifications