ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ರತ್ನಪ್ರಭಾ ಅಧಿಕಾರ ಸ್ವೀಕಾರ
ಬೆಂಗಳೂರು, ನವೆಂಬರ್ 30: ಕರ್ನಾಟಕ ಸರ್ಕಾರದ ನೂತನ ಮುಖ್ಯಕಾರ್ಯದರ್ಶಿಯಾಗಿ ಕೆ. ರತ್ನಪ್ರಭಾ ಅವರು ಇಂದು (ಗುರುವಾರ) ಅಧಿಕಾರ ಸ್ವೀಕರಿಸಿದರು.
1981ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಶ್ರೀಮತಿ ಕೆ. ರತ್ನಪ್ರಭಾ ಅವರು ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ರಾಜ್ಯದ ಮೂರನೇ ಮಹಿಳಾ ಮುಖ್ಯಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸುಭಾಷ್ ಚಂದ್ರ ಕುಂಟಿಯಾ ಅವರ ಅಧಿಕಾರವಧಿ ಡಿಸೆಂಬರ್ 30 ಕೊನೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಭಾಷ್ ಚಂದ್ರ ಕುಂಟಿಯಾ ಅವರು ರತ್ನಪ್ರಭಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
2000ರಲ್ಲಿ ತೆರೆಸಾ ಭಟ್ಟಾಚಾರ, 2006ರಲ್ಲಿ ಮಾಲತಿದಾಸ್ ಎನ್ನುವರ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಮೂರನೇ ಮಹಿಳಾ ಮುಖ್ಯಕಾರ್ಯದರ್ಶಿಯಾಗಿ ರತ್ನಪ್ರಭಾ ಅವರು ಅಧಿಕಾರ ವಹಿಸಿಕೊಂಡರು.
ಮುಖ್ಯಕಾರ್ಯದರ್ಶಿ ರೇಸ್ ನಲ್ಲಿ ಪಟ್ಟನಾಯಕ್, ವಿಜಯಭಾಸ್ಕರ್ ಅವರ ಹೆಸರುಗಳು ಕೇಳಿಬಂದಿದ್ದವು. ಕೊನೆಗಳಿಗೆಯಲ್ಲಿ ರಾಜ್ಯ ಸರ್ಕಾರ ರತ್ನಪ್ರಭಾ ಅವರನ್ನು ಮುಖ್ಯಕಾರ್ಯದರ್ಶಿಯಾಗಿ ಮತ್ತು 1983ರ ಬ್ಯಾಚ್ ನ ಐಎಎಸ್ ಅಧಿಕಾರಿ T.M ವಿಜಯ್ ಭಾಸ್ಕರ್ ಅವರನ್ನು ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ನೇಮಕ ಮಾಡಿದೆ.












Click it and Unblock the Notifications